Published
1 week agoon
By
Akkare Newsವಿಘ್ನೇಶ್ ಪುತ್ತೂರು… ಭಾನುವಾರ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯ ವೀಕ್ಷಿಸಿದ ಪ್ರತಿಯೊಬ್ಬರಿಗೂ ಈ ಹೆಸರು ಪರಿಚಿತವಾಗಿರುತ್ತದೆ. ಏಕೆಂದರೆ ಮೊದಲ ಪಂದ್ಯದಲ್ಲೇ ವಿಘ್ನೇಶ್ ಮಣಿಕಟ್ಟಿನಲ್ಲೇ ಸ್ಪಿನ್ ಮೋಡಿ ಮಾಡಿದ್ದಾರೆ. ಅದು ಸಹ ಅನುಭವಿ ಆಟಗಾರರಾದ ರುತುರಾಜ್ ಗಾಯಕ್ವಾಡ್, ಶಿವಂ ದುಬೆ ಹಾಗೂ ದೀಪಕ್ ಹೂಡಾ ಅವರ ವಿಕೆಟ್ ಕಬಳಿಸುವ ಮೂಲಕ.
24 ವರ್ಷದ ವಿಘ್ನೇಶ್ ಪುತ್ತೂರು ಮೂಲತಃ ಕೇರಳದವರು. ಇನ್ನು ಅವರ ಹೆಸರಿಗೆ ಸೇರಿಕೊಂಡಿರುವ ಪುತ್ತೂರಿಗೂ ಕರ್ನಾಟಕಕ್ಕೂ ಯಾವುದೇ ಸಂಬಂಧವಿಲ್ಲ. ಬದಲಾಗಿ ಕೇರಳದಲ್ಲಿರುವ ಪುತ್ತೂರಿನ ಮುತ್ತು ಈ ವಿಘ್ನೇಶ್.
ಕುತೂಹಲಕಾರಿ ವಿಷಯ ಎಂದರೆ, ವಿಘ್ನೇಶ್ ಪುತ್ತೂರು ಈವರೆಗೆ ಒಂದು ಒಂದು ದೇಶೀಯ ಪಂದ್ಯವಾಡಿಲ್ಲ. ಅಂದರೆ ಕೇರಳ ರಾಜ್ಯ ತಂಡವನ್ನು ಪ್ರತಿನಿಧಿಸಿಲ್ಲ. ಇದಾಗ್ಯೂ ಅವರು ಕಳೆದ ಬಾರಿಯ ಕೇರಳ ಕ್ರಿಕೆಟ್ ಲೀಗ್‌ನಲ್ಲಿ ಕಾಣಿಸಿಕೊಂಡಿದ್ದರು.
ಈ ವೇಳೆ ವಿಘ್ನೇಶ್ ಅವರ ವೃಸ್ಟ್ ಸ್ಪಿನ್ ಸಾಮರ್ಥ್ಯವನ್ನು ಮುಂಬೈ ಇಂಡಿಯನ್ಸ್ನ ಪ್ರತಿಭಾ ಅನ್ವೇಷಣಾ ತಂಡವು ಗಮನಿಸಿದ್ದರು. ಅಲ್ಲದೆ ಐಪಿಎಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವಂತೆ ಯುವ ಆಟಗಾರನಿಗೆ ಸೂಚಿಸಿದ್ದರು.
ಅದರಂತೆ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ವಿಘ್ನೇಶ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ 30 ಲಕ್ಷ ರೂ.ಗೆ ಖರೀದಿಸಿತು. ಅಲ್ಲದೆ ಈ ವರ್ಷದ ಆರಂಭದಲ್ಲಿ ಸೌತ್ ಆಫ್ರಿಕಾದಲ್ಲಿ ನಡೆದ ಎಸ್ಎ ಟಿ20 ಲೀಗ್ ವೇಳೆ ಎಂಐ ಕೇಪ್ ಟೌನ್ನ ನೆಟ್ ಬೌಲರ್ ಆಗಿ ವಿಘ್ನೇಶ್ ಪುತ್ತೂರು ಅವರನ್ನು ಬಳಸಿಕೊಳ್ಳಲಾಗಿತ್ತು. ಅದು ಸಹ ಸ್ಪಿನ್ ಮಾಂತ್ರಿಕ ರಶೀದ್ ಖಾನ್ ಗರಡಿಯಲ್ಲಿ.
ರಶೀದ್ ಖಾನ್ ಗರಡಿಯಲ್ಲಿ ಪಳಗಿದ ವಿಘ್ನೇಶ್ ಪುತ್ತೂರು ತನ್ನ ಬೌಲಿಂಗ್ ತಂತ್ರಗಾರಿಕೆಯನ್ನು ಮತ್ತಷ್ಟು ನೈಪುಣ್ಯಗೊಳಿಸಿದ್ದಾರೆ. ಅಲ್ಲದೆ ಮುಂಬೈ ಇಂಡಿಯನ್ಸ್ ತಂಡದ ಅಭ್ಯಾಸದ ವೇಳೆಯೂ ಈ ಮೂಲಕ ಮೋಡಿ ಮಾಡಿದ್ದಾರೆ.
