Published
1 day agoon
By
Akkare Newsಉಪ್ಪಿನಂಗಡಿ, ಮಾಣಿ ಅಂಡರ್‌ಪಾಸ್ ಬಳಕೆಗೆ ಸಿದ್ಧ
ಮಂಗಳೂರು :ರಾಷ್ಟ್ರೀಯ ಹೆದ್ದಾರಿ 66ರ ಮಹತ್ವದ ಭಾಗವಾದ ಕಲ್ಲಡ್ಕ ಫ್ಲೈಓವರ್ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು ಜೂನ್ ಮೊದಲ ವಾರದಲ್ಲಿ ವಾಹನಗಳ ಸಂಚಾರಕ್ಕೆ ಮುಕ್ತಗೊಳ್ಳಲಿದೆ. ಇದರೊಂದಿಗೆ ಉಪ್ಪಿನಂಗಡಿ, ಮಾಣಿಯ ವೆಹಿಕಲ್ ಅಂಡರ್‌ಪಾಸ್‌ಗಳನ್ನು (ವಿಯುಪಿ) ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ಸಂಭವವಿದೆ.
ಅವಧಿಗೂ ಮೊದಲೇ ಜಿಲ್ಲೆಗೆ ಆಗಮಿಸಿದ ಮಳೆ ಧಾರಾಕಾರವಾಗಿ ಸುರಿದಿರುವುದು ಅಂತಿಮ ಹಂತದ ಕಾಮಗಾರಿಗಳ ವೇಗಕ್ಕೆ ಅಡ್ಡಿಯಾಗಿದೆ. ಮೇ ತಿಂಗಳ ಮೊದಲ ವಾರದಲ್ಲಿ ಕಲ್ಲಡ್ಕ ಫ್ಲೈಓವರ್ ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ಈ ಹಿಂದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿತ್ತು. ಸದ್ಯ ನರಹರಿ ಪರ್ವತ ಬಳಿಯ ಭಾಗದಲ್ಲಿ ಕೆಲಸ ನಿಧಾನಗತಿಯಲ್ಲಿ ಸಾಗುತ್ತಿದೆ. ಚತುಷ್ಪಥ ರಸ್ತೆಯ ಎರಡು ಮಾರ್ಗಗಳು ಸಿದ್ಧಗೊಳ್ಳುತ್ತಿವೆ. ಆದರೆ ಇನ್ನೆರಡು ಮಾರ್ಗಗಳ ಜತೆಗೆ ಸರ್ವಿಸ್ ರಸ್ತೆ, ರಿಟೇನಿಂಗ್ ವಾಲ್ ಕಾಮಗಾರಿಗಳು ನಡೆಯಬೇಕಿದೆ.
ಫ್ಲೈಓವರ್‌ನ ಕೂಡು ರಸ್ತೆಗಳು ಎರಡೂ ಕಡೆ(ಫ್ಲೈಓವರ್ ಏರುವ ಹಾಗೂ ಇಳಿಯುವ) ಪೂರ್ಣಗೊಂಡಿವೆ. ಫ್ಲೈಓವರ್ ನ ಲೋಡ್ ಟೆಸ್ಟಿಂಗ್ 15 ದಿನಗಳ ಮೊದಲೇ ನಡೆದಿದೆ. ನರಹರಿ ಪರ್ವತ ಮುಂಭಾಗದಲ್ಲಿ ಸುಮಾರು 300 ಮೀಟರ್ ಹೆದ್ದಾರಿ ಭಾಗದ ಕೆಲಸ ಆಗಬೇಕಿದೆ. ಹಾಗಾಗಿ ಸದ್ಯ ಒಂದು ಭಾಗ ಕೆಳಗೆ ಸಾಗಿದರೆ, ಇನ್ನೊಂದು ಭಾಗ ಈಗಿರುವಂತೆಯೇ ಫ್ಲೈಓವರ್ ಗೆ ಜೋಡಿಸಿಕೊಂಡು ಜೂನ್ ಮೊದಲ ವಾರದಲ್ಲಿ ವಾಹನಗಳ ಸಂಚಾರಕ್ಕೆ ತೆರೆಯಲಿದೆ ಎನ್ನುತ್ತಾರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು.
ಸುರಕ್ಷತೆಯ ಸವಾಲು
ಗುಂಡ್ಯ-ಬಿ.ಸಿ.ರೋಡ್ ಹೆದ್ದಾರಿ ವಿಸ್ತರಣೆ ಯೋಜನೆಯ 2ನೇ ಪ್ಯಾಕೇಜ್ ಆಗಿ ಬಿ.ಸಿ.ರೋಡ್-ಅಡ್ಡಹೊಳೆ ನಡುವಿನ ಭಾಗವನ್ನು ಕೆಎನ್‌ಆರ್ ಕನ್‌ಸ್ಟ್ರಕ್ಷನ್ಸ್‌ನವರು ಕೈಗೆತ್ತಿಕೊಂಡಿದ್ದಾರೆ. ಸದ್ಯ ಫ್ಲೈಓವರ್ ನ ಕಾಂಕ್ರೀಟ್ ಕೆಲಸಗಳು ಪೂರ್ಣಗೊಂಡರೂ ಸುರಕ್ಷತೆಯನ್ನು ಕಾಯ್ದುಕೊಳ್ಳುವ ಸವಾಲು ಇದೆ. ಲೈಟ್ ಅಳವಡಿಕೆ, ಕ್ರಾಶ್ ಬ್ಯಾರಿಯರ್ ಅಳವಡಿಕೆ ಇತ್ಯಾದಿ ಕಾಮಗಾರಿ ಆಗಬೇಕಿದೆ.
