Published
4 weeks agoon
By
Akkare Newsಅಪಾರ ಪ್ರಮಾಣದ ಚಿನ್ನವನ್ನು ಅಕ್ರಮವಾಗಿ ಸಾಗಿಸಿ ಬಂಧಿತಳಾಗಿರುವ ನಟಿ ರನ್ಯಾ ರಾವ್‌ಗೆ ರಾಜ್ಯದ ಪ್ರಭಾವಿ ರಾಜಕೀಯ ನಾಯಕರ ನಂಟಿರುವ ಆರೋಪದ ಬೆನ್ನಲ್ಲೇ 2023ರಲ್ಲಿ ಕೆಐಎಡಿಬಿಯಿಂದ 12 ಎಕರೆ ಜಮೀನು ಮಂಜೂರು ಆಗಿರುವುದು ಬೆಳಕಿಗೆ ಬಂದಿದೆ.
ಡಿಆರ್‌ಐ ಅಧಿಕಾರಿಗಳ ವಶದಲ್ಲಿರುವ ನಟಿ ರನ್ಯಾ ವಿಚಾರಣೆಯಲ್ಲಿ ಕೆಲವೊಂದು ಸ್ಫೋಟಕ ಮಾಹಿತಿ ಹೊರಬರುತ್ತಿದ್ದು, ಈಕೆ ನಿರ್ದೇಶಕಿ ಆಗಿರುವ ಕ್ಸಿರೋಡಾ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ಸರಕಾರದಿಂದಲೇ 12 ಎಕರೆ ಜಾಗ ಮುಂಜೂರು ಮಾಡಲಾಗಿದೆ. ರನ್ಯಾ 2022ರ ಎಪ್ರಿಲ್‌ನಲ್ಲಿ ಬೆಂಗಳೂರಿನಲ್ಲಿ ಕಂಪೆನಿ ಸ್ಥಾಪನೆ ಮಾಡಿದ್ದು, ತಾನು ಹಾಗೂ ಸಹೋದರ ರಷಬ್ ನಿರ್ದೇಶಕರಾಗಿದ್ದರು. ಈ ಕಂಪೆನಿ ಹೆಸರಿನಲ್ಲಿ ತುಮಕೂರಿನ ಶಿರಾ ಕೈಗಾರಿಕಾ ಪ್ರದೇಶದಲ್ಲಿ ಸ್ಟೀಲ್, ಟಿಎಟಿ ಬಾರ್ ಉತ್ಪಾದನೆ ಘಟಕ ತೆರೆಯಲು ಜಾಗ ನೀಡುವಂತೆ ಸರಕಾರವನ್ನು ಕೋರಿದ್ದರು. ಆದರೆ ಅರ್ಜಿ ಹಾಕಿದ ಕೇವಲ 10 ತಿಂಗಳಲ್ಲೇ ತುಮಕೂರಿನ ಶಿರಾ ಕೈಗಾರಿಕಾ ಪ್ರದೇಶದಲ್ಲಿ ಬರೋಬರಿ ನೂರಾರು ಕೋಟಿ ರೂ. ಮೌಲ್ಯದ 12 ಎಕರೆ ಜಮೀನನ್ನು ಕೆಐಎಡಿಬಿ ಮಂಜೂರು ಮಾಡಿತ್ತು.
ಹೀಗಾಗಿ ಪ್ರಭಾವಿ ರಾಜಕಾರಣಿಗಳ ಸಂಪರ್ಕ ಇಲ್ಲದೆ ಸರಕಾರಿ ಜಮೀನು ಪಡೆಯುವುದು ಅಷ್ಟು ಸುಲಭವಲ್ಲ. ಅಂದರೆ ರನ್ಯಾಗೆ ಪ್ರಭಾವಿ ರಾಜಕಾರಣಿಗಳು ಹಾಗೂ ವ್ಯಕ್ತಿಗಳ ಸಂಪರ್ಕ ಇರುವುದರಿಂದಲೇ ಕಂಪೆನಿಗೆ ಸರಕಾರಿ ಜಮೀನು ಲಭಿಸಿದೆ ಎಂಬ ಚರ್ಚೆಗಳು ಆರಂಭವಾಗಿವೆ. ಚಿನ್ನ ಕಳ್ಳ ಸಾಗಣೆ ಹಿಂದೆ ಈ ಪ್ರಭಾವಿ ರಾಜಕಾರಣಿಗಳಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಆ ಪ್ರಭಾವಿಗಳು ಯಾರು ಎಂಬುದು ತನಿಖೆಯಿಂದಷ್ಟೇ ಹೊರಬರಬೇಕಿದೆ.
