Published
2 weeks agoon
By
Akkare Newsಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಅವರ ಜಾಮೀನು ಅರ್ಜಿಯ ಆದೇಶವನ್ನು ಬೆಂಗಳೂರಿನ ನ್ಯಾಯಾಲಯ ಮಂಗಳವಾರ ಮಾರ್ಚ್ 27 ಕ್ಕೆ ಕಾಯ್ದಿರಿಸಿದೆ. ರನ್ಯಾ ಅವರ ವಕೀಲರ ವಾದಗಳು ಮತ್ತು ತನಿಖಾ ಸಂಸ್ಥೆಯಾದ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಸಲ್ಲಿಸಿದ ಆಕ್ಷೇಪಣೆಗಳ ನಂತರ 63 ನೇ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರು ಆದೇಶವನ್ನು ಕಾಯ್ದಿರಿಸಿದ್ದಾರೆ.
33 ವರ್ಷದ ರನ್ಯಾ ಅವರನ್ನು ಮಾರ್ಚ್ 3 ರಂದು ದುಬೈನಿಂದ ಬೆಂಗಳೂರಿಗೆ ಆಗಮಿಸಿದ್ದಾಗ ಬಂಧಿಸಲಾಗಿತ್ತು. ಅವರು 12.56 ಕೋಟಿ ರೂ. ಮೌಲ್ಯದ 14.2 ಕೆಜಿ ವಿದೇಶಿ ಮೂಲದ ಚಿನ್ನದ ಗಟ್ಟಿಗಳನ್ನು ತಮ್ಮೊಂದಿಗೆ ಸಾಗಿಸುತ್ತಿರುವುದು ಕಂಡುಬಂದಿದೆ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯ ಆರೋಪಿಸಿತ್ತು. ಅವರು ಪ್ರಸ್ತುತ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಮಾರ್ಚ್ 14 ರಂದು ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯವು ರನ್ಯಾ ಅವರ ಜಾಮೀನು ತಿರಸ್ಕರಿಸಿದ ನಂತರ ಅವರು ಸೆಷನ್ಸ್ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು.
ಭಾರತೀಯ ಆರ್ಥಿಕತೆಯ ಮೇಲಿನ ಪರಿಣಾಮಗಳು, ದುಬೈಗೆ ಹವಾಲಾ ವಹಿವಾಟು, ಅಂತರರಾಷ್ಟ್ರೀಯ ಸಂಪರ್ಕಗಳು, ಈ ವರ್ಷ ದುಬೈಗೆ 27 ಬಾರಿ ಪ್ರಯಾಣ, ಯುಎಇ ನಿವಾಸಿ ಗುರುತಿನ ಚೀಟಿ ಹೊಂದಿರುವುದು ಮತ್ತು ಕರ್ತವ್ಯದಿಂದ ತಪ್ಪಿಸಿಕೊಳ್ಳಲು ಕಸ್ಟಮ್ಸ್‌ನ ಗ್ರೀನ್ ಚಾನೆಲ್‌ಗೆ ಪ್ರವೇಶ ಸೇರಿದಂತ ಹಲವು ವಿಚಾರಗಳನ್ನು ವಿಶೇಷ ನ್ಯಾಯಾಲಯವು ನಟಿಯ ಜಾಮೀನು ತಿರಸ್ಕರಿಸುವಾಗ ಅವಲಂಬಿಸಿತ್ತು.
ರನ್ಯಾ ರಾವ್ ಅವರು ಕರ್ನಾಟಕದ ಡಿಜಿಪಿ ಕೆ. ರಾಮಚಂದ್ರ ರಾವ್ ಅವರ ಮಲಮಗಳು. ಈ ಪ್ರಕರಣದಲ್ಲಿ ಅವರ ಪತಿ ಜತಿನ್ ಹುಕ್ಕೇರಿ ವಿರುದ್ಧ ಕೂಡಾ ತನಿಖೆ ನಡೆಸಲಾಗುತ್ತಿದ್ದು, ಡಿಜಿಪಿ ಕೆ. ರಾಮಚಂದ್ರ ಅವರನ್ನು ಸರ್ಕಾರ ಕಡ್ಡಾಯ ರಜೆಯಲ್ಲಿರುವಂತೆ ಆದೇಶಿಸಲಾಗಿದೆ.
ನಟಿ ಮತ್ತು ಮಾಡೆಲ್ ಆಗಿರುವ ರನ್ಯಾ ರಾವ್ ಅವರು ಮುಖ್ಯವಾಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. 2014ರಲ್ಲಿ ಸುದೀಪ್ ನಿರ್ದೇಶನದ “ಮಾಣಿಕ್ಯ” ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು, ನಂತರ 2016ರಲ್ಲಿ ತಮಿಳು ಚಿತ್ರ “ವಾಗಾ” ಮತ್ತು 2017ರಲ್ಲಿ ಕನ್ನಡ ಚಿತ್ರ “ಪಟಾಕಿ”ಯಲ್ಲಿ ನಟಿಸಿದ್ದರು.