Published
5 days agoon
By
Akkare Newsಬಿಜೆಪಿಯಲ್ಲಿ ಒಂದು ಕುರ್ಚಿ ಸಿಗಬೇಕಾದರೂ ಅವರು ರೌಡಿ ಶೀಟರ್ ಆಗಿರಬೇಕೆಂಬ ವಾತಾವರಣ ಇದೆ. ವಸ್ತುಸ್ಥಿತಿ ಹೀಗಿರುವಾಗ, ಶಾಸಕ ಡಿ.ವೇದವ್ಯಾಸ ಕಾಮತ್ ಅವರು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ರೌಡಿಶೀಟರ್ ನೇಮಕ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಮಾತನಾಡುವ ಯೋಗ್ಯತೆ ಅವರಿಗೆ ಇದೆಯೇ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಹರೀಶ್ ಕುಮಾರ್ ಪ್ರಶ್ನಿಸಿದರು.
ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕದ್ರಿ ಮಂಜುನಾಥ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಶಾಸಕ ಕಾಮತ್ ಶಿಫಾರಸಿನ ಮೇಲೆ ಈ ಹಿಂದೆ ನೇಮಕಗೊಂಡಿದ್ದ ವ್ಯಕ್ತಿಯೊಬ್ಬರು ಹುಂಡಿಯ ಹಣ ಕದ್ದ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು’ ಎಂದರು.
ಕಾಂಗ್ರೆಸ್ ಕಾರ್ಯಕರ್ತ ಹರೀಶ್ ಅವರನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ನೇಮಿಸಲು ಜಿಲ್ಲಾ ಉಸ್ತುವಾರಿ ಸಚಿವರು ಶಿಫಾರಸು ಮಾಡಿದ್ದಾರೆ ಎಂದು ಆರೋಪಿಸಿ ಕಾಮತ್ ನೀಡಿರುವ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಹರೀಶ್ ಅವರು ಹಿಂದೆ ರೌಡಿಶೀಟರ್ ಆಗಿದ್ದುದು ನಿಜ. ಆದರೆ 12 ವರ್ಷ ಹಿಂದೆಯೇ ಅವರ ಹೆಸರನ್ನು ರೌಡಿಗಳ ಪಟ್ಟಿಯಿಂದ ಕೈಬಿಡಲಾಗಿದೆ. ಬಳಿಕ ಮೂರು ಸಲ ಗ್ರಾಮ ಪಂಚಾಯಿತಿ ಸದಸ್ಯರಾಗಿಯೂ ಆಯ್ಕೆಯಾಗಿದ್ದಾರೆ’ ಎಂದರು.
ದೇವಸ್ಥಾನಗಳಲ್ಲಿ ರಾಜಕೀಯಕ್ಕೆ ಅವಕಾಶ ಕಲ್ಪಿಸಿದ್ದೇ ಬಿಜೆಪಿ ನೇತೃತ್ವದ ಸರ್ಕಾರ ಎಂದು ಅವರು ದೂರಿದರು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಮಲೆಕುಡಿಯರ ನೇಮಕಕ್ಕೆ ಬೆಂಬಲ ಸೂಚಿಸುವುದಾಗಿ ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್.ಪದ್ಮರಾಜ್, ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಮುಖಂಡರಾದ ವಿಕಾಸ್ ಕುಮಾರ್ ಶೆಟ್ಟಿ, ನವಾಜ್, ಜೋಕಿಂ, ಸುಭಾಶ್ಚಂದ್ರ, ಕಿರಣ್ ಬುಡ್ಲೆಗುತ್ತು ಭಾಗವಹಿಸಿದ್ದರು.