Connect with us

ಇತರ

ಕರ್ನಾಟಕ ಜರ್ನಲಿಸ್ಟ್‌ ಯೂನಿಯನ್‌ (ರಿ) ಪುತ್ತೂರು ತಾಲೂಕು ಆಶ್ರಯದಲ್ಲಿ ಪತ್ರಿಕಾ ದಿನಾಚರಣೆ- 2025 ಹಿರಿಯ ಪತ್ರಕರ್ತ ಡಾ. ನರೇಂದ್ರ ರೈ ದೇರ್ಲರವರಿಗೆ ಗೌರವ ಸನ್ಮಾನ ಅರ್ಹ ವ್ಯಕ್ತಿಯನ್ನೇ ಸನ್ಮಾನಿಸುವ ಯೋಗ-ರಾಮದಾಸ್ ಶೆಟ್ಟಿ

Published

on

ಪುತ್ತೂರು: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕದ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆಯ ಪ್ರಯುಕ್ತ ಹಿರಿಯ ಪತ್ರಕರ್ತ, ಸಾಹಿತಿ, ಲೇಖಕ, ಚಿಂತಕ, ಪ್ರಗತಿಪರ ಕೃಷಿಕ, ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಡಾ|ನರೇಂದ್ರ ರೈ ದೇರ್ಲರವರಿಗೆ ಸನ್ಮಾನ ಕಾರ್ಯಕ್ರಮ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ರಾಮದಾಸ್ ಶೆಟ್ಟಿ ವಿಟ್ಲರವರ ಅಧ್ಯಕ್ಷತೆಯಲ್ಲಿ ಕೆಯ್ಯೂರು ದೇರ್ಲದಲ್ಲಿರುವ ಡಾ|ನರೇಂದ್ರ ರೈ ದೇರ್ಲರವರ ಸ್ವಗೃಹದಲ್ಲಿ ಸಂಜೆ ಜರಗಿತು.

ಯಾವುದೋ ವಿಶ್ವವಿದ್ಯಾನಿಲಯದ ಕುಲಪತಿ ಆಗಬೇಕಿತ್ತು-ದಂಬೆಕ್ಕಾನ ಸದಾಶಿವ ರೈ:
ಮುಖ್ಯ ಅತಿಥಿ, ಪುತ್ತೂರಿನ ರೋಯಲ್ ಸೌಹಾರ್ದ ಸಹಕಾರಿ ಸಂಘದ ಸಂಸ್ಥಾಪಕ, ‘ಸಹಕಾರ ರತ್ನ’ ದಂಬೆಕ್ಕಾನ ಸದಾಶಿವ ರೈರವರು ಡಾ|ನರೇಂದ್ರ ರೈ ದೇರ್ಲರವರನ್ನು ಸನ್ಮಾನಿಸಿ ಮಾತನಾಡಿ, ಪುತ್ತೂರಿನ ಎಲ್ಲಾ ಪತ್ರಕರ್ತ ಮಿತ್ರರು ನನ್ನ ಕುಟುಂಬದ ಸದಸ್ಯರು. ನನ್ನ ಎದುರಿಗೆ ಬೆಳೆದ ಹುಡುಗ, ಆತ್ಮೀಯ, ಸಂಬಂಧಿಕರಾಗಿರುವ ನರೇಂದ್ರ ರೈಯವರು ಇಂದು ಸಮಾಜದಲ್ಲಿನ ಎಲ್ಲಾ ರಂಗದಲ್ಲೂ, ಅಂದರೆ ಪತ್ರಿಕಾ ಮಾಧ್ಯಮ, ವಿದ್ಯಾ ಮಾಧ್ಯಮ, ಲೇಬರ್ ವರ್ಗದಲ್ಲೂ ಒಳ್ಳೆಯ ಹೆಸರನ್ನು ಗಳಿಸಿದ್ದಾರೆ. ಅವರಿಗೆ ಡಾಕ್ಟರೇಟ್ ಬಂದ ಮೇಲೆ ಅವರನ್ನು ಡಾಕ್ಟರ್ ಎಂದೇ ಕರೆಯುವುದಾಗಿದೆ ಜೊತೆಗೆ ಅವರು ಯಾವುದೋ ವಿಶ್ವವಿದ್ಯಾನಿಲಯದ ಕುಲಪತಿ ಆಗಬೇಕಿತ್ತು ಎಂದರು.

