Published
4 days agoon
By
Akkare Newsಗುಜರಾತ್ ಗಲಭೆ ಕುರಿತು ಉಲ್ಲೇಖಿಸಿ ಹಿಂದೂ ಧರ್ಮದ ಅವಹೇಳನ ಮಾಡಲಾಗಿದೆ ಎಂದು ಸಂಘ ಪರಿವಾರ ಆರೋಪಿಸಿದ ಬಳಿಕ ಮೋಹನ್‌ಲಾಲ್ ಅಭಿನಯದ ‘ಎಲ್2 ಎಂಪುರಾನ್’ ಚಿತ್ರ ವಿವಾದಕ್ಕೀಡಾಗಿದೆ.
ಸಂಘ ಪರಿವಾರ ಆಕ್ಷೇಪ ವ್ಯಕ್ತಪಡಿಸಿದ ಚಿತ್ರದ ಸುಮಾರು 17 ದೃಶ್ಯಗಳಿಗೆ ಕತ್ತರಿ ಹಾಕಲು ನಿರ್ಮಾಪಕರು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ನಡುವೆ ವಿವಾದಕ್ಕೆ ಸಂಬಂಧಿಸಿದಂತೆ ನಟ ಮೋಹನ್‌ಲಾಲ್ ಅಭಿಮಾನಿಗಳ ಕ್ಷಮೆಯಾಚಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಎಂಪುರಾನ್ ಚಿತ್ರವನ್ನು ಬೆಂಬಲಿಸಿದ್ದು, “ಚಿತ್ರದ ನಿರ್ಮಾಪಕರ ಕೋಮುವಾದದ ವಿರುದ್ದದ ನಿಲುವಿನ ಬಗ್ಗೆ ಸಂಘಪರಿವಾರ ಭಯದ ವಾತಾವರಣ ಸೃಷ್ಟಿಸುತ್ತಿದೆ ಎಂದು ಹೇಳಿದ್ದಾರೆ.
ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಪಿಣರಾಯಿ ವಿಜಯನ್ “ದೇಶಕಂಡ ಅತ್ಯಂತ ಘೋರ ನರಮೇಧಗಳಲ್ಲಿ ಒಂದನ್ನು ಈ ಚಿತ್ರ ಉಲ್ಲೇಖಿಸುತ್ತದೆ. ಅದು ಸಂಘಪರಿವಾರ ಮತ್ತು ಅದರ ಸೂತ್ರಧಾರರನ್ನು ಕೆರಳಿಸಿದೆ” ಎಂದಿದ್ದಾರೆ.
ಶನಿವಾರ (ಮಾ.29) ಸಂಜೆ ತಿರುವನಂತಪುರಂನಲ್ಲಿ ಪಿಣರಾಯಿ ವಿಜಯನ್ ಕುಟುಂಬ ಸಮೇತರಾಗಿ ಎಂಪುರಾನ್ ಸಿನಿಮಾ ವೀಕ್ಷಿಸಿದ್ದಾರೆ.
ಮಲಯಾಳಂ ಚಲನಚಿತ್ರೋದ್ಯಮವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಚಿತ್ರ ಎಂದು ಎಂಪುರಾನ್ ಕುರಿತು ಶ್ಲಾಘಿಸಿದ ಪಿಣರಾಯಿ ವಿಜಯನ್, “ಸಂಘ ಪರಿವಾರ ಚಿತ್ರ, ಅದರ ನಟರು ಮತ್ತು ಸಿಬ್ಬಂದಿಯ ವಿರುದ್ಧ ವ್ಯಾಪಕ ದ್ವೇಷ ಹರಡುತ್ತಿರುವ ಹಿನ್ನೆಲೆ ಚಿತ್ರ ವೀಕ್ಷಿಸಿದೆ” ಎಂದಿದ್ದಾರೆ.
ಕೇವಲ ಕಾರ್ಯಕರ್ತರು ಮಾತ್ರವಲ್ಲ, ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರು ಕೂಡ ಚಿತ್ರದ ನಿರ್ಮಾಪಕರಿಗೆ ಸಾರ್ವಜನಿಕವಾಗಿ ಬೆದರಿಕೆ ಹಾಕುತ್ತಿದ್ದಾರೆ. ಚಿತ್ರವನ್ನು ಮರು ಸೆನ್ಸಾರ್ ಮಾಡಲು ಮತ್ತು ದೃಶ್ಯಗಳಿಗೆ ಕತ್ತರಿ ಹಾಕಲು ಒತ್ತಾಯಿಸಲಾಗುತ್ತಿದೆ ಎಂಬ ವರದಿಗಳು ಬಂದಿವೆ. ಸಂಘ ಪರಿವಾರ ಸೃಷ್ಟಿಸಿರುವ ಈ ಭಯದ ವಾತಾವರಣವು ಕಳವಳಕಾರಿ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.