Published
3 weeks agoon
By
Akkare Newsಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ದ ಮಾಡಿದ್ಧ ಶೇಖಡ 40ರಷ್ಟು ಕಮಿಷನ್ ಆರೋಪದ ಕುರಿತು ತನಿಖೆ ನಡೆಸಲು ನೇಮಿಸಿದ್ದ ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನ್‌ದಾಸ್ ವಿಚಾರಣಾ ಆಯೋಗ, ತನ್ನ ತನಿಖಾ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬುಧವಾರ (ಮಾ.12) ಸಲ್ಲಿಸಿದೆ.
ಗುತ್ತಿಗೆದಾರರ ಸಂಘದ ಆರೋಪಗಳ ತನಿಖೆ ನಡೆಸುತ್ತಿದ್ದ ಜೊತೆ ಜೊತೆಯಲ್ಲಿಯೇ ಸರ್ಕಾರ ರಾಜ್ಯದ ಪ್ರಮುಖ ಐದು ಇಲಾಖೆಗಳಲ್ಲಿ 26 ಜಲೈ 2019ರಿಂದ 31 ಮಾರ್ಚ್ 2023ರ ಅವಧಿಯಲ್ಲಿ ನಡೆದಿರುವ ಎಲ್ಲಾ ಕಾಮಗಾರಿಗಳ ತನಿಖೆ ನಡೆಸಿ ವರದಿ ನೀಡಬೇಕೆಂದು ತಿಳಿಸಿತ್ತು.
ಇದನ್ನು ಗಮನದಲ್ಲಿಟ್ಟುಕೊಂಡು ಆಯೋಗವು ವೈಜ್ಞಾನಿಕವಾಗಿ ರ್‍ಯಾಂಡಮ್ ಮಾದರಿಯಲ್ಲಿ ಪೂರ್ಣಗೊಂಡ ಕಾಮಗಾರಿಗಳನ್ನು ತನಿಖೆಗೆ ಆಯ್ಕೆ ಮಾಡಿಕೊಂಡಿದೆ. ಈ ಆಯ್ಕೆಯಲ್ಲಿ ಎಲ್ಲಾ ಇಲಾಖೆಗಳು, ಎಲ್ಲಾ ಜಿಲ್ಲೆಗಳು, ಎಲ್ಲಾ ಮಾದರಿಯ ಕಾಮಗಾರಿಗಳು ಮತ್ತು ಎಲ್ಲಾ ಮೊತ್ತದ ಕಾಮಗಾರಿಗಳನ್ನು ಪರಿಗಣಿಸಲಾಗಿದೆ. ಕಾಮಗಾರಿಗಳ ತನಿಖೆಯು ಕಡತಗಳ ಪರಿಶೀಲನೆ, ಸ್ದಳ ಪರಿಶೀಲನೆ ಮತ್ತು ಲೆಕ್ಕಪತ್ರಗಳ ಪರಿಶೀಲನೆ ಅಂಶಗಳನ್ನು ಒಳಗೊಂಡಿದೆ. ತನಿಖಾ ವರದಿಯು ಸುಮಾರು 20 ಸಾವಿರ ಪುಟಗಳನ್ನು ಹೊಂದಿದೆ ಎಂದು ಸಿಎಂ ಕಚೇರಿ ಮಾಹಿತಿ ನೀಡಿದೆ.