Connect with us

ಇತರ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಿಂಚು-ಗುಡುಗು ಸಹಿತ ಧಾರಾಕಾರ ಮಳೆ

Published

on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ರವಿವಾರ ಸಂಜೆ ಬಳಿಕ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆ ಸುರಿದಿದೆ. ಬೆಳಗ್ಗೆ ಮೋಡದಿಂದ ಕೂಡಿದ ವಾತಾವರಣವಿತ್ತು. ಬಿಸಿಲು ಮತ್ತು ಸೆಕೆಯಿಂದ ಕೂಡಿದ್ದ ವಾತಾವರಣ ಸಂಜೆ ಮಳೆ ಸುರಿದ ಬಳಿಕ ತುಸು ತಂಪು ಕಂಡಿತ್ತು.
ಪುತ್ತೂರು, ಬಂಟ್ವಾಳ, ಸಂಪ್ಯ, ಉಪ್ಪಿನಂಗಡಿ, ಹಿರೇಬಂಡಾಡಿ, ಸುಳ್ಯ, ಕರಿಕ್ಕಳ, ಪೆರ್ಲಂಪಾಡಿ, ಬೆಳ್ಳಾರೆ, ಮಂಗಳೂರು ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ.
ರಸ್ತೆಯಲ್ಲಿ ಕೃತಕ ನೆರೆ ಭಾರೀ ಮಳೆ ಸುರಿದ ಪರಿಣಾಮ ಜಿಲ್ಲೆಯ ವಿವಿಧ ಕಡೆಗಳಲ್ಲಿ ರಸ್ತೆಯಲ್ಲಿ ಕೃತಕ ನೆರೆ ಸೃಷ್ಟಿಯಾಗಿ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಯಿತು.

ಕೊಳ್ತಿಗೆ ಪರಿಸರದಲ್ಲಿ ಆಲಿಕಲ್ಲು ಸಹಿತ ಮಳೆ
ಪುತ್ತೂರು: ತಾಲೂಕಿನ ವಿವಿಧ ಭಾಗದಲ್ಲಿ ರವಿವಾರ ಸಂಜೆ ಆಲಿಕಲ್ಲು ಸಹಿತ ಉತ್ತಮ ಮಳೆಯಾಗಿದೆ. ಕೊಳ್ತಿಗೆ ಗ್ರಾಮದಲ್ಲಿ ಸಂಜೆ 4.30ರಿಂದ ಮಳೆಯಾಗಿದ್ದು ಕೆಲ ಹೊತ್ತು ಆಲಿಕಲ್ಲು ಸಹಿತ ಧಾರಾಕಾರ ಮಳೆ ಸುರಿದಿದೆ. ಕೆಲವು ಕೃಷಿ ತೋಟಗಳಲ್ಲಿ ಅಡಿಕೆ ಮರಕ್ಕೆ ಹಾನಿ ಉಂಟಾಗಿದೆ. ಪುತ್ತೂರು ನಗರದ ಆಸುಪಾಸಿನಲ್ಲಿ ಸಂಜೆ ವೇಳೆ ಗುಡುಗು ಸಹಿತ ಸಾಧಾರಣ ಮಳೆಯಾಗಿದೆ.


ರಸ್ತೆ ಬದಿ ಕುಸಿತ
ಧರ್ಮಸ್ಥಳ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಬೆಳ್ಳಾರೆ-ಪೆರುವಾಜೆ-ಸವಣೂರು ನಡುವಿನ ಪೆರುವಾಜೆ ಗ್ರಾಮದ ಪುದ್ದೊಟ್ಟು ಸೇತುವೆ ಸನಿಹ ಮಾಪ್ಲಮಜಲು ಬಳಿ ರವಿವಾರ ಭಾರೀ ಮಳೆಗೆ ಗೌರಿ ಹೊಳೆಗೆ ತಾಗಿಕೊಂಡ ರಸ್ತೆ ಬದಿ ಕುಸಿದಿದೆ. ಡಾಮರು ರಸ್ತೆಯಲ್ಲಿಯೂ ಬಿರುಕು ಬಿಟ್ಟಿದ್ದು ಅಪಾಯದ ಆತಂಕ ಮೂಡಿದೆ.

ನಾಲ್ಕು ದಿನ ಮಳೆ ಸಾಧ್ಯತೆ
ಕರಾವಳಿ ಭಾಗದಲ್ಲಿ ನಾಲ್ಕು ದಿನಗಳ ಕಾಲ ಉತ್ತಮ ಮಳೆ ಸುರಿಯುವ ಸಾಧ್ಯತೆ ಇದ್ದು, ಎ.28 ರಿಂದ ಮೇ 1ರ ವರೆಗೆ ಭಾರತೀಯ ಹವಾಮಾನ ಇಲಾಖೆ “ಎಲ್ಲೋ ಅಲರ್ಟ್‌’ ಘೋಷಿಸಿದೆ. ಮಂಗಳೂರಿನಲ್ಲಿ ರವಿವಾರ 33.4 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 1 ಡಿ.ಸೆ. ಕಡಿಮೆ ಮತ್ತು 22.4 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 2.9 ಡಿ.ಸೆ. ತಾಪಮಾನ ಕಡಿಮೆ ಕಂಡಿತ್ತು.

