Published
3 hours agoon
By
Akkare Newsಪುತ್ತೂರು: ಅಕ್ರಮ ಸಕ್ರಮದಡಿ ಅರ್ಜಿ ಹಾಕಿ ನಮ್ಮದು ಇವತ್ತು ಆಗುತ್ತದೆ, ನಾಳೆ ಆಗ್ತದೆ ಎಂದು ಕೆಲವರು ಆಸೆಯಿಂದ ಕಾಯುತ್ತಿದ್ದಾರೆ. ಈ ಹಿಂದೆ ಕೆಲವರು ಹಣವನ್ನೂ ನೀಡಿದ್ದರು. ಬಡವರಿಂದ ಹಣ ಪಡೆದುಕೊಂಡ ಬಳಿಕವೂ ಅವರ ಕಡತದಲ್ಲಿ ಕುಮ್ಕಿ ಎಂದು ಬರೆದು ಏನೂ ಅರಿಯದ ಮುಗ್ದರಿಗೆ ಅನ್ಯಾಯ ಮಾಡಿದ್ದಾರೆ ಇದು ದೇವರು ಮೆಚ್ಚದ ಕೆಲಸವಾಗಿದೆ ಎಂದು ಶಾಸಕ ಅಶೋಕ್ ರೈ ಅವರು ಮುಂಡೂರುನಲ್ಲಿ ನಡೆದ ಅಕ್ರಮ ಸಕ್ರಮ ಬೈಠಕ್‌ನಲ್ಲಿ ಹೇಳಿದರು.
ಮೇ.13ರಂದು ಮುಂಡೂರು ಸಹಕಾರಿ ಸಂಘದ ಸಭಾಭವನದಲ್ಲಿ ನಡೆದ 13 ನೇ ಅಕ್ರಮ ಸಕ್ರಮ ಬೈಠಕ್ ಉದ್ಘಾಟಿಸಿ ಮಾತನಾಡಿ,ಸಾವಿರಾರು ಅಕ್ರಮ ಸಕ್ರಮ ಕಡತಗಳು ಇನ್ನೂ ಇದೆ, ಕಳೆದ ಕೆಲವು ತಿಂಗಳಿಂದ ನಾವು ಕಡತಗಳನ್ನು ಪರಿಶೀಲನೆ ಮಾಡುವ ವೇಳೆ ಬಡವರಿಗೆ ಸೇರಿದ ಹೆಚ್ಚಿನ ಕಡತಗಳಲ್ಲಿ ಕುಮ್ಕಿ ಎಂದು ಬರೆಯಲಾಗಿದೆ, ಅದನ್ನು ನಾವು ಏನೂ ಮಾಡುವ ಹಾಗಿಲ್ಲ ಆ ನಮೂನೆಯಾಗಿ ಕಡತವನ್ನು ಮಾಡಿದ್ದಾರೆ, ಮುಂದೆ ಕುಮ್ಕಿ ಕಾನೂನು ಬಂದಾಗ ಮಾತ್ರ ಅದನ್ನು ನಮಗೆ ವಿಲೇವಾರಿ ಮಾಡಲು ಸಾಧ್ಯವಾಗುತ್ತದೆ, ಈ ವಿಚಾರದಲ್ಲಿ ನನ್ನ ಕ್ಷೇತ್ರದ ಜನತೆ ನನಗೆ ಕ್ಷಮೆ ನೀಡಬೇಕು, ಹಿಂದಿನ ಶಾಸಕರ ಅವಧಿಯಲ್ಲಿ ಮಾಡಿದ ತಪ್ಪಿಗೆ ಈಗ ಏನೂ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು. ಬಡವರಿಂದ ಹಣ ಪಡೆದುಕೊಂಡಿದ್ದಾರೆ ಆ ಬಳಿಕ ಈ ರೀತಿಯಾಗಿ ಕುಮ್ಕಿ ಎಂದು ಬರೆದಿರುವುದು ನ್ಯಾಯವಲ್ಲ , ಹಣ ಕೊಟ್ಟ ಕಾರಣಕ್ಕಾದರೂ ಅದನ್ನು ವಿಲೇವಾರಿ ಮಾಡಬೇಕಿತ್ತು, ಬಡವರಿಗೆ ಮಾಡಿರುವ ಅನ್ಯಾಯವನ್ನು ದೇವರು ಮೆಚ್ಚಲಾರ ಎಂದು ಶಾಸಕರು ಹೇಳಿದರು.
