Published
2 weeks agoon
By
Akkare Newsಮಾ. 25: ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಗುಂಡೇಟಿಗೆ ಒಳಗಾಗಿದ್ದ ಗರುಡ ಗ್ಯಾಂಗಿನ ಸದಸ್ಯ ಇಸಾಕ್‌ನನ್ನು ಮಣಿಪಾಲ ಪೊಲೀಸರು ಸೋಮವಾರ ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆತನನ್ನು ನ್ಯಾಯಾಲಯ 9 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದೆ.
ಬೆಂಗಳೂರಿನ ನೆಲಮಂಗಲದ ಪೊಲೀಸರಿಂದ ಮಣಿಪಾಲದಲ್ಲಿ ತಪ್ಪಿಸಿ ಕೊಳ್ಳುವ ವೇಳೆ ಸಾರ್ವಜನಿಕರ ಕಾರು, ಬೈಕಿಗೆ ಗುದ್ದಿ ಪರಾರಿಯಾಗಿದ್ದ ಇಸಾಕ್‌ನನ್ನು ಮಣಿಪಾಲ ಪೊಲೀಸರು ಮಾ.12ರಂದು ಹಾಸನದಲ್ಲಿ ಬಂಧಿಸಿದ್ದರು. ಅಲ್ಲಿಂದ ಆತನನ್ನು ಕರೆ ತರುವಾಗ ದಾರಿ ಮಧ್ಯೆ ಹಿರಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರಿಗೆ ಹಲ್ಲೆ ನಡೆಸಿ, ಪರಾರಿಯಾಗಲು ಯತ್ನಿಸಿದ್ದನು.
ಈ ವೇಳೆ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದರು. ಬಳಿಕ ಆತನನ್ನು ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಆತನನ್ನು ಶಸ್ತ್ರಚಿಕಿತ್ಸೆಗಾಗಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಇದೀಗ ಚೇತರಿಕೆ ಕಂಡಿರುವ ಇಸಾಕ್‌ನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿ ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಒಪ್ಪಿಸುವಂತೆ ಮನವಿ ಮಾಡಿದರು. ಅದರಂತೆ ನ್ಯಾಯಾಲಯವು ಆರೋಪಿಯನ್ನು ಎ.1ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದರು.
ಇಸಾಕ್‌ನನ್ನು ಕಸ್ಟಡಿಗೆ ಪಡೆದುಕೊಂಡಿರುವ ಮಣಿಪಾಲ ಪೊಲೀಸರು, ಅಪಹರಣ, ಮಾದಕ ದ್ರವ್ಯ ಸೇರಿದಂತೆ ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.