Published
4 hours agoon
By
Akkare Newsವ್ಯಾಪಾರ ನಿಲ್ಲಿಸುವುದಾಗಿ ಬೆದರಿಕೆ ಹಾಕಿದ ಕಾರಣಕ್ಕಾಗಿ ಭಾರತ ಮತ್ತು ಪಾಕಿಸ್ತಾನ ಕದನ ವಿರಾಮವನ್ನು ಒಪ್ಪಿಕೊಂಡಿತ್ತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ವ್ಯಾಪಕ ವಿವಾದವನ್ನು ಹುಟ್ಟುಹಾಕಿದೆ. ಅವರ ಹೇಳಿಕೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ಪಷ್ಟೀಕರಣ ನೀಡುವಂತೆ ಕಾಂಗ್ರೆಸ್ ಸೋಮವಾರ ಪ್ರಶ್ನಿಸಿದೆ.
ಪ್ರಧಾನಿ ಬಹಳ ವಿಳಂಬವಾಗಿ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದ ಕೆಲವು ನಿಮಿಷಗಳ ಹಿಂದೆ ಅಮೆರಿಕ ಅಧ್ಯಕ್ಷ ಟ್ರಂಪ್ ಬಹಿರಂಗಪಡಿಸಿದ ಮಾಹಿತಿ ಎಲ್ಲವನ್ನೂ ತಲೆಕೆಳಗೆ ಮಾಡಿದೆ. ಪ್ರಧಾನಿ ಅವರು ಅವುಗಳ ಬಗ್ಗೆ ಸಂಪೂರ್ಣವಾಗಿ ಮೌನವಾಗಿದ್ದರು.” ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಎಕ್ಸ್ನಲ್ಲಿ ತಿಳಿಸಿದ್ದಾರೆ.
ಭಾರತವು ಅಮೆರಿಕದ ಮಧ್ಯಸ್ಥಿಕೆಗೆ ಒಪ್ಪಿಕೊಂಡಿದೆಯೇ ಅಥವಾ “ತಟಸ್ಥ” ಸ್ಥಳದಲ್ಲಿ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ಒಪ್ಪಿಕೊಂಡಿದೆಯೇ ಎಂದು ರಮೇಶ್ ಪ್ರಶ್ನಿಸಿದ್ದಾರೆ. ಆಟೋಮೊಬೈಲ್ ಮತ್ತು ಕೃಷಿಯಂತಹ ಕ್ಷೇತ್ರಗಳಲ್ಲಿ ಭಾರತೀಯ ಮಾರುಕಟ್ಟೆಗಳಿಗೆ ಹೆಚ್ಚಿನ ಅವಕಾಶ ನೀಡಬೇಕು ಎಂಬ ಅಮೆರಿಕದ ಬೇಡಿಕೆಗಳನ್ನು ಒಪ್ಪಿಕೊಳ್ಳಲು ಭಾರತ ಈಗ ಸಿದ್ಧವಾಗಿದೆಯೇ ಎಂದು ಅವರು ಕೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ “ಪೂರ್ಣ ಮತ್ತು ತಕ್ಷಣದ ಕದನ ವಿರಾಮ”ದ ಮಾತುಕತೆ ತನ್ನ ಮಧ್ಯಸ್ಥಿಕೆಯಿಂದ ನಡೆದಿದೆ ಎಂಬ ಹೇಳಿಕೆಯನ್ನು ಟ್ರಂಪ್ ಸೋಮವಾರ ಪುನರುಚ್ಚರಿಸಿದ್ದಾರೆ.
“ಮೋದಿ ಅವರ ಹೇಳಿಕೆ ಮತ್ತು ಅಮೆರಿಕ ಅಧ್ಯಕ್ಷರ ಹೇಳಿಕೆಯನ್ನು ನಾನು ಕೇಳಿದೆ. ಇದು ತೀವ್ರ ಸಮಸ್ಯಾತ್ಮಕ ವಿಚಾರ” ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಅವರು ಬಣ್ಣಿಸಿದ್ದಾರೆ.
“ಆಪರೇಷನ್ ಸಿಂಧೂರ್ ಅನ್ನು ನಿಲ್ಲಿಸುವಂತೆ ಮಾಡಲು ವ್ಯಾಪಾರವನ್ನು ಬೆದರಿಕೆಯಾಗಿ ಬಳಸಿಕೊಂಡಿರುವುದಾಗಿ ಅಮೆರಿಕ ಅಧ್ಯಕ್ಷರು ಹೇಳುತ್ತಾರೆ. ಪ್ರಧಾನಿ ಇದಕ್ಕೆ ಪ್ರತಿಕ್ರಿಯಿಸುತ್ತಾರೆಂದು ನಾವು ನಿರೀಕ್ಷಿಸಿದ್ದೆವು. ದುರದೃಷ್ಟವಶಾತ್, ಅವರು ಪ್ರತಿಕ್ರಿಯಿಸಲಿಲ್ಲ.” ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಮೋದಿಯನ್ನು ನೇರವಾಗಿ ಪ್ರಶ್ನಿಸದೆ, ಟ್ರಂಪ್ ಅವರ ಪೋಸ್ಟ್ ಅನ್ನು “ಭಾರತಕ್ಕೆ ನಿರಾಶಾದಾಯಕ” ಎಂದು ಕರೆದ್ದಾರೆ.