Published
10 hours agoon
By
Akkare Newsಮಂಜೇಶ್ವರ ಕುಂಜತ್ತೂರು ಬಳಿ ನಿರ್ಜನ ಪ್ರದೇಶದ ಬಾವಿಯಲ್ಲಿ ಪತ್ತೆಯಾದ ಮಂಗಳೂರಿನ ಆಟೋ ಚಾಲಕ ಮೊಹಮ್ಮದ್ ಷರೀಪ್ ಅವರ ಸಾವು ಕೊಲೆ ಎಂದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ತಿಳಿದು ಬಂದಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಮಂಜೇಶ್ವರ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತನನ್ನು ಮಂಗಳೂರಿನ ಹೊರವಲಯದ ಸುರತ್ಕಲ್ ಮೂಲದ ಅಭಿಷೇಕ್ ಶೆಟ್ಟಿ ಎಂದು ಗುರುತಿಸಲಾಗಿದೆ.
ರಸ್ತೆಯಲ್ಲಿ ನಡೆದ ಹಳೆಯ ಗಲಾಟೆಯೇ ಈ ಕೊಲೆಗೆ ಕಾರಣ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಆರೋಪಿ ಅಭಿಷೇಕ್ ಮಂಗಳೂರಿನಲ್ಲಿ ಖಾಸಗಿ ಶಾಲಾ ಬಸ್ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿದ್ದ, ಅಲ್ಲದೆ ಮಾದಕ ವಸ್ತುಗಳ ದಾಸನಾಗಿದ್ದ ಎಂದು ಕಾಸರಗೋಡು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿ ಬಾಲಕೃಷ್ಣನ್ ನಾಯರ್ ತಿಳಿಸಿದ್ದಾರೆ. ಆರೋಪಿ ವಿಚಾರಣೆ ವೇಳೆ ಕೊಲೆ ಕಾರಣ ತಿಳಿಸಿದ್ದು, ಆರೋಪಿ ಅಭಿಷೇಕ್ ಶೆಟ್ಟಿ ಖಾಸಗಿ ಶಾಲೆಯ ಬಸ್ ಚಲಾಯಿಸುತ್ತಿರುವ ಸಂದರ್ಭ ಮಂಗಳೂರಿನ ರಸ್ತೆಯಲ್ಲಿ ಜಾಗದ ಬಿಡದ ಕಾರಣಕ್ಕೆ ಆಟೋ ಚಾಲಕ ಮಹಮ್ಮದ್ ಷರೀಫ್ ಜೊತೆ ಸಣ್ಣ ಗಲಾಟೆ ನಡೆದಿದೆ.
ಈ ಗಲಾಟೆ ನಡೆದ ಬಳಿಕ ಆರೋಪಿ ಅಭಿಷೇಕ್ ಚಲಾಯಿಸುತ್ತಿದ್ದ ಬಸ್ ಗೆ ಷರೀಫ್ ಪರಿಚಯದ ಆಟೋ ಚಾಲಕರು ರಿಕ್ಷಾವನ್ನು ಅಡ್ಡಗಟ್ಟಿ ತೊಂದರೆ ಕೊಟ್ಟಿದ್ದಾರೆ. ಇದು ಷರೀಪ್ ಹೇಳಿಯೆ ಮಾಡಿಸಿದ್ದು ಎಂದು ಆರೋಪಿ ಅಭಿಷೇಕ್ ನಂಬಿದ್ದ, ಅಲ್ಲದೆ ಷರೀಫ್ ತನ್ನ ವಿರುದ್ದ ಕೆಲಸ ಮಾಡುತ್ತಿದ್ದ ಖಾಸಗಿ ಶಾಲೆಗೆ ದೂರು ಸಲ್ಲಿಸಿದ್ದಾನೆ ಇದರಿಂದಾಗಿ ತನ್ನ ಕೆಲಸ ಹೋಗಿತ್ತು ಎಂದು ಅಭಿಷೇಕ್ ನಂಬಿದ್ದ, ಶಾಲೆಯಲ್ಲಿ ಕೆಲಸ ಕಳೆದುಕೊಂಡ ಬಳಿಕ ಅಭಿಷೇಕ್ ಮನೆಯಲ್ಲಿ ತನ್ನ ಪತ್ನಿಯೊಂದಿಗೆ ಜಗಳವಾಡುತ್ತಿದ್ದು, ಸಂಸಾರದಲ್ಲಿ ಸಮಸ್ಯೆ ಪ್ರಾರಂಭವಾಗಿತ್ತು, ಹೀಗಾಗಿ ಈ ಎಲ್ಲಾ ಕಾರಣಕ್ಕೆ ಮಹಮ್ಮದ್ ಷರೀಫ್ ಕಾರಣ ಎಂದು ನಂಬಿದ್ದ ಅಭಿಷೇಕ ಷರೀಪ್ ಮೇಲೆ ಹಗೆ ತೀರಿಸಿಕೊಳ್ಳಲು ಯೋಚಿಸಿದ್ದ.