ಈ ಸಮಾಜದ ವಿಶ್ವವಿದ್ಯಾನಿಲಯದ ಕುಲಪತಿ-ಹರೀಶ್ ಬಂಟ್ವಾಳ್:
ದ.ಕ ಜಿಲ್ಲಾ ಕರ್ನಾಟಕ ಜರ್ನಲಿಸ್ಟ್ ಯೂನಿಯ್ ಇದರ ಜಿಲ್ಲಾ ಗೌರವಾಧ್ಯಕ್ಷರೂ, ಸುಳ್ಯ ಸುದ್ದಿ ಪತ್ರಿಕೆಯ ಸಂಪಾದಕರೂ ಆಗಿರುವ ಹರೀಶ್ ಬಂಟ್ವಾಳ್ ಮಾತನಾಡಿ, ಸಂಘ ಬೇರೆ ಬೇರೆಯಾದ್ರೂ ಪತ್ರಕರ್ತರು ಅನಿಸಿಕೊಂಡವರು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಸೇರುತ್ತಾರೆ. ನರೇಂದ್ರ ರೈಯವರು ತರಂಗ ಪತ್ರಿಕೆಯಲ್ಲಿರುವಾಗಲೇ ಅವರ ಲೇಖನವನ್ನು ಓದಿ ಬೆಳೆದವನು ನಾನಾಗಿದ್ದು, ಪತ್ರಿಕಾ ದಿನಾಚರಣೆಯ ಅಂಗವಾಗಿ ಇಂದು ನರೇಂದ್ರ ರೈ ದೇರ್ಲರವರನ್ನು ಸನ್ಮಾನಿಸಿರುವುದು ತುಂಬಾ ಖುಶಿಯ ವಿಷಯವಾಗಿದ್ದು ಮಾತ್ರವಲ್ಲ ಈ ಸಮಾಜದ ವಿಶ್ವವಿದ್ಯಾನಿಲಯದ ಕುಲಪತಿ ಆಗಿರುತ್ತಾರೆ ಎಂದರು.

ಅರ್ಹ ವ್ಯಕ್ತಿಯನ್ನೇ ಸನ್ಮಾನಿಸುವ ಯೋಗ-ರಾಮದಾಸ್ ಶೆಟ್ಟಿ:
ಅಧ್ಯಕ್ಷತೆ ವಹಿಸಿದ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಅಧ್ಯಕ್ಷ ರಾಮದಾಸ್ ಶೆಟ್ಟಿ ವಿಟ್ಲ ಮಾತನಾಡಿ, ಪತ್ರಿಕಾ ದಿನಾಚರಣೆಯ ಪ್ರಯುಕ್ತ ನಾನು ಡಾ|ನರೇಂದ್ರ ರೈ ದೇರ್ಲರವರನ್ನು ಸನ್ಮಾನಿಸುವ ಕುರಿತು ಸ್ಟೇಟಸ್ ಹಾಕಿದ್ದೆ. ಹಲವಾರು ಮಂದಿ ನನ್ನ ಬಂಧು ಮಿತ್ರರು ಕರೆ ಮಾಡಿ ನೀವು ಅರ್ಹ ವ್ಯಕ್ತಿಯನ್ನೇ ಆರಿಸಿದ್ದೀರಿ ಎಂದು ಹೇಳಿದ್ದರು. ಅಂತಹ ಯೋಗ್ಯತಾ ವ್ಯಕ್ತಿಯನ್ನು ಇಂದು ನಾವು ಸನ್ಮಾನಿಸುವ ಯೋಗ ನಮಗೆ ಬಂದಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸನ್ಮಾನಿತ ಡಾ|ನರೇಂದ್ರ ರೈ ದೇರ್ಲರವರ ಪತ್ನಿ ಪವಿತ್ರಾ, ಸಹೋದರರಾದ ಪ್ರಗತಿಪರ ಕೃಷಿಕರಾದ ಚೆನ್ನಪ್ಪ ರೈ ದೇರ್ಲ, ಅಮರ್‌ನಾಥ್ ರೈ ದೇರ್ಲ, ನಿರ್ವತ್ತ ಬ್ಯಾಂಕ್ ಮ್ಯಾನೇಜರ್ ಶಿವರಾಮ ರೈ ಇಳಂತಾಜೆ, ರಂಜನ್ ರೈ ದೇರ್ಲ, ಉದ್ಯಮಿ ಗೌತಮ್ ಶೆಟ್ಟಿ ಕೊಲ್ಯರವರ ಉಪಸ್ಥಿತಿಯನ್ನು ಗೌರವಿಸಲಾಯಿತು.

