Published
4 days agoon
By
Akkare Newsಬೆಂಗಳೂರು: ತಿನ್ನುವ ಆಹಾರ, ಸೇವಿಸುವ ಔಷಧಗಳ ಕಳಪೆ ಗುಣಮಟ್ಟ ಬಯಲಾದ ಬೆನ್ನಲ್ಲೇ ಕುಡಿಯುವ ನೀರಿನ ಬಾಟಲಿಯ ಬಹಳಷ್ಟು ಬ್ರ್ಯಾಂಡ್‌ಗಳು ಅಸುರಕ್ಷಿತ ಎಂಬ ಶಾಕ್ ಸುದ್ದಿಯನ್ನು ಸರಕಾರವೇ ನೀಡಿದೆ. ರಾಜ್ಯದ ನಾನಾ ಭಾಗಗಳಲ್ಲಿ 255 ಬಾಟಲಿ ನೀರಿನ ಮಾದರಿಗಳ ಪರೀಕ್ಷೆಯಲ್ಲಿ ಕೇವಲ 72 ಮಾತ್ರವೇ ಕುಡಿಯಲು ಯೋಗ್ಯ ಎಂಬುದು ಖಚಿತವಾಗಿದೆ. ಖನಿಜಯುಕ್ತ ನೀರು ಎಂದು ಮಾರಾಟ ಮಾಡಲಾಗುವ 183 ಬ್ರ್ಯಾಂಡ್‌ಗಳು ಅಸುರಕ್ಷಿತ ಮತ್ತು ಕಳಪೆ ಗುಣಮಟ್ಟದಿಂದ ಕೂಡಿರುವುದು ಸಾಬೀತಾಗಿದೆ.
ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ರಾಜ್ಯಾದ್ಯಂತ ಬಾಟಲಿ ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಿದೆ. ಇದರಲ್ಲಿ95 ಮಾದರಿಗಳು ಅಸುರಕ್ಷಿತ ಎಂಬುದು ದೃಢಪಟ್ಟಿದ್ದರೆ, 88 ಮಾದರಿಗಳು ತೀರಾ ಕಳಪೆ ಎಂದು ದೃಢವಾಗಿದೆ. ಇಲಾಖೆ ಕಳೆದ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿನಡೆಸಿದ ವಿಶೇಷ ತಪಾಸಣಾ ಅಭಿಯಾನದಲ್ಲಿಈ ಸಂಗತಿ ದಾಖಲಾಗಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಈ ವಿವರ ಪ್ರಕಟಿಸಿದರು.
” ಒಟ್ಟು 88 ಮಾದರಿ ನೀರಿನ ಬಾಟಲಿಗಳಲ್ಲಿ ರಾಸಾಯನಿಕ ಅಂಶ ಮತ್ತು ಅಪಾಯಕಾರಿ ಬ್ಯಾಕ್ಟೀರಿಯಾಗಳು ಪತ್ತೆಯಾಗಿವೆ. ಇದು ಅತ್ಯಂತ ಆತಂಕಕಾರಿ ವಿಷಯ. ನಾನಾ ಬ್ರ್ಯಾಂಡ್‌ನ ಬಾಟಲಿ ಕುಡಿಯುವ ನೀರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಮುಂದಿನ ಹಂತವಾಗಿ, ಈ ಬಾಟಲಿ ಕುಡಿಯುವ ನೀರು ತಯಾರಿಕಾ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಆ ಸಂದರ್ಭದಲ್ಲೂಕಳಪೆ ಎಂಬುದು ಖಚಿತಪಟ್ಟರೆ ಸಂಬಂಧಪಟ್ಟ ಸಂಸ್ಥೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು,” ಎಂದು ತಿಳಿಸಿದರು.