Published
5 days agoon
By
Akkare Newsಮ್ಯಾನ್ಮಾರ್‌ನಲ್ಲಿ ಶುಕ್ರವಾರ (ಮಾ.28) ಸಂಭವಿಸಿದ 7.7 ತೀವ್ರತೆಯ ಪ್ರಬಲ ಭೂಕಂಪದಿಂದ ಸಾವಿಗೀಡದವರ ಸಂಖ್ಯೆ 1,000 ದಾಟಿದೆ ಎಂದು ಅಲ್ಲಿನ ಸೇನೆಯನ್ನು ಉಲ್ಲೇಖಿಸಿ ಬಿಬಿಸಿ ವರದಿ ತಿಳಿಸಿದೆ.
ನ್ಯೂಯಾರ್ಕ್ ಟೈಮ್ಸ್ ವರದಿ ಪ್ರಕಾರ, ಭೂಕಂಪದಲ್ಲಿ ಗಾಯಗೊಂಡವರ ಸಂಖ್ಯೆ 2,300ಕ್ಕೆ ಏರಿಕೆಯಾಗಿದೆ. ಹೆಚ್ಚಿನ ಸಾವು-ನೋವುಗಳು ಮ್ಯಾನ್ಮಾರ್‌ನ ಎರಡನೇ ಅತಿದೊಡ್ಡ ನಗರ ಮತ್ತು ಭೂಕಂಪದ ಕೇಂದ್ರಬಿಂದುವಿಗೆ ಹತ್ತಿರವಿರುವ ಮಂಡಲೆ ಪ್ರದೇಶದಲ್ಲಿ ಸಂಭವಿಸಿವೆ.
ಭೂಕಂಪ ಸಂಭವಿಸಿದ ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನಲ್ಲಿ ಬದುಕುಳಿದವರನ್ನು ಹುಡುಕಲು ರಕ್ಷಣಾ ತಂಡಗಳು ಕಾರ್ಯಾಚರಣೆ ಮುಂದುವರೆಸಿವೆ. ಭೂಕಂಪದಿಂದ ಮ್ಯಾನ್ಮಾರ್‌ನ ವಿವಿಧ ಪ್ರದೇಶಗಳಲ್ಲಿ ಕಟ್ಟಡಗಳು ಕುಸಿದಿವೆ. ಸೇತುವೆ, ರಸ್ತೆಗಳಿಗೆ ಹಾನಿಯಾಗಿದೆ.
ಥಾಯ್ ರಾಜಧಾನಿ ಬ್ಯಾಂಕಾಕ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ 30 ಅಂತಸ್ತಿನ ಗಗನಚುಂಬಿ ಕಟ್ಟಡ ಕುಸಿದು ಬಿದ್ದು, ಅವಶೇಷಗಳಡಿ ಸಿಲುಕಿರುವ ಕಾರ್ಮಿಕರಿ ರಕ್ಷಣಾ ಕಾರ್ಯಚರಣೆ ಮುಂದುವರೆದಿದೆ. ಥೈಲ್ಯಾಂಡ್ ಮತ್ತು ಮ್ಯಾನ್ಮಾರ್ ಎರಡೂ ಕಡೆಯೂ ರಕ್ಷಣಾ ತಂಡಗಳು ಜನರನ್ನು ಅವಶೇಷಗಳ ಅಡಿಯಿಂದ ತೆಗೆಯಲು ಹರಸಾಹಸಪಡುತ್ತಿವೆ ಎಂದು ವರದಿಯಾಗಿದೆ.
“ನಗರದಾದ್ಯಂತ ಸುಮಾರು 10 ಜನರು ಸಾವನ್ನಪ್ಪಿದ್ದಾರೆ. ಅವರಲ್ಲಿ ಹೆಚ್ಚಿನವರು ಗಗನಚುಂಬಿ ಕಟ್ಟಡ ಕುಸಿತದಲ್ಲಿ ಬಲಿಯಾಗಿದ್ದಾರೆ. ಪ್ರವಾಸಿಗರನ್ನು ಆಕರ್ಷಿಸುವ ಚತುಚಕ್ ವಾರಾಂತ್ಯದ ಮಾರುಕಟ್ಟೆಯ ಬಳಿ ಈ ಬೃಹತ್ ಕಟ್ಟಡ ಕುಸಿತವಾಗಿದ್ದು, ಇತ್ತೀಚಿನ ಮಾಹಿತಿ ಪ್ರಕಾರ 100ಕ್ಕೂ ಹೆಚ್ಚು ಕಾರ್ಮಿಕರ ಸುಳಿವು ಇನ್ನೂ ಸಿಕ್ಕಿಲ್ಲ” ಎಂದು ಬ್ಯಾಂಕಾಕ್ ಗವರ್ನರ್ ಚಾಡ್‌ಚಾರ್ಟ್ ಸಿಟ್ಟಿಪುಂಟ್ ಸುದ್ದಿ ಸಂಸ್ಥೆ ಎಎಫ್‌ಪಿಗೆ ತಿಳಿಸಿದ್ದಾರೆ.
ಭಾರತ ಶೋಧ ಮತ್ತು ರಕ್ಷಣಾ ತಂಡ, ವೈದ್ಯಕೀಯ ತಂಡ ಹಾಗೂ ಅಗತ್ಯ ಸಾಮಗ್ರಿಗಳನ್ನು ಮ್ಯಾನ್ಮಾರ್‌ಗೆ ಕಳುಹಿಸಿದೆ. ಭೂಕಂಪದಿಂದ ಹೆಚ್ಚು ಹಾನಿಗೊಳಗಾದ ಪ್ರದೇಶಗಳನ್ನು ಗುರುತಿಸಲು ಮತ್ತು ಸಹಾಯ ಮಾಡಲು ಭಾನುವಾರ 50 ಜನರ ತಂಡವನ್ನು ಕಳುಹಿಸುವುದಾಗಿ ಮಲೇಷ್ಯಾ ತಿಳಿಸಿದೆ.
ಪರಿಹಾರ ಕಾರ್ಯಗಳನ್ನು ಪ್ರಾರಂಭಿಸಲು ವಿಶ್ವಸಂಸ್ಥೆಯು 5 ಮಿಲಿಯನ್ ಡಾಲರ್‌ಗಳ ನೆರವು ನಿಗದಿಪಡಿಸಿದೆ.