Published
2 days agoon
By
Akkare Newsಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪುತ್ತೂರು ಹೊರವಲಯದ ಮುರ ಜಂಕ್ಷನ್ ಸಮೀಪ ಇಂದು ಖಾಸಗಿ ಬಸ್ಸೊಂದು ವ್ಯಾಗನರ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ, ಕಾರಿನಲ್ಲಿದ್ದ ಮಗು ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಮೇ.27 ರ ಮುಂಜಾನೆ ನಡೆದಿದೆ.
ಅಪಘಾತದ ದೃಶ್ಯ
ಗಾಯಾಳುಗಳನ್ನು ಅಂಡೆಪುನಿ ನಿವಾಸಿ ಈಶ್ವರ್ ಭಟ್, ಅವರ ಪುತ್ರಿ ಅಪೂರ್ವ ಹಾಗೂ ಅಪೂರ್ವ ಅವರ ಪುಟಾಣಿ ಮಗು ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ ಈಶ್ವರ್ ಭಟ್ ಅಂಡೆಪುನಿ ಅವರ ಮನೆಯಲ್ಲಿ ಇಂದು ಶ್ರಾದ್ಧ ಕಾರ್ಯಕ್ರಮದ ಹಿನ್ನೆಲೆ ಭಾಗವಹಿಸಲು ಅವರ ಮಗಳು ಅಪೂರ್ವ ಹಾಗೂ ಮೊಮ್ಮಗಳು ಬೆಂಗಳೂರಿನಿಂದ ಪುತ್ತೂರಿಗೆ ಆಗಮಿಸಿದ್ದರು.
ಈಶ್ವರ್ ಭಟ್ ಅವರು ಪುತ್ತೂರು ಪೇಟೆಯಿಂದ ಇವರನ್ನು ತಮ್ಮ ಕಾರಿನಲ್ಲಿ ಮನೆಗೆ ಕರೆತರುತ್ತಿದ್ದ ವೇಳೆ, ಮುರ ಜಂಕ್ಷನ್ ಬಳಿ ಪಡ್ನೂರಿಗೆ ತೆರಳುವ ಒಳರಸ್ತೆಗೆ ಕಾರನ್ನು ತಿರುಗಿಸುತ್ತಿದ್ದರು.
ಈ ಸಂದರ್ಭದಲ್ಲಿ ಪುತ್ತೂರಿನಿಂದ ಮಂಗಳೂರಿನತ್ತ ವೇಗವಾಗಿ ಚಲಿಸುತ್ತಿದ್ದ MERCY ಹೆಸರಿನ ಖಾಸಗಿ ಬಸ್, ಕಾರಿಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಹಲವು ಮೀಟರ್ ದೂರಕ್ಕೆ ಎಸೆಯಲ್ಪಟ್ಟಿದೆ ಎಂದು ತಿಳಿದುಬಂದಿದೆ. ಅಪಘಾತ ನಡೆದ ಕೂಡಲೇ, ಅದೇ ಮಾರ್ಗವಾಗಿ ಹಾಲು ವಿತರಿಸಿ ಹಿಂತಿರುಗುತ್ತಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಪಂಜಿಗುಡ್ಡೆ ಈಶ್ವರ ಭಟ್ ಹಾಗೂ ಇತರ ಸ್ಥಳೀಯರು ತಕ್ಷಣ ಕಾರ್ಯಪ್ರವೃತ್ತರಾಗಿ, ನಜ್ಜುಗುಜ್ಜಾಗಿದ್ದ ಕಾರಿನಿಂದ ಗಾಯಾಳುಗಳನ್ನು ಹೊರತೆಗೆದಿದ್ದಾರೆ. ಕಾರಿನ ಬಾಗಿಲು ತೆರೆಯಲು ಕಬ್ಬಿಣದ ಸಲಾಕೆಯನ್ನೂ ಬಳಸಬೇಕಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ .ಹೆಚ್ಚಿನ ಮಾಹಿತಿ ಲಭಿಸಿಲ್ಲ.