ಅದರಂತೆ ಏಪ್ರಿಲ್ 9 ರ ರಾತ್ರಿ ಅಭಿಷೇಕ್ ಬೈಕಂಪಾಡಿಯಿಂದ ಶರೀಫ್‌ನ ಆಟೋದಲ್ಲಿ ಪ್ರಯಾಣ ಬೆಳೆಸಿದ್ದ, ಅಭಿಷೇಕ್ ಹಾಗೂ ಷರೀಫ್ ನಡುವೆ ಗಲಾಟೆ ನಡೆದ ಸಂದರ್ಭ ಅಭಿಷೇಕ್ ಉದ್ದ ತಲೆಗೂದಲನ್ನು ಬಿಟ್ಟಿದ್ದ, ಇದೀಗ ಕೂದಲನ್ನು ಚಿಕ್ಕದಾಗಿ ಕತ್ತರಿಸಿದ ಪರಿಣಾಮ ಶರೀಫ್ ಅವನನ್ನು ಗುರುತಿಸಲು ಸಾಧ್ಯವಾಗಿಲ್ಲ. ಅಭಿಷೇಕ ಆಟೋರಿಕ್ಷಾವನ್ನು ಮಂಜೇಶ್ವರದ ಕುಂಜತ್ತೂರು ಪಡುವು ಎಂಬ ಪ್ರದೇಶಕ್ಕೆ ತೆರಳುವಂತೆ ಹೇಳಿದ್ದಾನೆ. ಈ ಪ್ರದೇಶದಲ್ಲಿ ಅಭಿಷೇಕ ಮಾದಕ ವಸ್ತುಗಳನ್ನು ಸೇವೆನೆ ಆಗಾಗ್ಗೆ ಹೋಗುತ್ತಿರುವ ಸ್ಥಳವಾಗಿತ್ತು. ನಿರ್ಜನ ಪ್ರದೇಶವಾದ ಹಿನ್ನಲೆ ಆರೋಪಿ ಅಭಿಷೇಕ್ ಶರಿಫ್ ನನ್ನು ಕುತ್ತಿಗೆಗೆ ಇರಿದು ಕೊಲೆ ಮಾಡಿ ಬಳಿಕ ದೇಹವನ್ನು ಅಲ್ಲೆ ಪಾಳು ಬಿದ್ದ ಬಾವಿಗೆ ಹಾಕಿದ್ದಾನೆ. ಬಳಿಕ ದಾರಿಯಲ್ಲಿ ಸಿಕ್ಕ ಸ್ಕೂಟರ್ ನಲ್ಲಿ ಡ್ರಾಪ್ ತೆಗೆದುಕೊಂಡು ತನ್ನ ಸಂಬಂಧಿಕರ ಮನೆಗೆ ತೆರಳಿದ್ದಾನೆ.
ಏನಿದು ಘಟನೆ?
ಕುಂಜತ್ತೂರು ಬಳಿಯ ಅಡ್ಕಪ್ಪಳ್ಳ ಮಾನಿಗುಡ್ಡೆಯಲ್ಲಿ ಆವರಣ ಗೋಡೆಯಿಲ್ಲದ ಬಾವಿಯಲ್ಲಿ ಮಂಗಳೂರಿನ ಮೂಲ್ಕಿ ಕೊಲಾ°ಡು ನಿವಾಸಿ, ಮಂಗಳೂರಿನಲ್ಲಿ ಆಟೋ ಚಾಲಕರಾಗಿ ದುಡಿಯುತ್ತಿದ್ದ ಮೊಹಮ್ಮದ್ ಶರೀಫ್ (52) ಅವರ ಮೃತ ದೇಹ ಪತ್ತೆಯಾಗಿತ್ತು. ಬಾವಿಯ ಬಳಿ ರಕ್ತ ಮಿಶ್ರಿತ ಬಟ್ಟೆಗಳು, ಪಾದರಕ್ಷೆ, ಪರ್ಸ್ ಪತ್ತೆಯಾಗಿತ್ತು. ಸ್ಥಳೀಯರು ನೀಡಿದ ಮಾಹಿತಿಯಂತೆ ಮಂಜೇಶ್ವರ ಪೊಲೀಸರು ಸ್ಥಳಕ್ಕೆ ತಲುಪಿ ಪರ್ಸ್ ತೆರೆದು ನೋಡಿದಾಗ ಮೃತಪಟ್ಟ ವ್ಯಕ್ತಿಯ ಭಾವಚಿತ್ರ ಹಾಗೂ ದಾಖಲೆ ಪತ್ರಗಳು ಕಂಡು ಬಂದಿವೆ. ಈ ಬಗ್ಗೆ ಮಂಜೇಶ್ವರ ಪೊಲೀಸರು ಮೂಲ್ಕಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ವೇಳೆ ಮೊಹಮ್ಮದ್ ಶರೀಫ್ ನಾಪತ್ತೆಯಾದ ಬಗ್ಗೆ ಕೇಸು ದಾಖಲಾಗಿರುವ ವಿಷಯ ತಿಳಿದು ಬಂದಿದೆ. ವಿಷಯ ತಿಳಿದು ಸಂಬಂಧಿಕರು ಸ್ಥಳಕ್ಕೆ ತಲುಪಿ ಆಟೋ ರಿಕ್ಷಾ ನಾಪತ್ತೆಯಾದ ವ್ಯಕ್ತಿಯದ್ದೆಂದು ದೃಢೀಕರಿಸಿದ್ದಾರೆ.
ಎಪ್ರಿಲ್ 11ರಂದು ಬೆಳಗ್ಗೆ ಬಾವಿಯಿಂದ ಮೇಲಕ್ಕೆತ್ತಿದ ಮೃತದೇಹದಲ್ಲಿ ಇರಿತದಿಂದ ಉಂಟಾದ ಗಾಯಗಳು ಕಂಡು ಬಂದಿತ್ತು. ಬಳಿಕ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು. ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಮೃತದೇಹದ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕೊಲೆ ಕೃತ್ಯವಾಗಿದೆಯೆಂದು ದೃಢೀಕರಿಸಲಾಗಿದೆ. ಕುತ್ತಿಗೆ ಹಾಗೂ ತಲೆಯ ಹಿಂಭಾಗದಲ್ಲಿ ಉಂಟಾದ ಇರಿತದ ಗಾಯವೇ ಸಾವಿಗೆ ಕಾರಣವೆಂದು ತಿಳಿದು ಬಂದಿದೆ.