ಪರಿಣಾಮ ಈ ಬಾರಿಯ ಐಪಿಎಲ್ನ ಮುಂಬೈ ಇಂಡಿಯನ್ಸ್ ತಂಡದ ಮೊದಲ ಪಂದ್ಯದಲ್ಲೇ ವಿಘ್ನೇಶ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಯಿತು. ಅದರಂತೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಕಣಕ್ಕಿಳಿದ ಯುವ ಸ್ಪಿನ್ನರ್ 3 ವಿಕೆಟ್ ಉರುಳಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಇತ್ತ ವಿಘ್ನೇಶ್ ಅವರು ಸ್ಪಿನ್ ಮೋಡಿ ಮಾಡುತ್ತಿದ್ದರೆ, ಅತ್ತ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಡಗೌಟ್ನಲ್ಲೂ ಚರ್ಚೆಗಳು ನಡೆದಿವೆ. ಏಕೆಂದರೆ ಸಿಎಸ್ಕೆ ತಂಡವು ಈ ಬಾರಿ ಅಫ್ಗಾನಿಸ್ತಾನನ ಮಣಿಕಟ್ಟಿನ ಸ್ಪಿನ್ನರ್ ನೂರ್ ಅಹ್ಮದ್ ಅವರನ್ನು ಟ್ರಂಪ್ ಕಾರ್ಡ್ ಆಗಿ ಬಳಸಿಕೊಳ್ಳಲಿದ್ದಾರೆ.
ಇದಕ್ಕೆ ಟಕ್ಕರ್ ಎಂಬಂತೆ ಅತ್ತ ಮುಂಬೈ ಇಂಡಿಯನ್ಸ್ ತಂಡದಕ್ಕೂ ವೃಸ್ಟ್ ಸ್ಪಿನ್ನರ್ ಕಾಣಿಸಿಕೊಂಡಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ಅಷ್ಟೇ ಅಲ್ಲದೆ ಪಂದ್ಯ ಮುಗಿದ ಬಳಿಕ ಖುದ್ದು ಮಹೇಂದ್ರ ಸಿಂಗ್ ಧೋನಿ ಕೂಡ ಯುವ ಸ್ಪಿನ್ನರ್ ಬೌಲಿಂಗ್ ಮೆಚ್ಚುಗೆ ಸೂಚಿಸಿದ್ದಾರೆ.
ಒಟ್ಟಿನಲ್ಲಿ ಚೊಚ್ಚಲ ಪಂದ್ಯದಲ್ಲೇ ಸ್ಪಿನ್ ಮೋಡಿ ಮಾಡಿರುವ ವಿಘ್ನೇಶ್ ಪುತ್ತೂರು ಅವರ ಅತೀ ದೊಡ್ಡ ಕನಸು ತನ್ನ ಕುಟುಂಬವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವುದು. ಏಕೆಂದರೆ ಅವರ ತಂದೆ ಸುನಿಲ್ ಕುಮಾರ್ ಆಟೋರಿಕ್ಷಾ ಚಾಲಕರು. ಹಾಗೆಯೇ ತಾಯಿ ಕೆ.ಪಿ. ಬಿಂದು ಗೃಹಿಣಿ.
ಆರ್ಥಿಕ ಸಂಕಷ್ಟದ ನಡುವೆಯೇ ತಂದೆ-ತಾಯಿ ವಿಘ್ನೇಶ್ ಅವರ ಕ್ರಿಕೆಟ್ ಕನಸಿಗೆ ಆಧಾರಸ್ತಂಭವಾಗಿ ನಿಂತಿದ್ದರು. ಇದೀಗ ಐಪಿಎಲ್ ಮೂಲಕ ಪೋಷಕರ ಹೊರೆ ಕೊನೆಗೊಳಿಸುವ ಇರಾದೆಯಲ್ಲಿದ್ದಾರೆ ಪುತ್ತೂರಿನ ಮುತ್ತು.
IPL 2025: ದ್ವಿತೀಯ ಪಂದ್ಯಕ್ಕಾಗಿ RCB ಬರೋಬ್ಬರಿ 1383 ಕಿ.ಮೀ ಪಯಣ
ಅಲ್ಲದೆ ಐಪಿಎಲ್ ಮೂಲಕವೇ ಟೀಮ್ ಇಂಡಿಯಾ ಕದ ತಟ್ಟುವ ವಿಶ್ವಾಸದಲ್ಲಿದ್ದಾರೆ. ಈ ಮೂಲಕ ತಂದೆ-ತಾಯಿಯ ಬಹುಕಾಲದ ಕನಸನ್ನು ನನಸು ಮಾಡಲು ಹೊರಟ್ಟಿದ್ದಾರೆ 24 ವರ್ಷದ ವಿಘ್ನೇಶ್ ಪುತ್ತೂರು.