ಚಿನ್ನದ ವ್ಯಾಪಾರಿಗಳು, ರಾಜಕೀಯ ನಾಯಕರ ನಂಟು
ನಟಿಯಾಗಿರುವ ರನ್ಯಾಗೆ ಸಾಮಾನ್ಯವಾಗಿ ಚಿನ್ನದ ವ್ಯಾಪಾರಿಗಳು ಪರಿಚಯ ಇದ್ದಾರೆ. ಅದೇ ರೀತಿ ಹಲವು ರಾಜಕಾರಣಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳ ಜತೆಗೂ ಆತ್ಮೀಯತೆ ಇದೆ ಎಂಬುದು ಗೊತ್ತಾಗಿದೆ. ದುಬಾೖಯಲ್ಲಿ ಕೆ.ಜಿ.ಗಟ್ಟಲೆ ಚಿನ್ನ ಖರೀದಿಗೆ ಹಣ ನೀಡಿದವರ ಬಗ್ಗೆ ರನ್ಯಾ ಈವರೆಗೂ ಬಾಯ್ಬಿಟ್ಟಿಲ್ಲ. ಅಲ್ಲದೆ ತನಗೆ ಟ್ರ್ಯಾಪ್ ಮಾಡಿದವರು ಯಾರೆಂಬುದು ಹೇಳುತ್ತಿಲ್ಲ. ಹೀಗಾಗಿ ರನ್ಯಾ ಹೇಳಿಕೆ ಬಗ್ಗೆಯೇ ಅನುಮಾನ ಮೂಡಿದೆ.
ಡಿಆರ್‌ಐ ಅಥವಾ ಸಿಬಿಐ ಕಸ್ಟಡಿಗೆ ಸಾಧ್ಯತೆ
ಡಿಆರ್‌ಐ ಅಧಿಕಾರಿಗಳು ಆರೋಪಿ ರನ್ಯಾ ಬಂಧನದ ಬಳಿಕ ಆಕೆಯನ್ನು ಆರ್ಥಿಕ ಅಪರಾಧಗಳ ತಡೆ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ, ಮಾ. 10ರ ವರೆಗೆ ಕಸ್ಟಡಿಗೆ ಪಡೆದಿದ್ದರು. ಕಸ್ಟಡಿ ಅಂತ್ಯವಾಗುವ ಹಿನ್ನೆಲೆಯಲ್ಲಿ ಸೋಮವಾರ ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಮತ್ತೆ ಕಸ್ಟಡಿಗೆ ಕೇಳುವ ಸಾಧ್ಯತೆಯಿದೆ. ಮತ್ತೂಂದೆಡೆ ಈ ಚಿನ್ನ ಕಳ್ಳ ಸಾಗಣೆ ಸಂಬಂಧ ನಟಿ ರನ್ಯಾ ವಿರುದ್ಧ ಸಿಬಿಐ ಪ್ರತ್ಯೇಕ ಎಫ್ಐಆರ್ ದಾಖಲಿಸಿಕೊಂಡಿರುವುದರಿಂದ ದಿಲ್ಲಿಯ ಸಿಬಿಐ ಅಧಿಕಾರಿಗಳ ತಂಡವೊಂದು ಬೆಂಗಳೂರಿನ ಡಿಆರ್‌ಐ ಅಧಿಕಾರಿಗಳನ್ನು ಭೇಟಿಯಾಗಿ ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ್ದಾರೆ. ಹೀಗಾಗಿ ನಟ ರನ್ಯಾಳನ್ನು ವಿಚಾರಣೆಗೆ ಒಳಪಡಿಸುವ ಸಲುವಾಗಿ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.
ಬಿಜೆಪಿ ಅವಧಿಯಲ್ಲಿ ಜಮೀನು
ರನ್ಯಾಳ ಮೆಸರ್ಸ್ ಕ್ಸಿರೋದ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪೆನಿಗೆ 12 ಎಕರೆ ಭೂಮಿ 2023ರ ಜನವರಿ 2ರಂದು ಮಂಜೂರಾಗಿದೆ ಎಂದು ಕೆಐಎಡಿಬಿ ಸಿಇಒ ಡಾ| ಮಹೇಶ್ ಸ್ಪಷ್ಟಪಡಿಸಿದ್ದಾರೆ. ಹಿಂದಿನ ಸರಕಾರ ಅಧಿಕಾರದಲ್ಲಿದ್ದಾಗ, 137ನೇ ರಾಜ್ಯ ಮಟ್ಟದ ಸಿಂಗಲ್ ವಿಂಡೋ ಕ್ಲಿಯರೆನ್ಸ್ ಕಮಿಟಿ (ಎಸ್‌ಎಲ್‌ಎಸ್‌ಡಬ್ಲ್ಯುಸಿಸಿ) ಸಭೆಯಲ್ಲಿ ತುಮಕೂರು ಜಿಲ್ಲೆ ಶಿರಾ ಕೈಗಾರಿಕಾ ಪ್ರದೇಶದಲ್ಲಿ ಭೂಮಿ ಮಂಜೂರಾತಿಗೆ ಈ ಅನುಮೋದನೆ ನೀಡಲಾಗಿದೆ ಎಂದು ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.