ಇನ್ನು ಸರಾಗ
ಕಲ್ಲಡ್ಕ ಫ್ಲೈಓವರ್, ಮಾಣಿ, ಉಪ್ಪಿನಂಗಡಿ ವಿಯುಪಿಗಳು ವಾಹನ ಸಂಚಾರಕ್ಕೆ ಮುಕ್ತವಾದರೆ ಬಿ.ಸಿ.ರೋಡ್-ಪುತ್ತೂರು/ಉಪ್ಪಿನಂಗಡಿ ಮಧ್ಯೆ ಉಂಟಾಗುತ್ತಿದ್ದ ಸಂಚಾರ ದಟ್ಟನೆ ಕಡಿಮೆಯಾಗುವ ನಿರೀಕ್ಷೆ ಇದೆ. ಮಾಣಿಯಲ್ಲಿ ಒಂದು ಬದಿ(ಮಂಗಳೂರಿನಿಂದ ಉಪ್ಪಿನಂಗಡಿ ಕಡೆಗೆ)ಯ ಸರ್ವಿಸ್ ರಸ್ತೆ ಪೂರ್ಣಗೊಂಡಿದೆ. ಪುತ್ತೂರು ಕಡೆಗೆ ಹೋಗುವ ಸರ್ವಿಸ್ ರಸ್ತೆ ಹಾಳಾಗಿದ್ದು ಸದ್ಯ ಅದರಲ್ಲಿ ವಾಹನ ಸಂಚಾರವಿದೆ. ವಿಯುಪಿಯನ್ನು ವಾಹನ ಸಂಚಾರಕ್ಕೆ ಅನುವುಗೊಳಿಸಿದ ಬಳಿಕ ಈ ಸರ್ವಿಸ್ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲು ಪ್ರಾಧಿಕಾರ ನಿರ್ಧರಿಸಿದೆ.
ನರಹರಿ ಪರ್ವತ ಭಾಗ ವಿಳಂಬ
ಸದ್ಯ ನರಹರಿ ಪರ್ವತ ಪ್ರವೇಶದ್ವಾರದ ಮುಂಭಾಗ ಇರುವ ಎತ್ತರದ ಜಾಗದ ಮೂಲಕ ವಾಹನಗಳು ಸಂಚರಿಸುತ್ತಿವೆ. ಅದರ ಮುಂದೆ ಕಲ್ಲು, ಮಣ್ಣು ತೆರವು ಮಾಡಿ, ಸಮತಟ್ಟು ಗೊಳಿಸಿ, ಅದರಲ್ಲಿ ಎರಡು ಲೇನ್ ಕಾಂಕ್ರೀಟ್ ರಸ್ತೆ ಮಾಡಲಾಗಿದೆ. ಇನ್ನೆರಡು ಮಾರ್ಗಗಳು ಆಗಬೇಕಾದರೆ ಈಗ ವಾಹನ ಹೋಗುತ್ತಿರುವ ಎತ್ತರದ ಜಾಗವನ್ನು ಸಮತಟ್ಟು ಗೊಳಿಸಬೇಕಿದೆ. ಅಲ್ಲದೆ ಅಲ್ಲಿ ಹೆದ್ದಾರಿ ಹಾಗೂ ಸರ್ವಿಸ್ ರಸ್ತೆಯ ಮಧ್ಯೆ ರಿಟೇನಿಂಗ್ ವಾಲ್ ಕೂಡಾ ನಿರ್ಮಿಸಬೇಕಿದೆ.
ಫ್ಲೈಓವರ್ ನ ಒಂದು ಬದಿ ಮಾತ್ರ?
ಜೂನ್ ಮೊದಲ ವಾರದಿಂದ ಕಲ್ಲಡ್ಕ ಫ್ಲೈಓವರ್ ನ ಒಂದು ಬದಿ ಮಾತ್ರ ವಾಹನಗಳ ಸಂಚಾರಕ್ಕೆ ತೆರೆದುಕೊಳ್ಳುವ ಸಾಧ್ಯತೆ ಇದೆ. ಸುರಕ್ಷತಾ ಕ್ರಮಗಳನ್ನು ಪೂರ್ಣಗೊಳಿಸಿ, ಪರಿಸ್ಥಿತಿ ಆಧರಿಸಿ 15 ದಿನಗಳ ಬಳಿಕ ಮತ್ತೂಂದು ಬದಿಯನ್ನು ಸಂಚಾರಕ್ಕೆ ಮುಕ್ತಗೊಳಿಸುವ ಬಗ್ಗೆ ಚಿಂತನೆ ನಡೆದಿದೆ.
ಕಲ್ಲಡ್ಕ ಫ್ಲೈಓವರ್, ಮಾಣಿ ಹಾಗೂ ಉಪ್ಪಿನಂ ಗಡಿ ವೆಹಿಕಲ್ ಅಂಡರ್‌ಪಾಸ್ ಕಾಮಗಾರಿ ಪೂರ್ಣ ಗೊಂಡಿದ್ದು, ಜೂನ್ ಮೊದಲ ವಾರದಲ್ಲಿ ವಾಹನ ಸಂಚಾರಕ್ಕೆ ಮುಕ್ತಗೊಳ್ಳಲಿದೆ. ಸುರಕ್ಷತಾ ಕೆಲಸಗಳನ್ನು ಆದ್ಯತೆ ಮೇರೆಗೆ ಮುಗಿಸಲಾಗುವುದು. -ಅಬ್ದುಲ್ಲಾ ಜಾವೇದ್ ಅಜ್ಮಿ, ಯೋಜನಾ ನಿರ್ದೇಶಕರು, ಎನ್‌ಎಚ್‌ಎಐ