Published
11 hours agoon
By
Akkare Newsಬೆಳ್ಳಗಿರುವುದೆಲ್ಲಾ ಹಾಲಲ್ಲ ಕೆಂಪು ಬಣ್ಣದ ಹುಡಿಗಳೆಲ್ಲ ಕುಂಕುಮವಲ್ಲ – ಮುಳಿಯ ಕೇಶವ ಪ್ರಸಾದ್
ಧಾರ್ಮಿಕ ಕಾರ್ಯಕ್ರಮಗಳಿಗೆ ಸದಾ ಸಹಕಾರ – ಪಂಜಿಗುಡ್ಡೆ ಈಶ್ವರ ಭಟ್
ಪುತ್ತೂರು, ಏಪ್ರಿಲ್ 27, ಭಾರತೀಯ ಭವ್ಯ ಸನಾತನ ಪರಂಪರೆಯ ಅಸ್ಮಿತೆಯಾದ ಸಿಂಧೂರದ ಕುರಿತಾದ ಮಹತ್ವವನ್ನು ತಿಳಿಸುವ ಹಿನ್ನೆಲೆಯಲ್ಲಿ, ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪದ ಸಂಚಾಲಕಿ ಕೃಷ್ಣವೇಣಿ ಮುಳಿಯ ಅವರ ಮುತುವರ್ಜಿಯಲ್ಲಿ, ಕಾಸರಗೋಡಿನ ಲೇಖಕಿ ಶೀಲಾ ಲಕ್ಷ್ಮೀ ಅವರು ಬರೆದ ಕೃತಿ ‘ಕುಂಕುಮ ಮಹತಿ’ ಯು ರವಿವಾರ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಚೇರಿ ಸಭಾಂಗಣ ದಲ್ಲಿ ಲೋಕಾರ್ಪಣೆಗೊಂಡಿತು.
ದೇವಾಲಯ ಸಂವರ್ಧನ ಸಮಿತಿ ಮಂಗಳೂರು ವಿಭಾಗ ನೇತೃತ್ವದಲ್ಲಿ , ಮುಳಿಯ ಪ್ರತಿಷ್ಠಾನ ಪುತ್ತೂರು ಪ್ರಕಾಶನದಲ್ಲಿ, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಕಾರದಲ್ಲಿ ಕೃತಿ ಲೋಕಾರ್ಪಣಾ ಕಾರ್ಯಕ್ರಮ ನಡೆಯಿತು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ವಿ. ಎಸ್ ಭಟ್ ಅವರು ಶ್ರೀ ಲಲಿತಾಂಬಿಕೆಗೆ ದೀಪ ಪ್ರಜ್ವಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಧಾರ್ಮಿಕ ಚಿಂತಕ ಕಶೆಕೋಡಿ ಸೂರ್ಯನಾರಾಯಣ ಭಟ್ ಕೃತಿಯನ್ನು ಲೋಕಾರ್ಪಣೆ ಮಾಡಿ, ಮಹತಿ ಎಂದರೆ ಮಹತ್ವದಲ್ಲಿ ದೊಡ್ಡದು. ಗುಣದಲ್ಲಿ ಜೇಷ್ಠತ್ವ ಮುಖ್ಯ.ಕುಂಕುಮದ ಮಹತ್ವ ಕೃತಿಯಲ್ಲಿ ಕುಂಕುಮಕ್ಕಿಂತ ಹೆಚ್ಚು ಶ್ರೀ ಲಲಿತೆಯ ಮಾಹಿತಿಯು ಇದೆ. ಕುಂಕುಮ ದ ಬಗ್ಗೆ ಬರೆಯಬೇಕಾದರೆ ತಾಯಿ, ಜಗನ್ಮಾತೆಯ ಉಲ್ಲೇಖವೂ ಬೇಕು,
ಮುಖ, ಧರಿಸಿದ ವಸ್ತ್ರ, ಮಾತನಾಡುವ ಶೈಲಿ ನೋಡಿದಾಗ ಆ ವ್ಯಕ್ತಿಯ ವ್ಯಕ್ತಿತ್ವ ಗೊತ್ತಾಗುತ್ತದೆ. ವಿದ್ಯೆಯ ಜತೆ ವಿನಯವೂ ಇದ್ದರೆ ಮಾತ್ರ ಮನುಷ್ಯನಿಗೆ ಗೌರವ. ಸನಾತನ ಧರ್ಮದ ಆಚರಣೆ, ಸಂಸ್ಕಾರಗಳನ್ನು ಎಳೆಯ ಮಕ್ಕಳಿಗೆ ತಿಳಿಸಿಕೊಡುವ ಕೆಲಸ ಆಗಬೇಕು ಎನ್ನುತ್ತಾ ಕೃತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರತಿ ಲೋಕಾರ್ಪಣೆ ಮಾಡುವ ಮುನ್ನ ಕುಂಕುಮ ಮಹತಿ ಕೃತಿಗೆ ದೇವಸ್ಥಾನದ ಪ್ರಧಾನ ಅರ್ಚಕರಾದ ವಿ. ಎಸ್ ಭಟ್ ಅವರು ಆರತಿ ಬೆಳಗಿರುವುದು ವಿಶೇಷವಾಗಿತ್ತು.
