Published
4 weeks agoon
By
Akkare Newsಮಡಿಕೇರಿ, ಮಾರ್ಚ್ 12: ಗುಡ್ಡಗಾಡು ಪ್ರದೇಶವಾದ ಕೊಡಗು ಜಿಲ್ಲೆಯ ಮಡಿಕೇರಿ ಭಾಗದಲ್ಲಿ ಬುಧವಾರ ಬೆಳಗ್ಗೆ ಭೂಕಂಪ ಸಂಭವಿಸಿದೆ. ಮಡಿಕೇರಿ ತಾಲೂಕಿನ ಎರಡು ಮೂರು ಗ್ರಾಮದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ ಒಟ್ಟು 1.6 ತೀವ್ರತೆ ದಾಖಲಾಗಿದೆ. ಮದೆ ಗ್ರಾಮ ವ್ಯಾಪ್ತಿಯ ವಾಯವ್ಯಕ್ಕೆ 2.4 ದೂರದಲ್ಲಿ ಭೂಮಿ ಕಂಪಿಸಿದೆ ಎಂದು ಕರ್ನಾಟಕ ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮಡಿಕೇರಿ ತಾಲೂಕಿನ ಮದೆನಾಡು, 2ನೇ ಮೊಣ್ಣಂಗೇರಿ ವ್ಯಾಪ್ತಿಯಲ್ಲಿ ಬುಧವಾರ ಬೆಳಗ್ಗೆ 10.49ಕ್ಕೆ ಸಣ್ಣ ಪ್ರಮಾಣದಲ್ಲಿ ಭೂಮಿ ಕಂಪಿಸಿದ ಅನುಭವ ಗ್ರಾಮಸ್ಥರಿಗಾಗಿದೆ. ಕೊಡಗು ಜಿಲ್ಲೆಯ ಮಡಿಕೇರಿ ನಗರದದಿಂದ ಈಶಾನ್ಯಕ್ಕೆ 4.0 ಕಿ.ಮೀ. ದೂರದಲ್ಲಿ ಭೂಕಂಪನ ಸಂಭವಿಸಿದೆ. ಮಡಿಕೇರಿ ತಾಲ್ಲೂಕಿನ ಕುಶಾಲನಗರ ತಾಲ್ಲೂಕಿನ ಹಾರಂಗಿ ಅಣೆಕಟ್ಟು ವೀಕ್ಷಣಾಲಯದ 23.8 ಕಿ.ಮೀ. ದೂರದಲ್ಲಿ ಭೂಮಿ ಕಂಪಿಸಿದ್ದು ರಿಕ್ಟರ್ ಮಾಪನದಲ್ಲಿ ದಾಖಲಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
ಗುಡ್ಡಗಾಡು ಪ್ರದೇಶವಾದ್ದರಿಂದ ಕಡಿಮೆ ತೀವ್ರತೆಯ ಭೂಕಂಪನ ಇದಾಗಿದ್ದರು ಜನರು ಭಯಪಟ್ಟುಕೊಂಡಿದ್ದಾರೆ. ಕೇಂದ್ರ ಬಿಂದುವಿನಿಂದ ಸುಮಾರು 15-20 ಕಿ.ಮೀ. ಆಸುಪಾಸಿನ ವರೆಗೆ ಭೂಮಿಯ ಕಂಪನದ ಸ್ಪಷ್ಟ ಅನುಭವವಾಗಿದೆ ಎಂದು ತಿಳಿದು ಬಂದಿದೆ. ಸದ್ಯ ಘಟನೆಯಿಂದ ತಾಲೂಕಿನ ಯಾವ ಗ್ರಾಮದಲ್ಲೂ ಹಾನಿ, ತೊಂದರೆ ಆಗಲಿ ಆಗಿಲ್ಲ.
ಭೂಕಂಪನದ ತೀವ್ರತೆ ಪ್ರಮಾಣ 1.6 ರಷ್ಟು ದಾಖಲಾಗಿದೆ. ಇದರಿಂದ ಹಾನಿ ಸಾಧ್ಯತೆ ತೀರಾ ಕಡಿಮೆ. ವಿನಾಶಕಾರಿಯಲ್ಲದ ಘಟನೆಯಿಂದ ಯಾರು ಭಯಪಡುವ ಅಗತ್ಯ ಇಲ್ಲ ಎಂದು KSNDMC ಮಾಹಿತಿ ನೀಡಿದೆ.