ತಾಲೂಕು ಕಚೇರಿಯ ಕೋಣೆಯಲ್ಲಿ ಬಾಗಿಲು ಹಾಕಿ ಬೈಠಕ್…!
ಈ ಹಿಂದೆ ಅಕ್ರಮ ಸಕ್ರಮ ಬೈಠಕ್ ಗ್ರಾಮಗಳಲ್ಲಿ ನಡೆಯುತ್ತಿರಲಿಲ್ಲ, ತಾಲೂಕು ಕಚೇರಿಯಲ್ಲಿ ಬಾಗಿಲು ಹಾಕಿ ಕಡತ ವಿಲೇವಾರಿ ಮಾಡುತ್ತಿದ್ದರು. ವರ್ಷಕ್ಕೆ ಎರಡು ಬಾರಿ ಅಕ್ರಮ ಸಕ್ರಮ ಬೈಠಕ್ ಆಗುತ್ತಿತ್ತು ಆದರೆ ಈಗ ಅದೇ ಬೈಠಕನ್ನು ಜನರ ಮನೆ ಬಾಗಿಲಲ್ಲಿ ಮಾಡುತ್ತಿದ್ದೇನೆ. ಯಾರಿದಂಲೂ ನಯಾ ಪೈಸೆ ಲಂಚ ಪಡೆದಿಲ್ಲ, ಯಾವುದೇ ರಾಜಕೀಯ ಮಾಡದೆ ಎಲ್ಲಾ ಪಕ್ಷದವರ ಕಡತವನ್ನು ವಿಲೇವಾರಿ ಮಾಡಿದ್ದೇನೆ. ಹಿಂದೆಂದೂ ಆಗದ ರೀತಿಯಲ್ಲಿ ಅಕ್ರಮ ಸಕ್ರಮ ಕಡತ ವಿಲೇವಾರಿ ಮಾಡುತ್ತಿದ್ದೇನೆ ಇದನ್ನು ಜನ ಸ್ವೀಕರಿಸುತ್ತಾರೆ ಎಂಬ ನಂಬಿಕೆ ಇದೆ. ಕೊಟ್ಟ ಮಾತಿಗೆ ಎಂದೂ ದ್ರೋಹ ಬಗೆದವನು ನಾನಲ್ಲ, ಚುನಾವಣೆ ಸಂದರ್ಭದಲ್ಲಿ ವೋಟು ಕೇಳುವಾಗ ನಿಮ್ಮಲ್ಲಿ ಏನು ಹೇಳಿದ್ದೇನೋ ಅದನ್ನು ಮಾಡುವ ಕೆಲಸವನ್ನು ಮಾಡುತ್ತಿದ್ದೇನೆ ಎಂದು ಶಾಸಕರು ಹೇಳಿದರು.
