Connect with us

ರಾಷ್ಟ್ರೀಯ

ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ, ಇದು ಟ್ರೇಲರ್ ಅಷ್ಟೇ’- ಸಚಿವ ರಾಜನಾಥ್ ಸಿಂಗ್

Published

on

ಶ್ರೀನಗರ: ‘ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ, ಈಗ ನಡೆದಿದ್ದು ಟ್ರೇಲರ್ ಅಷ್ಟೇ. ಸರಿಯಾದ ಸಮಯ ಬಂದಾಗ ಜಗತ್ತಿಗೆ ಸಿನಿಮಾವನ್ನು ತೋರಿಸುತ್ತೇವೆ’ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.


ಇಂದು ಗುಜರಾತ್‌ನ ಭುಜ್ ವಾಯುನೆಲೆಗೆ ಭೇಟಿ ನೀಡಿ ಭಾರತೀಯ ವಾಯುಪಡೆಯನ್ನುದ್ದೇಶಿಸಿ ಮಾತನಾಡಿದ ಅವರು, ‘ಕದನ ವಿರಾಮದ ಬಳಿಕ ನಾವು ಪಾಕಿಸ್ತಾನದ ನಡವಳಿಕೆಯನ್ನು ಪರೀಕ್ಷಿಸುತ್ತಿದ್ದೇವೆ. ಅವರ ನಡವಳಿಕೆಯಲ್ಲಿ ಏನಾದರೂ ಸುಧಾರಣೆಯಾದರೆ ಸರಿ, ಇಲ್ಲವಾದರೆ ತಕ್ಕ ಪಾಠ ಕಲಿಸುತ್ತೇವೆ. 1965 ಮತ್ತು 1971ರಲ್ಲಿ ಭುಜ್ ವಾಯುನೆಲೆ ಪಾಕಿಸ್ತಾನ ವಿರುದ್ಧದ ಭಾರತದ ಗೆಲುವಿಗೆ ಸಾಕ್ಷಿಯಾಗಿತ್ತು. ಇಂದು ಅದೇ ಭುಜ್ ನೆಲೆ ಮತ್ತೆ ಪಾಕಿಸ್ತಾನ ವಿರುದ್ಧದ ನಮ್ಮ ಗೆಲುವಿಗೆ ಸಾಕ್ಷಿಯಾಗಿದೆ. ಇಂದು ನಾನು ಇಲ್ಲಿರುವುದು ನನಗೆ ಹೆಮ್ಮೆ. ಆಪರೇಷನ್ ಸಿಂಧೂರ ಕಾರ್ಯಾಚರಣೆ, ಇಡೀ ಭಾರತೀಯರು ಹೆಮ್ಮೆಪಡುವಂತಹ ವಿಷಯವಾಗಿದೆ’ ಎಂದು ಹೇಳಿದರು.

‘ಗುರುವಾರವಷ್ಟೇ ನಾನು ಶ್ರೀನಗರದಲ್ಲಿ ನಮ್ಮ ಧೈರ್ಯಶಾಲಿ ಸೇನಾ ಸಿಬ್ಬಂದಿಯನ್ನು ಭೇಟಿಯಾದೆ. ಇಂದು ನಾನು ವಾಯುಪಡೆಯನ್ನು ಭೇಟಿಯಾಗಿದ್ದೇನೆ. ನೀವು ಭಾರತದ ಗಡಿಗಳಲ್ಲಿ ಯಾವಾಗಲೂ ಕಾರ್ಯಪ್ರವೃತ್ತರಾಗಿರುವುದರಿಂದ ನಾವೆಲ್ಲರೂ ಸುರಕ್ಷಿತವಾಗಿದ್ದೇವೆ ಎನ್ನುವ ಭರವಸೆ ನನಗಿದೆ. ಬ್ರಹ್ಮೋಸ್ ಕ್ಷಿಪಣಿಯ ಶಕ್ತಿಯನ್ನು ಪಾಕಿಸ್ತಾನ ಕೂಡ ಒಪ್ಪಿಕೊಂಡಿದೆ. ಕ್ಷಿಪಣಿಗಳ ಶಬ್ದದಲ್ಲಿ ನಿಮ್ಮೆಲ್ಲರ ಶೌರ್ಯ ಹಾಗೂ ಭಾರತೀಯ ಮೂರು ಪಡೆಗಳ ಶೌರ್ಯ ಪ್ರತಿಧ್ವನಿಸುತ್ತಿತ್ತು’ ಎಂದರು.

‘ಐಎಂಎಫ್ ನೀಡಿರುವ ಸಾಲವನ್ನು ಪಾಕಿಸ್ತಾನ ಪರೋಕ್ಷವಾಗಿ ಉಗ್ರರ ಕುಟುಂಬಗಳಿಗೆ ಹಾಗೂ ಭಯೋತ್ಪಾದನೆಗೆ ಆರ್ಥಿಕ ನೆರವು ನೀಡುತ್ತಿದೆ. ಈ ಮೂಲಕ ಪಾಕಿಸ್ತಾನ ಸರ್ಕಾರ ಭಾರತೀಯರ ವಿರುದ್ಧ ದಾಳಿ ನಡೆಸಲು ಅವಕಾಶ ನೀಡುತ್ತಿದೆ. ಹೀಗಾಗಿ ನೀಡಿರುವ ಸಾಲವನ್ನು ಐಎಂಎಫ್ ಮರುಪರಿಶೀಲಿಸಬೇಕು’ ಎಂದು ಮನವಿ ಮಾಡಿದರು.

‘ಭಿಕ್ಷೆ ಬೇಡುತ್ತಿದ್ದ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯು ವಿಸ್ತೃತ ನಿಧಿ ಸೌಲಭ್ಯದಡಿಯಲ್ಲಿ ಎರಡು ಕಂತುಗಳಲ್ಲಿ 2.1 ಬಿಲಿಯನ್ ಡಾಲರ್‌ಗಳನ್ನು ವಿತರಿಸಿದೆ. ಇದನ್ನು ಪಾಕಿಸ್ತಾನ ಪರೋಕ್ಷವಾಗಿ ಭಯೋತ್ಪಾದನೆಗೆ ನೀಡುತ್ತಿದೆ. ಪಾಕ್ ಹಣವನ್ನು ಭಯೋತ್ಪಾದಕ ಮೂಲಸೌಕರ್ಯಗಳ ಅಭಿವೃದ್ಧಿಗೆ ಬಳಕೆ ಮಾಡುತ್ತಿದೆ. ಮೃತ ಭಯೋತ್ಪಾದಕರ ಕುಟುಂಬಗಳಿಗೆ ಈ ಹಣವನ್ನು ಪಾಕ್ ಪರಿಹಾರವಾಗಿ ನೀಡುತ್ತಿದೆ. ಈಗಾಗಲೇ ಮೋಸ್ಟ್ ವಾಂಟೆಡ್ ಉಗ್ರ ಮಸೂದ್‌ಗೆ ಪಾಕಿಸ್ತಾನ 14 ಕೋಟಿ ರೂ. ಪರಿಹಾರ ನೀಡಿದೆ’ ಎಂದು ತಿಳಿಸಿದರು.

 

Continue Reading
Click to comment

Leave a Reply

Your email address will not be published. Required fields are marked *

Advertisement