ಶಿರ್ತಾಡಿ ಪರಿಸರದಲ್ಲಿ ಬಿರುಗಾಳಿ, ಮಳೆಗೆ ವ್ಯಾಪಕ ಹಾನಿ
ಮನೆ, ಕಂಬಗಳ ಮೇಲೆ ಬಿದ್ದ ಮರಗಳು, ತೋಟಗಳಲ್ಲಿ ಕೃಷಿ ನಷ್ಟ
ಮೂಡುಬಿದಿರೆ: ರವಿವಾರ ಸಂಜೆ ಶಿರ್ತಾಡಿ ಪರಿಸರದಲ್ಲಿ ಬಿರುಗಾಳಿ ಸಹಿತ ಸುರಿದ ಮಳೆಗೆ ವ್ಯಾಪಕ ಹಾನಿ ಸಂಭವಿಸಿದೆ. ಸುಮಾರು ಹತ್ತು ಮನೆಗಳ ಮೇಲೆ ಮರ ಬಿದ್ದಿವೆ. ಹಲವು ತೋಟಗಳಲ್ಲಿ ಅಡಿಕೆ, ತೆಂಗಿನ ಮರಗಳು ನೆಲಕ್ಕೆ ಮುರಿದು ಬಿದ್ದಿವೆ. ವಿದ್ಯುತ್‌ ತಂತಿಗಳ ಮೇಲೆ ಮರಗಳು ಬಿದ್ದು ಕಂಬಗಳು ನೆಲಕ್ಕಪ್ಪಳಿಸಿವೆ. ವಿದ್ಯುತ್‌ ಸಂಪರ್ಕ ಕಡಿತವಾಗಿದ್ದು ರಾತ್ರಿ ಹೊತ್ತು ನಷ್ಟದ ಪರಿವೀಕ್ಷಣೆ ಕಷ್ಟಕರವಾಗಿದೆ.

ಶಿರ್ತಾಡಿ ಬಸ್‌ ನಿಲ್ದಾಣ ಪ್ರದೇಶದಲ್ಲಿ ಬಿರುಗಾಳಿಯ ತೀವ್ರತೆಗೆ ಕೆಲವು ಕಟ್ಟಡಗಳ ಎದುರಿನ ಶೀಟುಗಳು ಹಾರಿ ಎಲ್ಲೋ ಬಿದ್ದಿವೆ. ಶಿರ್ತಾಡಿಯ ಅಪ್ಪಿ ಅವರ ಮನೆ ಮೇಲೆ ಮರ ಬಿದ್ದು ತೀವ್ರ ಹಾನಿಯುಂಟಾಗಿದೆ. ನೋಣಯ್ಯ ಅವರ ಮನೆಯ ಹಂಚುಗಳು ಹಾರಿಹೋಗಿವೆ. ಶೀಲಾ ಆನಂದ ಅವರ ಮನೆ ಮೇಲೆಯೇ ಮರ ಬಿದ್ದು ಕಟ್ಟಡ ಬಹುತೇಕ ನಾಶವಾದಂತಿದೆ. ರಮೇಶ ಶಿರ್ತಾಡಿ ಅವರ ಮನೆಗೂ ಗಾಳಿಯಿಂದಾಗಿ ಹಾನಿಯುಂಟಾಗಿದೆ.

ಮೂಡುಮಾರ್ನಾಡು ಗ್ರಾಮದ ನವಿತಾ ಪ್ರಶಾಂತ ಅವರ ಮನೆಗೆ ಸಿಡಿಲು ಬಡಿದು ವಿದ್ಯುತ್‌ ಉಪಕರಣ ಒಡೆದು ಹೋಗಿದೆ. ಗೋಡೆ ಬಿರುಕು ಬಿಟ್ಟು ಅಪಾಯಕಾರಿಯಾಗಿದೆ. ಶಿರ್ತಾಡಿಯ ಪ್ರಸನ್ನ ಜೋಯೆಲ್‌ ಸಿಕ್ವೇರಾ ಅವರ ತೋಟದ 80 ಅಡಿಕೆ, 4 ತೆಂಗು, 60 ಬಾಳೆಗಿಡಗಳು ನೆಲಕ್ಕುರುಳಿವುದಾಗಿ ಅವರು ತಿಳಿಸಿದ್ದಾರೆ. ವಿದ್ಯುತ್‌ ಸಂಪರ್ಕ ಕೂಡ ವ್ಯತ್ಯಯವಾಯಿತು. ಶಿರ್ತಾಡಿ ಪರಿಸರದ ವಾಲ್ಪಾಡಿ, ಜೋಗೊಟ್ಟು, ಪಡುಕೊಣಾಜೆ ಮೊದಲಾದ ಕಡೆಗಳಲ್ಲಿ ತೋಟದ ನಡುವೆ, ಬದಿಗಳಲ್ಲಿ ಹಾದುಹೋಗಿರುವ ವಿದ್ಯುತ್‌ ತಂತಿಗಳ ಮೇಲೆ ಮರಗಳು ಉರುಳಿ ಬಿದ್ದು ವಿದ್ಯುತ್‌ ಕಂಬಗಳು ನೆಲಕ್ಕೆ ಬಿದ್ದಿವೆ.

 

Continue Reading
Click to comment

Leave a Reply

Your email address will not be published. Required fields are marked *

Advertisement