Published
8 months agoon
By
Akkare News
ದೇಶದಲ್ಲಿ ಬಡವರ ಸಂಖ್ಯೆ ಹೆಚ್ಚುತ್ತಿದೆ, ಸಂಪತ್ತು ಕೆಲವೇ ಮಂದಿಯ ಪಾಲಾಗುತ್ತಿದೆ ಎಂದಿರುವ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ವಿಧಾನಪರಿಷತ್ ಸದಸ್ಯ, ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ ಹರಿಪ್ರಸಾದ್ ತಿರುಗೇಟು ಕೊಟ್ಟಿದ್ದಾರೆ. “ಬಡತನಕ್ಕೆ ತಳ್ಳಿದವರ ಬಗ್ಗೆಯೂ ನಿತಿನ್ ಗಡ್ಕರಿ ಮಾತನಾಡಲಿ” ಎಂದಿದ್ದಾರೆ.

ಗಡ್ಕರಿ ಹೇಳಿಕೆಯ ಪತ್ರಿಕಾ ವರದಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಹರಿಪ್ರಸಾದ್, ” ದೇಶದಲ್ಲಿ ಬಡವರ ಸಂಖ್ಯೆ ಮಿತಿ ಮೀರಿ ಹೆಚ್ಚುತ್ತಿರುವುದರ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಸತ್ಯ ಒಪ್ಪಿಕೊಂಡಿದ್ದಕ್ಕೆ ಸ್ವಾಗತ, ಆದ್ರೆ ವಾಸ್ತವವನ್ನು ಮರೆಮಾಚುತ್ತಲೇ ಬಡತನಕ್ಕೆ ದೂಡಿದವರ ಬಗ್ಗೆಯೂ ಮಾತಾಡಿದ್ದರೆ ಸನ್ಮಾನಕ್ಕೂ ಅರ್ಹರಾಗುತ್ತಿದ್ದರು” ಎಂದು ಕುಟುಕಿದ್ದಾರೆ.


2011–12ರಲ್ಲಿ ದೇಶದಲ್ಲಿ, ಬಡತನ ರೇಖೆಗಿಂತ ಕೆಳಗಿರುವವರ ಸಂಖ್ಯೆ 27 ಕೋಟಿ ಎಂದು ಅಂದಾಜಿಸಲಾಗಿತ್ತು. ಆದರೆ ಇದೇ ಜನವರಿಯಲ್ಲಿ ಬಿಡುಗಡೆ ಮಾಡಿದ ಬಹು ಆಯಾಮದ ಬಡತನ ಸೂಚ್ಯಂಕ: ಪ್ರಗತಿ ಪರಿಶೀಲನೆ ವರದಿಯಲ್ಲಿ, 2013–14 ಮತ್ತು 2022–23ರ ನಡುವೆ ದೇಶದ 24.28 ಕೋಟಿ ಜನರು ಬಹು ಆಯಾಮದ ಬಡತನದಿಂದ ಹೊರಗೆ ಬಂದಿದ್ದಾರೆ ಎಂದು ಘೋಷಿಸಲಾಗಿತ್ತು.




ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿ ಕೇಂದ್ರದ ಹಲವು ಸಚಿವರು ಮತ್ತು ಬಿಜೆಪಿ ನಾಯಕರು ಈ ಘೋಷಣೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದೇ ಸಾಧನೆ. ಆದರೆ ಎಲ್ಲಿಯೂ ಅಪ್ಪಿತಪ್ಪಿ ದೇಶದಲ್ಲಿ ಈಗ ಇರುವ ಬಡವರೆಷ್ಟು ಎಂಬುದನ್ನು ಮಾತ್ರ ಹೇಳಿರಲಿಲ್ಲ. ಸತ್ಯವನ್ನು ಮರೆಮಾಚಿದ್ದು ಯಾರು? ಯಾಕೆ? ಎನ್ನುವ ಪ್ರಶ್ನೆಗಳಿಗೆ ಈ ಸಾಮಾಜಿಕ ಜಾಲತಾಣದಲ್ಲಿ ಷೇರ್ ಮಾಡುವ ಷೇರುದಾರರು ಉತ್ತರಿಸಲೇ ಇಲ್ಲ ಎಂದು ಹರಿಪ್ರಸಾದ್ ಹೇಳಿದ್ದಾರೆ.


