Published
2 days agoon
By
Akkare Newsಸುಬ್ರಹ್ಮಣ್ಯ: ಪುಣ್ಯ ನದಿ ಕುಮಾರಧಾರಾ ನದಿಗೆ ತ್ಯಾಜ್ಯಗಳನ್ನು ಎಸೆ ದಲ್ಲಿ ದಂಡ ವಿಧಿಸುವುದಾಗಿ ಎಚ್ಚರಿಸಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವತಿಯಿಂದ ಕುಮಾರಧಾರಾ ಸೇತುವೆಯಲ್ಲಿ ಸೂಚನ ಫಲಕ ಅಳವಡಿಸಲಾಗಿದೆ.
ಸುಬ್ರಹ್ಮಣ್ಯದ ಕುಮಾರಧಾರಾ ನದಿಗೆ ಭಕ್ತರು ಹಳೆಯ ಬಟ್ಟೆ, ವಿವಿಧ ರೀತಿಯ ತ್ಯಾಜ್ಯಗಳನ್ನು ಸೇತುವೆ ಮೇಲಿನಿಂದಲೇ ನದಿಗೆ ಎಸೆಯುವುದು ಇಲ್ಲಿ ನಿರಂತರವಾಗಿ ನಡೆಯುತ್ತಿತ್ತು. ಜತೆಗೆ ಸ್ನಾನಕ್ಕೆ ಹೋದವರು ನದಿಯಲ್ಲೇ ಬಟ್ಟೆಗಳನ್ನು ಎಸೆದುಬರುತ್ತಿದ್ದರು. ಇದ ರಿಂದ ನದಿ ನೀರು ಕಲುಷಿತಗೊಳ್ಳುತ್ತಿತ್ತು. ನದಿಯಲ್ಲಿ ಲೋಡ್ ಗಟ್ಟಲೆ ತ್ಯಾಜ್ಯ ರಾಶಿ ಬೀಳುತ್ತಿತ್ತು.
ಸೂಚನ ಫಲಕ ಅಳವಡಿಕೆ
ಇದೀಗ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವತಿಯಿಂದ ಸೇತುವೆಯಲ್ಲಿ ಸೂಚನ ಫಲಕ ಅಳವಡಿಸಲಾಗಿದೆ. ಭಕ್ತರು ತೀರ್ಥಸ್ನಾನ ಮಾಡುವ ನದಿಗೆ ಬಟ್ಟೆ, ಪ್ಲಾಸ್ಟಿಕ್ ಇನ್ನಿತರ ತ್ಯಾಜ್ಯಗಳನ್ನು ಎಸೆಯಬಾರದು. ಉಲ್ಲಂಘಿಸಿದಲ್ಲಿ ದಂಡ ವಿಧಿಸಲಾಗುವುದು ಎಂದು ಫಲಕ ಅಳವಡಿಸಲಾಗಿದೆ.
ಸುಬ್ರಹ್ಮಣ್ಯ ಗ್ರಾ.ಪಂ.ಅಧ್ಯಕ್ಷೆ ಸುಜಾತಾ ಕಲ್ಲಾಜೆ, ಗ್ರಾ.ಪಂ. ಪಿಡಿಒ ಮಹೇಶ್ ಜಿ.ಎನ್., ಸುಬ್ರಹ್ಮಣ್ಯ ಠಾಣಾಧಿಕಾರಿ ಕಾರ್ತಿಕ್, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಪ್ರಮೋದ್ ಕುಮಾರ್, ಗ್ರಾ.ಪಂ.ಸದಸ್ಯರಾದ ಹರೀಶ್ ಇಂಜಾಡಿ, ವೆಂಕಟೇಶ್ ಎಚ್.ಎಲ್., ಸೌಮ್ಯ, ಮಾಸ್ಟರ್ ಪ್ಲ್ರಾನ್ ಸಮಿತಿ ಸದಸ್ಯರಾದ ಲೋಲಾಕ್ಷ ಕೈಕಂಬ, ಪವನ್ ಎಂ.ಡಿ.ಸುಬ್ರಹ್ಮಣ್ಯ, ಪ್ರಮುಖರಾದ ರವೀಂದ್ರ ಕುಮಾರ್ ರುದ್ರಪಾದ, ರತ್ನಕುಮಾರಿ ನೂಚಿಲ, ಡಾ| ರವಿಕಕ್ಕೆಪದವು, ರಾಮಚಂದ್ರ, ಭರತ್, ಸುರೇಶ್, ಶೇಷಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ನದಿ ಪಾವಿತ್ರ್ಯ ಕೆಡಿಸಬೇಡಿ
ಬಟ್ಟೆ, ಇನ್ನಿತರ ತ್ಯಾಜ್ಯ ವಸ್ತುಗಳನ್ನು ಎಸೆದು ನದಿಯ ಪಾವಿತ್ರ್ಯ ಹಾಳು ಮಾಡುತ್ತಿರುವ ದೂರುಗಳು ಬಂದಿವೆ. ಇದನ್ನು ಗ್ರಾ.ಪಂ. ಗಂಭೀರವಾಗಿ ಪರಿಗಣಿಸಿದೆ. ಮುಂದಕ್ಕೆ ತ್ಯಾಜ್ಯ ವಸ್ತುಗಳನ್ನು ಎಸೆಯುವುದು ಕಂಡುಬಂದರೆ ದಂಡ ವಿಧಿಸಲಾಗುವುದು.
– ಸುಜಾತಾ ಕಲ್ಲಾಜೆ, ಅಧ್ಯಕ್ಷರು, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್