Published
3 hours agoon
By
Akkare Newsಪುತ್ತೂರು: ಪ್ರತೀ ಬಾರಿ ಚುನಾವಣೆ ಬಂದಾಗ, ಧಾರ್ಮಿಕ ವೇದಿಕೆಗಳಲ್ಲಿ ಹಿಂದುತ್ವದ ಬಗ್ಗೆ ಮಾತನಾಡುವವರಿಗೆ ದೇವಸ್ಥಾನಕ್ಕೆ ತೆರಳುವ ರಸ್ತೆಯನ್ನು ಅಭಿವೃದ್ದಿ ಮಾಡಬೇಕು ಎಂಬ ಕನಿಷ್ಡ ಜ್ಞಾನ ಬಾರದೇ ಇರುವುದು ಹಿಂದುತ್ವ ಭಾಷಣಗಾರರ ನಕಲಿತ್ವಕ್ಕೆ ಸಾಕ್ಷಿಯಾಗಿದೆ ,ಜನ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಅವರು ಕೆಯ್ಯೂರು ಗ್ರಾಮದ ಗ್ರಾಮ ದೇವಸ್ಥಾನವಾದ ಶ್ರೀಮಹಿಷಮರ್ಧಿನಿ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ತೆರಳುವ ನೂತನ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು.
ಈ ರಸ್ತೆಯನ್ನು ಅಭಿವೃದ್ದಿ ಮಾಡಿ ಎಂದು ಇಲ್ಲಿನಭಕ್ತಾದಿಗಳು ಕಳೆದ 20 ವರ್ಷಗಳಿಂದ ಮನವಿ ಮಾಡುತ್ತಿದ್ದಾರೆ ಆದರೆ ಇವರ ನೋವು ಯಾರಿಗೂ ಕೇಳಿಸಲಿಲ್ಲ. ಹೋದಲ್ಲೆಲ್ಲಾ ಹಿಂದುತ್ವದ ಭಾಷಣ ಮಾಡಿ ,ನಾವು ಹಾಗೆ ,ನಾವು ಹೀಗೆ ಎಂದು ಭಾಷಣ ಬಿಗಿಯುವರೂ ಇಲ್ಲಿ ಶಾಸಕರಾಗಿದ್ದು ಅವರೂ ಇಲ್ಲಿಗೆ ಅನುದಾನ ನೀಡಿಲ್ಲ. ಹಿಂದುತ್ವ ಅಂದ್ರೆ ಕೇವಲ ಭಾಷಣ ದಲ್ಲಿ ಮಾತ್ರ ತೋರ್ಪಡಿಸಿದರೆ ಸಾಲದು ಹಿಂದೂ ದೇವಸ್ಥಾನಕ್ಕೆ ತೆರಳುವ ರಸ್ತೆಯನ್ನಾದರೂ ದುರಸ್ಥಿ ಮಾಡಿದ್ದರೆ ಇವರ ಹಿಂದುತ್ವ ಭಾಷಣಕ್ಕೆ ಕೊಂಚ ಗೌರವವಾದರೂ ಸಿಗುತ್ತಿತ್ತು ಎಂದು ಶಾಸಕರು ಲೇವಡಿ ಮಾಡಿದರು.
ನಾನು ಶಾಸಕನಾಗುವ ಮೊದಲೂ ಶಾಸಕನಾದ ಬಳಿಕವೂ ದೇವಸ್ಥಾನದ ಜೀರ್ಣೋದ್ದಾರ, ಬ್ರಹ್ಮಕಲಶಕ್ಕೆ ಕೈ ಜೋಡಿಸಿದ್ದೇನೆ. ಶಾಸಕನಾದ ಬಳಿಕ ಹಿಂದೂ ದೇವಸ್ಥಾನಕ್ಕೆ 7.5 ಕೋಟಿ ರೂ ಅನುದಾನ ತಂದಿದ್ದೇನೆ. ಕೊಟ್ಟ ಮಾತಿನಂತೆ ನಡೆದಿದ್ದೇನೆ ನಾನೆಂದೂ ವೋಟಿಗಾಗಿ ಜನರಮುಂದೆ ರೈಲು ಬಿಡುವ ಕೆಲಸವನ್ನು ಮಾಡಿಲ್ಲ ಎಂದು ಹೇಳಿದರು.
ಶಾಸಕನಾದ ಬಳಿಕ ನಾನು ಕ್ಷೇತ್ರದ ಕಟ್ಟಕಡೇಯ ವ್ಯಕ್ತಿಗೂ ಶಾಸಕನಾಗಿ ಕೆಲಸ ಮಾಡಿದ್ದೇನೆ, ಎಲ್ಲೂ ಯಾರಿಗೂ ಮೋಸ ಮಾಡಿಲ್ಲ, ಅಧಿಕಾರದಲ್ಲಿ ರಾಜಧರ್ನ ಪಾಲಿಸಿದ್ದೇನೆ. ಎಲ್ಲಾ ಧರ್ಮದವರನ್ನೂ ಸಮಾನ ದೃಷ್ಟಿಯಿಂದ ಕಾಣುತ್ತಿದ್ದೇನೆ. ದೇಶದಲ್ಲಿ ಎಲ್ಲಾ ಜಾತಿ, ಧರ್ಮದವರು ಸಹೋದರರಂತೆ ಬಾಳಿದರೆ ಮಾತ್ರ ದೇಶ ವಿಶ್ವಗುರುವಾಗಲು ಸಾಧ್ಯ ಎಂದು ಹೇಳಿದರು.
ದೇವಸ್ಥಾನದ ರಸ್ತೆಗೆ 20 ಲಕ್ಷ ಅನುದಾನ:
ಇಲ್ಲಿನ ಗ್ರಾಮ ದೇವಸ್ಥಾನದ ರಸ್ತೆ ಕಾಂಕ್ರೀಟ್ ಗೆ 20 ಲಕ್ಷ ಅನುದಾನ ನೀಡಿದ್ದೇನೆ. ಕಳೆದ ಚುನಾವಣೆಯ ಸಮಯದಲ್ಲಿ ಕೊಟ್ಟ ಮಾತನ್ನು ಉಳಿಸಿದ್ದೇನೆ. ಕೆಯ್ಯೂರು ಗ್ರಾಮಕ್ಕೆ ಒಟ್ಟು 407 ಲಕ್ಷ ರೂ ಅನುದಾನವನ್ನು ನೀಡಿದ್ದೇನೆ ಎಂದು ಹೇಳಿದ ಶಾಸಕರು ಪ್ರತೀ ಗ್ರಾಮಕ್ಕೆ ಅನುದಾನವನ್ನು ಸಮಪ್ರಮಾಣದಲ್ಲಿ ಹಂಚಿಕೆ ಮಾಡಿದ್ದೇನೆ ಎಂದು ಹೇಳಿದರು.
20 ವರ್ಷದ ಬೇಡಿಕೆ ಈಡೇರಿದೆ: ಎ ಕೆ ಜಯರಾಮ ರೈ
ದೇವಸ್ಥಾನದ ರಸ್ತೆಯನ್ನು ಅಭಿವೃದ್ದಿ ಮಾಡಿ ಎಂದು ಕಳೆದ 20 ವರ್ಷಗಳಿಂದ ಮನವಿ ಮಾಡಿಕೊಂಡು ಬಂದಿದ್ದೇನೆ. ಈಬಾರಿ ಯೋಗ ಕೂಡಿ ಬಂದಿದೆ. ಅಶೋಕ್ ರೈಶಾಸಕರಾದ ಬಳಿಕ ಕೆಯ್ಯೂರು ಗ್ರಾಮದಲ್ಲಿ ಹೆಚ್ಚಿನ ಅಭಿವೃದ್ದಿ ಕೆಲಸಗಳು ನಡೆದಿದ್ದು ಇದಕ್ಕಾಗಿ ಗ್ರಾಮಸ್ಥರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಎ ಕೆ ಜಯರಾಮ ರೈ ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ಮುಖಂಎ ಇಳಂತಾಜೆ ಸಂತೋಷ್ ರೈ, ವಲಯ ಕಾಂಗ್ರೆಸ್ ಅಧ್ಯಕ್ಷ ಜಯಂತ್ ಪೂಜಾರಿ ಕೆಂಗುಡೇಲು, ದಾಮೋದರ್ ಪೂಜಾರಿ ಕೆಂಗುಡೇಲು, ಶೀನಪ್ಪ ರೈ, ಅಶೋಕ್ ರೈ ದೇರ್ಲ, ಉಮಾಕಾಂತ್ ಬೈಲಾಡಿ,ಗ್ರಾಪಂ ಸದಸ್ಯ ಅಬ್ದುಲ್ ಖಾದರ್ ಮೇರ್ಲ, ಹನೀಫ್ ಕೆ ಎಂ ಮಾಡಾವು, ಆದರ್ಶ್ ರೈ ದೇವಿನಗರ, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು, ರೂಪರೇಖಾ ಆಲ್ವ, ರಾಮಣ್ಣ ಪಿಲಿಂಜ, ಲಿಂಗಪ್ಪ ಗೌಡ ಕಣಿಯಾರು, ಬಡ್ಯಪ್ಪ ರೈ,ಬಾಬು ಎರಕ್ಕಲ,ಮತ್ತಿತರರು ಉಪಸ್ಥಿತರಿದ್ದರು.