ಭಾಷಣ ಮಾಡಿದವನ ಮಕ್ಕಳು ಗಲಾಟೆಗೆ ಹೋಗುವುದಿಲ್ಲ
ಜಿಲ್ಲೆಯಲ್ಲಿ ಧರ್ಮದ ಹೆಸರಿನಲ್ಲಿ ಅಲ್ಲಲ್ಲಿ ಗಲಾಟೆಗಳು ಆಗುತ್ತದೆ, ಈ ಗಲಾಟೆಯಲ್ಲಿ ಸಾವು ನೋವು ಉಂಟಾಗುವುದು ಬಡವರ ಮಕ್ಕಳಿಗೆ, ಬಾಯಿಗೆ ಬಂದ ಹಾಗೆ ಭಾಷಣ ಮಾಡಿ ಬಡವರ ಮಕ್ಕಳನ್ನು ಉದ್ರೇಕಿಸಿ ಬಿಡುತ್ತಾರೆ ಆ ಬಳಿಕ ಅವರಿಗೇನಾದರೂ ಆದರೆ ಯಾರೂ ಇಲ್ಲ, ಭಾಷಣ ಮಾಡಿದವರ ಮಕ್ಕಳು ಎಲ್ಲೋ ಉನ್ನತ ವಿದ್ಯಾ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುತ್ತಾರೆ ಅಥವಾ ಒಳ್ಳೆಯ ಉದ್ಯೋಗವನ್ನು ಮಾಡಿಕೊಂಡಿರುತ್ತಾರೆ. ಕಂಡವರ ಮಕ್ಕಳನ್ನು ತಮ್ಮ ಲಾಭಕ್ಕೋಸ್ಕರ ಬಳಸುವುದನ್ನು ಎಲ್ಲಾ ಸಂಘಟನೆಗಳು ನಿಲ್ಲಿಸಬೇಕು. ಯುವಕರನ್ನು ಒಳ್ಳೆಯ ಕೆಲಸಕ್ಕೆ ಬಳಕೆ ಮಾಡಿಕೊಳ್ಳಿ, ಅವರಿಗೆ ಉದ್ಯೋಗ ಕೊಡಿಸಿ, ಅವರಿಗೆ ನೆಮ್ಮದಿಯ ಜೀವನ ಕೊಡಿಸಿ ಎಂದು ಹೇಳಿದ ಶಾಸಕರು ಸಮಾಜಘಾತುಕ ಶಕ್ತಿಗಳನ್ನಾಗಿ ಯುವಕರನ್ನು ಮಾಡಬೇಡಿ ಅವರಿಗೂ ತಂದೆ ತಾಯಿ ಇದ್ದಾರೆ, ಹೆಂಡತಿ ಮಕ್ಕಳಿದ್ದಾರೆ ಎಂಬ ವಿಚಾರವನ್ನು ಎಲ್ಲಾ ಧರ್ಮದ ಸಂಘಟನೆಯ ಮುಖಂಡರು ಅರ್ಥಮಾಡಿಕೊಳ್ಳಬೇಕು ಎಂದು ಶಾಸಕರು ಹೇಳಿದರು.
ಹಿಂದುತ್ವದ ಬಗ್ಗೆ ಭಾಷಣ ಮಾಡುವವರು ದೇವಸ್ಥಾನದ ಜಾಗವನ್ನು ಸಕ್ರಮ ಮಾಡಿಲ್ಲ ಯಾಕೆ?
ಬಿಜೆಪಿಯವರು ಹಿಂದುತ್ವದ ಬಗ್ಗೆ ಮಾತನಾಡುತ್ತಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹೆಣ್ಣು ಮಕ್ಕಳು ರಸ್ತೆಯಲ್ಲಿ ನಡೆದಾಡಲು ಸಾಧ್ಯವಿಲ್ಲ ಎಂದು ಅಪಪ್ರಚಾರ ಮಾಡುತ್ತಾರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದೂಗಳಿಗೆ ಅಪಾಯ ಎಂದು ಪ್ರಚಾರ ಮಾಡುತ್ತಾರೆ ಆದರೆ ಇದೇ ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಒಂದೇ ಒಂದು