ಲೇಖಕಿ ಶೀಲಾ ಲಕ್ಷ್ಮಿ ಅವರು ಕೃತಿಯ ಪರಿಚಯ ಮಾಡಿ, ಕರಾವಳಿ ಭಾಗದಲ್ಲಿ ಜನ ಜೀವನದಲ್ಲಿ ನೀತಿ- ನಿಯಮ, ಕಟ್ಟು ಪಾಡುಗಳನ್ನು ಆಚರಿಸುತ್ತಾ ಬಂದಿದ್ದೇವೆ. ಇವು ನಂಬಿಕೆ ಆಧಾರದಲ್ಲಿ ನಿಂತಿವೆ. ಹಿಂದೆಯೂ ಕುಂಕುಮ ಧಾರಣೆ ಕಡ್ಡಾಯವಾಗಿತ್ತು. ಚಂಚಲ ಮನಸ್ಸನ್ನು ಇದು ನಿಯಂತ್ರಿಸುತ್ತದೆ ಎಂಬ ನಂಬಿಕೆ ಇತ್ತು ಎನ್ನುತ್ತಾ,ಕೃತಿ ರಚನೆಗೆ ಪ್ರೇರಣಾಶಕ್ತಿ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಯವರಿಗೆ ನಮನಗಳನ್ನು ಸಲ್ಲಿಸುತ್ತಾ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಸಾವಯವ ಕುಂಕುಮವನ್ನು ಮಕ್ಕಳಿಗೆ ತಿಲಕವಿಡುವ ಮೂಲಕ ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅನಾವರಣಗೊಳಿಸಿ, ಹಿಂದೂ ಧರ್ಮದ ರಕ್ಷಣೆಗೆ ಹಾಗೂ ಧಾರ್ಮಿಕ ವಿಚಾರಗಳಿಗೆ ದೇವಸ್ಥಾನದ ದೇವಸ್ಥಾನದ ವ್ಯವಸ್ಥಾಪನ ಸಮಿತಿಯು ಸದಾ ಸಹಕಾರ ನೀಡಲಿದೆ ಎನ್ನುತ್ತಾ ಕೃತಿಯ ರಚನೆ ಕುರಿತು ಅಭಿನಂದನ ನುಡಿಗಳನ್ನಾಡಿದರು. ಬಳಿಕ ಆಗಮಿಸಿದ ಸರ್ವರಿಗೂ ಸಾವಯವ ಕುಂಕುಮ ಹಂಚಲಾಯಿತು.
ಗೌರವಾರ್ಪಣೆ ಧಾರ್ಮಿಕ ಶಿಕ್ಷಣ ಬೋಧಿಸುವ ಗುರುಗಳಾದ ಡಾ. ವಿಜಯ ಸರಸ್ವತಿ ಹಾಗೂ ಶ್ರೀಮತಿ ಶಂಕರಿ ಶರ್ಮ ಹಾಗೂ ಲೇಖಕಿ ಶ್ರೀಮತಿ ಶೀಲಾ ಲಕ್ಷ್ಮೀ ಕಾಸರಗೋಡು ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ದೇವಾಲಯ ಸಂವರ್ಧನ ಸಮಿತಿಯ ವಿಭಾಗ ಪ್ರಮುಖ್ ಕೇಶವ ಪ್ರಸಾದ್ ಮುಳಿಯ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಬೆಳ್ಳಗಿರುವುದೆಲ್ಲಾ ಹಾಲಲ್ಲ, ಹಾಗೇನೆ ಕೆಂಪಗೆ ಇರುವುದೆಲ್ಲಾ ಕುಂಕುಮ ಅಲ್ಲ ಎಂದು ತಿಳಿಸಲು ಈ ಪುಸ್ತಕ ಎಂದರಲ್ಲದೇ, ದೇವಾಲಯ ಸಂವರ್ಧನಾ ಸಮಿತಿ ಕರ್ನಾಟಕ ಇದು ದೇವಾಲಯಗಳಲ್ಲಿ ಧರ್ಮ ಜಾಗೃತಿ, ಹಿಂದೂ ಧಾರ್ಮಿಕ ಶಿಕ್ಷಣ, ಸಂಸ್ಕೃತಿ ಪ್ರಸರಣ, ಸಮಾಜಸೇವಾ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ದೇವಾಲಯಗಳಲ್ಲಿ ವ್ಯವಸ್ಥಾಪನಾ ಸಮಿತಿಗೆ ಪೂರಕವಾಗಿ ಕೆಲಸ ಮಾಡಲಿದೆ ಎಂದರು.
ಕೃತಿ ಲೋಕಾರ್ಪಣೆಯ ಬಳಿಕ ಭಗವತ್ ಭಕ್ತ ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆ ಯಿತು.
ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಉಮೇಶ್ ನಾಯಕ್, ದೇವಾಲಯ ಸಂವರ್ಧನ ಸಮಿತಿ ಮಂಗಳೂರು ವಿಭಾಗ ಪ್ರಮುಖ್ ಗಣೇಶ ಮಂಗಳೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವಿವೇಕಾನಂದ ಸ್ನಾತಕೋತ್ತರ ವಿಭಾಗ ದ ಡೀನ್ ಡಾ. ವಿಜಯ ಸರಸ್ವತಿ ಕಾರ್ಯಕ್ರಮ ನಿರ್ವಹಿಸಿದರು. ಕುಮಾರಿ ಸನ್ನಿಧಿ ಕಜೆ ಪ್ರಾರ್ಥನೆ ನೆರವೇರಿಸಿದರು, ಶ್ರೀಮತಿ ಪ್ರಭಾವತಿ ಹಾಗೂ ತೇಜಸ್ವಿನಿ ಅವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.