Published
3 weeks agoon
By
Akkare Newsಕಲಬುರಗಿ: ಜಿಲ್ಲೆಯ ಚಿತ್ತಾಪೂರ ತಾಲೂಕಿನ ವಾಡಿ ಪೊಲೀಸ್ ಠಾಣೆಯಲ್ಲೇ ಪೊಲೀಸರು ಇಸ್ಪೀಟ್ ಆಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಐವರು ಪೊಲೀಸ್ ಕಾನ್ಸ್‌ಟೇಬಲ್‌ಗಳನ್ನು ಸೇವೆಯಿಂದ ಅಮಾನತುಗೊಳಿಸಿ ಎಸ್ಪಿ ಆಡೂರು ಶ್ರೀನಿವಾಸಲು ಆದೇಶಿಸಿದ್ದಾರೆ.
ಇಬ್ಬರು ಸಮವಸ್ತ್ರದಲ್ಲಿ, ಮೂವರು ಬಣ್ಣದ ಡ್ರೆಸ್ನಲ್ಲಿ ಠಾಣೆಯ ಮೊದಲ ಮಹಡಿಯಲ್ಲಿ ಇಸ್ಪೀಟ್ ಆಡಿದ್ದಾರೆ. ಆದರೆ ಇದರ ವಿಡಿಯೋ ಹಳೆಯದು ಎನ್ನಲಾಗುತ್ತಿದೆ. ಕಳೆದ ದಸರಾ ಆಯುಧ ಪೂಜೆ ಸಂದರ್ಭದಲ್ಲಿ ಠಾಣೆಯಲ್ಲಿ ಇಸ್ಪೀಟ್ ಆಡುವಾಗ ಮಹಿಳಾ ಕಾನ್ಸ್‌ಟೇಬಲ್‌ವೊಬ್ಬರು ವಿಡಿಯೋ ಮಾಡಿದ್ದರಂತೆ. ನಂತರ ಇದೇ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಸಹ ಮಾಡಿದ್ದು, ಮಹಿಳಾ ಕಾನ್ಸ್‌ಟೇಬನ್ ಅನ್ನು ಬೇರೆಡೆ ವರ್ಗಾವಣೆ ಮಾಡಲಾಗಿತ್ತು. ಇದೇ ಕಾರಣಕ್ಕೆ ವಿಡಿಯೋ ವೈರಲ್ ಮಾಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ವಿಡಿಯೋ ಹೊಸದೋ ಅಥವಾ ಹಳೆಯದೋ ಎಂಬುದು ತನಿಖೆಯಿಂದ ಗೊತ್ತಾಗುತ್ತದೆ. ಆದರೆ ಠಾಣೆಯಲ್ಲಿ ಇಸ್ಪೀಟ್ ಆಡಿದ್ಧು ಅಕ್ಷಮ್ಯ ಅಪರಾಧ ಎಂದು ಹೇಳಿರುವ ಎಸ್ಪಿ ಆಡೂರು ಶ್ರೀನಿವಾಸಲು, ತಕ್ಷಣ ಅಧಿಕಾರಿಗಳಿಂದ ವರದಿ ತರಿಸಿ ಎಎಸ್ಐ ಸೇರಿ ಐವರನ್ನು ಅಮಾನತು ಮಾಡಿದ್ದಾರೆ.
ಎಎಸ್ಐ ಮೆಹಮೂದ್ ಮಿಯಾ, ಹೆಡ್ ಕಾನ್‌ಸ್ಟೆಬಲ್‌ಗಳಾದ ನಾಗರಾಜ್, ಸಾಯಬಣ್ಣ, ಇಮಾಮ್ ಹಾಗೂ ಕಾನ್‌ಸ್ಟೆಬಲ್ ನಾಗಭೂಷಣ ಅಮಾನತುಗೊಂಡವರು. ಈ ಐವರಿಗೂ ಎಸ್ಪಿ ನೋಟಿಸ್ ಕಳುಹಿಸಿದ್ದಾರೆ. ಪಿಎಸ್‌ಐ ತಿರುಮಲೇಶ್ ಅವರಿಗೂ ನೋಟಿಸ್ ಜಾರಿ ಮಾಡಿದ್ದು, ನಿಗದಿತ ಸಮಯದಲ್ಲಿ ಉತ್ತರಿಸುವಂತೆ ಲಿಖಿತವಾಗಿ ತಾಕೀತು ಮಾಡಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ: “ವಾಡಿ ಪೊಲೀಸ್ ಠಾಣೆಯಲ್ಲಿ ಪೊಲೀಸರು ಇಸ್ಪೀಟ್ ಆಡುತ್ತಿರುವ ವಿಡಿಯೋ ಗಮನಕ್ಕೆ ಬಂದ ತಕ್ಷಣವೇ ಈ ಕುರಿತು ವಿಚಾರಣೆ ನಡೆಸಿ ಅಗತ್ಯ ಕ್ರಮ ಜರುಗಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿದ್ದೆ. ವಿಚಾರಣೆ ನಡೆಸಿದಾಗ ಇದು ಹಲವು ತಿಂಗಳ ಹಿಂದಿನ ಘಟನೆ ಎನ್ನುವುದು ತಿಳಿದು ಬಂದಿದೆ” ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
“ಇಸ್ಪೀಟ್ ಆಟದಲ್ಲಿ ತೊಡಗಿದ್ದ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಸಬ್ಇನ್ಸ್ಪೆಕ್ಟರ್ಗೆ ನೋಟಿಸ್ ಜಾರಿಗೊಳಿಸಲಾಗಿದೆ. ಯಾವುದೇ ಇಲಾಖೆಯ ಯಾವುದೇ ಸಿಬ್ಬಂದಿ, ಅಧಿಕಾರಿಗಳ ಶಿಸ್ತು ಉಲ್ಲಂಘನೆಯ ಬಗ್ಗೆ ನಮ್ಮ ಸರ್ಕಾರ ಶೂನ್ಯ ಸಹನೆ ಹೊಂದಿದೆ. ಸಾರ್ವಜನಿಕ ಸೇವೆಯಲ್ಲಿ, ಕಾನೂನು ಪಾಲನೆಯಲ್ಲಿ ಯಾವುದೇ ಲೋಪವನ್ನು ಸಹಿಸಲು ಸಾಧ್ಯವಿಲ್ಲ” ಎಂದು ಅವರು ತಿಳಿಸಿದ್ದಾರೆ.