Connect with us

ಇತರ

ಬೆಂಗಳೂರಿನಲ್ಲಿ ಅಂಬೇಡ್ಕರ್ ಮ್ಯೂಸಿಯಮ್, ದೇಶದಲ್ಲೇ ಅತ್ಯಂತ ಎತ್ತರದ ಪ್ರತಿಮೆ ಸ್ಥಾಪನೆ: ಸಿಎಂ ಸಿದ್ದರಾಮಯ್ಯ

Published

on

ಬೆಂಗಳೂರು: ಬೆಂಗಳೂರಿನಲ್ಲಿ ಅಂಬೇಡ್ಕರ್ ಮ್ಯೂಸಿಯಮ್ ಮತ್ತು ಇಡೀ ದೇಶದಲ್ಲೇ ಅತ್ಯಂತ ಎತ್ತರದ ಅಂಬೇಡ್ಕರ್ ಪ್ರತಿಮೆ ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

 

ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಆಯೋಜಿಸಿದ್ದ ಸಂವಿಧಾನ ಶಿಲ್ಪಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ, ಬಾಬಾ ಸಾಹೇಬರ ಜೀವನ ಸಾಧನೆಗಳನ್ನು ಮತ್ತಷ್ಟು ಪ್ರಚುರಪಡಿಸಲು ಮೈಸೂರು ವಿಶ್ವವಿದ್ಯಾಲಯದಲ್ಲಿ ಸಂವಿಧಾನ ಪೀಠ ಮತ್ತು ಬೆಂಗಳೂರಿನಲ್ಲಿ ಮ್ಯೂಸಿಯಮ್ ಮತ್ತು ಆಂಧ್ರದ ಮಾದರಿಯನ್ನೂ ಮೀರಿದ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲಾಗುವುದು ಎಂದರು.

 

ಅಂಬೇಡ್ಕರ್ ಸೋಲಿಗೆ ಸಾವರ್ಕರ್ ಕಾರಣ: ಇದೇ ವೇಳೆ ಆರ್ ಎಸ್ ಎಸ್ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ, ಚುನಾವಣೆಯಲ್ಲಿ ನನ್ನ ಸೋಲಿಗೆ ಸಾವರ್ಕರ್ ಕಾರಣ ಎಂದು ಸ್ವತಃ ಅಂಬೇಡ್ಕರ್ ಅವರೇ ಬರೆದಿದ್ದಾರೆ. ಆದರೆ ಅಂಬೇಡ್ಕರ್ ಸೋಲಿಗೆ ಕಾಂಗ್ರೆಸ್ ಕಾರಣ ಎಂದು ಮನುವಾದಿಗಳು ಹಸಿ ಸುಳ್ಳಿನ ಅಪಪ್ರಚಾರ ಮಾಡುತ್ತಿದ್ದಾರೆ. ಮನುವಾದಿಗಳು ಇದ್ದಕಿದ್ದಂತೆ ಅಂಬೇಡ್ಕರ್ ಮೇಲೆ ಪ್ರೀತಿ ಬಂದಂತೆ ಆಡುತ್ತಿದ್ದಾರೆ. ಆದರೆ ಸಂವಿಧಾನವನ್ನು ಮೊದಲಿಗೆ ವಿರೋಧಿಸಿದ್ದು ಇವರೇ. ಸಂವಿಧಾನದ ಜಾರಿಯನ್ನು ವಿರೋಧಿಸಿದ್ದವರೇ ಈ ಮನುವಾದಿಗಳು ಎಂದು ಟೀಕಿಸಿದರು.