ದೇವಸ್ಥಾನ, ದೈವಸ್ಥಾನ, ನಾಗನಕಟ್ಟೆ, ಭಜನಾಮಂದಿರದ ಜಾಗವನ್ನು ಸಕ್ರಮ ಮಾಡಿಲ್ಲ ಯಾಕೆ? ಇವರು ವೋಟಿಗಾಗಿ ಮಾತ್ರ ಹಿಂದುತ್ವ ಬಳಕೆ ಮಾಡುತ್ತಾರೆ, ವೋಟು ಮುಗಿದ ಬಳಿಕ ಸುಮ್ಮನಾಗುತ್ತಾರೆ. ಕಾಂಗ್ರೆಸ್ ಸರಕಾರ ಈ ಬಾರಿ ರಾಜ್ಯದಲ್ಲಿ ಸರಕಾರಿ ಜಾಗದಲ್ಲಿರುವ ಎಲ್ಲಾ ಹಿಂದೂ ಧಾರ್ಮಿಕ ಕೇಂದ್ರಗಳನ್ನು , ಮಸೀದಿ, ಚರ್ಚುಗಳನ್ನು ಸಕ್ರಮ ಮಾಡಿಕೊಡಲಿದೆ ಎಂದು ಶಾಸಕರು ಹೇಳಿದರು. ಹಿಂದೂ ಧರ್ಮದ ಬಗ್ಗೆ ಮಾತನಾಡುವ ಬಿಜೆಪಿಯವರು ಹಿಂದುತ್ವಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ತಿಳಿಸಲು ನನ್ನ ಜೊತೆ ಚರ್ಚೆಗೆ ಬರಲಿ ನಾನು ಸಿದ್ದನಿದ್ದೇನೆ. ಅಭಿವೃದ್ದಿ ಬಿಜೆಪಿಗೆ ಬೇಕಾಗಿಲ್ಲ, ಚುನಾವಣೆ ಸಮಯದಲ್ಲಿ ಕೋಮುಗಲಭೆ ವಾತಾವರಣ ಸೃಷ್ಟಿಸಿ ಅದರ ಹೆಸರಲ್ಲಿ ವೋಟು ಗಿಟ್ಟಿಸುವುದು ಮಾತ್ರ ಬಿಜೆಪಿಗೆ ಬೇಕಾಗಿದೆ ಎಂದು ಹೇಳಿದರು.
ಏನ್ರೀ 9 ಸೆಂಟ್ಸ್ ಜಾಗ ಕೊಟ್ರೆ ನಿಮ್ಮ ಗಂಟು ಹೋಗ್ತದಾ?
ಕೆಲವೊಂದು ಗ್ರಾಮಗಳಲ್ಲಿ 94 ಸಿ ಗೆ ಅರ್ಜಿ ಹಾಕಿದ್ದರೂ ವಿನಾ ಕಾರಣ ಕೆಲವೊಂದು ಗ್ರಾಮಗಳ ಗ್ರಾಮಕರಣಿಕರು ಅರ್ಜಿ ವಿಲೇವಾರಿ ಮಾಡಿಲ್ಲ ಇದರ ಬಗ್ಗೆ ಗರಂ ಆದ ಶಾಸಕರು ಏನ್ರಿ 9 ಸೆಂಟ್ಸ್ ಜಾಗ ಬಡವರಿಗೆ ಕೊಟ್ರೆ ನಿಮ್ಮ ಗಂಟು ಹೋಗ್ತದಾ? ನಿಮ್ಮ ಜಾಗವನ್ನು ಅವರು ಕೇಳಿದ್ದಲ್ಲ. ಅವರು ಹಲವು ವರ್ಷಗಳಿಂದ ಮನೆ ಕಟ್ಟಿ ವಾಸ್ತವ್ಯ ಇರುವ ಜಾಗಕ್ಕೆ ಹಕ್ಕು ಪತ್ರಕ್ಕಾಗಿ ಅರ್ಜಿ ಹಾಕಿದ್ದು ಅದನ್ನು ಮಾಡಿ ಕೊಡ್ಲಿಕ್ಕೆ ನಿಮಗೇನಾಗಿದೆ? ಎಂದು ಸಭೆಯಲ್ಲಿದ್ದ ಗ್ರಾಮಕರಣಿಕರನ್ನು ಶಾಸಕರು ಪ್ರಶ್ನಿಸಿದರು. ಮುಂದಿನ ಬೈಠಕ್‌ನಲ್ಲಿ ಎಲ್ಲಾ 94 ಸಿ ಅರ್ಜಿಗಳು ವಿಲೇವಾರಿಯಾಗಬೇಕು. ಬಡವರ ಶಾಪಕ್ಕೆ ಗುರಿಯಾಗಬೇಡಿ ಎಂದು ಶಾಸಕರು ಹೇಳಿದರು.