ಸಂವಿಧಾನದ ಆಶಯ ಈಡೇರಬೇಕಾದರೆ ಅಸಮಾನತೆ, ಅಸ್ಪ್ರಶ್ಯತೆ ಅಳಿಯಬೇಕು. ಜಾತಿ ವ್ಯವಸ್ಥೆ ಇರುವವರೆಗೆ ಸಮಾನತೆ ಬರುವುದಿಲ್ಲ, ಅಸ್ಪೃಶ್ಯತೆ ಅಳಿಯುವುದಿಲ್ಲ ಎಂದು ಅಂಬೇಡ್ಕರ್ ಹೇಳಿದ್ದಾರೆ. ಬಜೆಟ್ ಗಾತ್ರ ಹೆಚ್ಚಾದಂತೆ ಎಸ್.ಸಿ.ಎಸ್.ಪಿ / ಟಿ.ಎಸ್.ಪಿ ಹಣ ಹೆಚ್ಚಾಗಬೇಕು. ಆದರೆ ಬಿಜೆಪಿ ಸರ್ಕಾರ ಕಡಿಮೆ ಮಾಡಿತ್ತು. ನಾವು ಅಧಿಕಾರಕ್ಕೆ ಬಂದ ಬಳಿಕ ಮತ್ತೆ ಯೋಜನಾಗಾತ್ರಕ್ಕೆ ತಕ್ಕಂತೆ ಹೆಚ್ಚಿಸಿದ್ದೀವಿ. ಈ ಬಾರಿ 42,018 ಕೋಟಿ ರೂಪಯಿಯನ್ನು ನಾವು ತೆಗೆದಿಟ್ಟಿದ್ದೀವಿ. ರೂ.8, 300 ಕೋಟಿ .ಸಿ.ಎಸ್.ಪಿ / ಟಿ.ಎಸ್.ಪಿ ಹಣ ದುರುಪಯೋಗ ಪಡಿಸಿಕೊಂಡಿದ್ದು ಬಿಜೆಪಿ. ಇವರು ನಾಚಿಕೆ ಇಲ್ಲದೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

 

 

ವಿದ್ಯಾವಂತರೇ ಜಾತಿವಾದಿ ಸರಿಯಲ್ಲ: ವಿದ್ಯಾವಂತರೇ ಹೆಚ್ಚು ಜಾತಿವಾದಿಗಳಾಗುತ್ತಿರುವುದು ಸರಿಯಲ್ಲ. ಶಿಕ್ಷಣದ ಉದ್ದೇಶ ಜಾತಿವಾದಿಗಳಾಗುವುದಲ್ಲ. ಬಾಬಾ ಸಾಹೇಬ್ ಒಬ್ಬ ವ್ಯಕ್ತಿ ಇಡೀ ದೇಶದ ಶಿಕ್ಷಣ ವಂಚಿತ ನೂರಾರು ಜಾತಿ ಸಮುದಾಯಗಳಿಗೆ ಶಿಕ್ಷಣ ಸಿಗಲು ಕಾರಣಕರ್ತರಾದರು. ಮುಸಲ್ಮಾನರು ಶಿಕ್ಷಣದಿಂದ ವಂಚಿತರಾಗಬಾರದು, ಅವಕಾಶಗಳಿಂದ ವಂಚಿತರಾಗಬಾರದು, ಹೀಗಾಗಿ ಸಂವಿಧಾನ ಹೇಳಿದಂತೆ ನಾವು ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡವರಿಗೆ ಅವಕಾಶ ಕಲ್ಪಿಸುತ್ತಿದ್ದೇವೆ. ಇಷ್ಟಕ್ಕೇ ಕಾಂಗ್ರೆಸ್ ಬರೀ ಮುಸಲ್ಮಾನರನ್ನು ಓಲೈಸುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಬಹುತ್ವದ ದೇಶ ನಿರ್ಮಾಣಕ್ಕೆ, ಭ್ರಾತೃತ್ವದ ಸಮಾಜ ನಿರ್ಮಾಣಕ್ಕೆ ಅಂಬೇಡ್ಕರ್ ಅವರು ಕೊಟ್ಟ ಮಾರ್ಗದಲ್ಲಿ ನಮ್ಮ ಸರ್ಕಾರ ನಡೆಯುತ್ತಿದೆ ಎಂದು ತಿಳಿಸಿದರು.

 

 

Continue Reading
Click to comment

Leave a Reply

Your email address will not be published. Required fields are marked *

Advertisement