ಸಿಂಹ ಗರ್ಜನೆ ಮಾಡಿದ್ದರಿಂದ ಪುತ್ತೂರಲ್ಲಿ ಬೈಠಕ್ ನಡೆಯುತ್ತಿದೆ:
ಅಕ್ರಮ ಸಕ್ರಮದಲ್ಲಿ ಕರ್ನಾಟಕದಲ್ಲಿ ಪುತ್ತೂರು ಮೊದಲ ಸ್ಥಾನದಲ್ಲಿದೆ ಇದಕ್ಕೆ ಕಾರಣ ಶಾಸಕ ಅಶೋಕ್ ರೈ ಅವರು. ಶಾಸಕರು ವಿಧಾನಸಭೆಯಲ್ಲಿ ಸಿಂಹ ಗರ್ಜನೆ ಮಾಡದೇ ಇರುತ್ತಿದ್ದರೆ ಅಕ್ರಮ ಸಕ್ರಮವೇ ಆಗುತ್ತಿರಲಿಲ್ಲ ಎಂದು ಪುತ್ತೂರು ತಹಶಿಲ್ದಾರ್ ಪುರಂದರ್ ಹೆಗ್ಡೆ ಹೇಳಿದರು.ಶಾಸಕರಾದವರು ಹೇಗೆ ಕೆಲಸ ಮಾಡಬೇಕು ಎಂಬುದಕ್ಕೆ ಕರ್ನಾಟಕದ ಶಾಸಕರಿಗೆ ಅಶೋಕ್ ರೈ ಮಾದರಿಯಾಗಿದ್ದಾರೆ. ಶಾಸಕರಾದ ಬಳಿಕ ಅಧಿವೇಶನದಲ್ಲಿ ಗರ್ಜನೆ ಮಾಡಿದ್ದನ್ನು ಎಲ್ಲರೂ ನೋಡಿದ್ದಾರೆ ಅವರು ಬೆಂಗಳೂರಿಗೆ ವಾರಕ್ಕೊಮ್ಮೆ ಹೋಗಿ ಅನುದಾನ ತರುತ್ತಾರೆ,ಪುತ್ತೂರಿಗೆ ಏನೆಲ್ಲಾ ಬೇಕೋ ಅದೆಲ್ಲವನ್ನೂ ತರುತ್ತಿದ್ದಾರೆ,ಇಂಥಹ ಶಾಸಕರನ್ನು ಪಡೆದ ಇಲ್ಲಿನ ಜನರು ಭಾಗ್ಯವಂತರು ಎಂದು ಹೇಳಿದರು.
ಸರ್ವಧರ್ಮ ಪ್ರೇಮಿ
ಶಾಸಕರು ಸರ್ವ ಧರ್ಮ ಪ್ರೇಮಿಯಾಗಿದ್ದಾರೆ. ಅನಧಿಕೃತವಾಗಿರುವ ದೇವಸ್ಥಾನ, ದೈವಸ್ಥಾನ,ಮಸೀದಿ ಚರ್ಚು,ಬಸದಿಗಳನ್ನು ಸಕ್ರಮ ಮಾಡಲು ಪಣ ತೊಟ್ಟಿದ್ದಾರೆ. ಧರ್ಮ ರಕ್ಷಣೆ ಭಾಷಣ ಮಾಡಿದರೆ ಸಾಧ್ಯವಿಲ್ಲ. ಅಕ್ರಮವಾಗಿರುವ ದೇವರ ಜಾಗವನ್ನು ಸಕ್ರಮ ಮಾಡುವುದು ನಿಜವಾದ ಧರ್ಮಪ್ರೇಮ ಎಂದ ತಹಶಿಲ್ದಾರ್ ರವರು ಶಾಸಕರ ಸರ್ವಧರ್ಮ ಪ್ರೇಮಕ್ಕೆ ನಾನು ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಜನತೆ ಎಲ್ಲವನ್ನೂ ನೋಡುತ್ತಿದ್ದಾರೆ: ಮಹಮ್ಮದ್ ಬಡಗನ್ನೂರು
ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು ಮಾತನಾಡಿ, 13 ನೇ ಅಕ್ರಮ ಸಕ್ರಮ ಬೈಠಕನ್ನು ಮುಂಡೂರಿನಲ್ಲಿ ನಡೆಸಲಾಗುತ್ತಿದೆ. ಚುನಾವಣೆ ಪೂರ್ವದಲ್ಲಿ ಶಾಸಕರು ಜನತೆಗೆ ಏನು ಭರವಸೆ ಕೊಟ್ಟಿದ್ದಾರೋ ಅದೆಲ್ಲವನ್ನೂ ಈಡೇರಿಸುವ ಕೆಲಸವನ್ನು ಶಾಸಕರು ಮಾಡುತ್ತಿದ್ದಾರೆ. ಅಕ್ರಮ ಸಕ್ರಮ ಕಡತ,94 ಸಿ ಮತ್ತು 94 ಸಿ ಸಿ ಕಡತವನ್ನು ವಿಲೇವಾರಿ ಮಾಡಿ ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸಿದ್ದಾರೆ. ಈ ಹಿಂದೆ ವರ್ಷದಲ್ಲಿ ಎರಡು ಬೈಠಕ್ ನಡೆಯುತ್ತಿತ್ತು ಆದರೆ ಈಗ ತಿಂಗಳಿಗೆ ನಾಲ್ಕು ಬೈಠಕ್ ನಡೆಯುತ್ತಿದೆ ಇದು ಶಾಸಕರ ತಾಕತ್ತು ಮತ್ತು ಜನಪರ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಶಾಸಕರ ಕಚೇರಿಗೆ ಬರುವ ಜನರೇ ಸಾಕ್ಷಿ:
ಪ್ರತೀ ಸೋಮವಾರ ಶಾಸಕರ ಕಚೇರಿಯಲ್ಲಿ ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಭೇಟಿ ಕೊಡುತ್ತಾರೆ. ಈ ಹಿಂದೆ ಪುತ್ತೂರಲ್ಲಿ ಅದೆಷ್ಟು ಜನ ಶಾಸಕರಾಗಿದ್ದಾರೆ ಅವರುಗಳ ಕಚೇರಿಗೆ ಜನ ಬರುತ್ತಿದ್ದರೇ ಎಂಬುದು ಪುತ್ತೂರಿನ ಜನತೆಗೆ ಗೊತ್ತಿದೆ.ಜನರ ಸಮಸ್ಯೆಗೆ ಸ್ಪಂದನೆ ಮಾಡುತ್ತಾರೆ ಎಂಬ ಕಾರಣಕ್ಕೆ ಕಚೇರಿಗೆ ನೂರಾರು ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಸರಕಾರ ಜನರಿಗೆ ಪಂಚ ಗ್ಯಾರಂಟಿ ನೀಡಿದೆ, ಶಾಸಕರು ಜನರ ನೋವು ನಲಿವುಗಳಿಗೆ ಸ್ಪಂದನೆ ನೀಡುವ ಮೂಲಕ ತಾನೊಬ್ಬ ರಾಜಧರ್ಮ ಪಾಲನೆ ಮಾಡುತ್ತಿರುವ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಮಹಮ್ಮದ್ ಬಡಗನ್ನೂರು ಹೇಳಿದರು.
60 ಕಡತ ವಿಲೇವಾರಿ
ಬೈಠಕ್‌ನಲ್ಲಿ ಒಟ್ಟು 60 ಕಡತವನ್ನು ವಿಲೇವಾರಿ ಮಾಡಲಾಗಿದೆ. ಅಕ್ರಮ ಸಕ್ರಮ ಮತ್ತು 94 ಸಿ ಹಕ್ಕುಪತ್ರವನ್ನು ವಿತರಣೆ ಮಾಡಲಾಯಿತು. ಒಳಮೊಗ್ರು, ಸರ್ವೆ, ಮುಂಡೂರು, ಶಾಂತಿಗೋಡು, ಕೆದಂಬಾಡಿ ಗ್ರಾಮದ ಫಲಾನುಭವಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.ವೇದಿಕೆಯಲ್ಲಿ ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ರಾಮಣ್ಣ ಪಿಲಿಂಜ ಮತ್ತು ರೂಪರೇಖಾ ಆಳ್ವ ಉಪಸ್ಥಿತರಿದ್ದರು.ಗ್ರಾಮಕರಣಿಕ ಉಮೇಶ್ ಕಾವಾಡಿಗ ಸ್ವಾಗತಿಸಿದರು. ಕಂದಾಯ ನಿರೀಕ್ಷರಾದ ಗೋಪಾಲ ವಂದಿಸಿದರು.