ದ.ಕ ಜಿಲ್ಲಾ ಜರ್ನಲಿಸ್ಟ್ ಯೂನಿಯನ್ ಉಪಾಧ್ಯಕ್ಷ ಜ್ಯೋತಿ ಪ್ರಕಾಶ್ ಪುಣಚ, ತಾಲೂಕು ಜರ್ನಲಿಸ್ಟ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಸಂತೋಷ್ ಮೊರಾಸ್ ಮೊಟ್ಟೆತ್ತಡ್ಕ(ಸುದ್ದಿ ಬಿಡುಗಡೆ ಪುತ್ತೂರು), ಕಾರ್ಯದರ್ಶಿ ಹೇಮಾ ಜಯರಾಂ(ಸುದ್ದಿ ಮೀಡಿಯಾ), ಕೊಶಾಧಿಕಾರಿ ಪ್ರಜ್ವಲ್ ಕೋಟ್ಯಾನ್ , ಸದಸ್ಯರಾದ ಪ್ರಭಾಕರ ಅಮೈ, ರಕ್ಷಿತಾ, ರಾಜೇಶ್ (ವಿಟಿವಿ), ಶಶಿಧರ್ ನೆಕ್ಕಿಲಾಡಿ(ನಮ್ಮ ಕುಡ್ಲ), ಮಧುಶ್ರೀ, ಸುಮನಾ, ಯಕ್ಷಿತ್(ಕಹಳೆ ನ್ಯೂಸ್), ಜಯಪ್ರಕಾಶ್ ಬದಿನಾರು, ಜಗದೀಶ್ ಕಜೆ (ಅಕ್ಕರೆ ನ್ಯೂಸ್), ಉಮೇಶ್ (ಸುದ್ದಿ ನ್ಯೂಸ್ ಸುಳ್ಯ)
ಸಹಿತ ಹಲವರು ಉಪಸ್ಥಿತರಿದ್ದರು. ತಾಲೂಕು ಜರ್ನಲಿಸ್ಟ್ ಯೂನಿಯನ್ ಸ್ಥಾಪಕಾಧ್ಯಕ್ಷ ಹಾಗೂ ಬೆಳ್ತಂಗಡಿ ಸುದ್ದಿ ಸಂಪಾದಕ ಸಂತೋಷ್ ಕುಮಾರ್ ಶಾಂತಿನಗರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕವಿತಾ ಮಾಣಿ (ಕಹಳೆ ನ್ಯೂಸ್) ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಚಿನ್ಮಯ ಕೃಷ್ಣ (ನಿಖರ ನ್ಯೂಸ್) ವಂದಿಸಿದರು. ಅಶ್ವಿನಿ ಪೆರುವಾಯಿ (ವಿಟಿವಿ) ಕಾರ್ಯಕ್ರಮ ನಿರೂಪಿಸಿದರು.

ಲೋಕ ವಿಶ್ವವಿದ್ಯಾನಿಲಯದ ಪತ್ರಕರ್ತರಿಂದ ಮಾನವೀಯತೆ, ಮನುಷ್ಯತ್ವ..
ಪುತ್ತೂರಿನ ಬಹುತೇಕ ಪತ್ರಕರ್ತರು ವಿಶ್ವವಿದ್ಯಾನಿಲಯದಿಂದ ಜರ್ನಲಿಸಂ ಓದಿದವರಲ್ಲ, ಲೋಕ ವಿಶ್ವವಿದ್ಯಾನಿಲಯದಲ್ಲಿ ಬೆಳೆದು ಪುತ್ತೂರನ್ನು ಬೆಳಗಿಸಿದವರು. ನಾನೂ ಕೂಡ ಜರ್ನಲಿಸಂ ಮಾಡಿದವನಲ್ಲ. ಅಂದು ನವಭಾರತ ಪತ್ರಿಕೆಯನ್ನು ಓದುತ್ತಾ ಈ ಅಜ್ಜನ ಜಗಲಿಯಲ್ಲಿ ಬೆಳೆದವನು ನಾನು. ಕಾಲು ಒದ್ದೆಯಾಗದೆ ಕಡಲನ್ನು ದಾಟಬಹುದು ಆದರೆ ಕಣ್ಣು ಒದ್ದೆಯಾಗದೆ ಬದುಕನ್ನು ದಾಟಲು ಸಾಧ್ಯವಿಲ್ಲ ಎಂದು ಲೋಕ ವಿಶ್ವವಿದ್ಯಾನಿಲಯದಲ್ಲಿ ಬೆಳೆದ ಚಿತ್ರದುರ್ಗದ ಸಿರಿಯಜ್ಜಿರವರು ಹೇಳಿದ್ದು, ಇವರಿಗೆ ಹಂಪಿ ವಿಶ್ವವಿದ್ಯಾನಿಲಯದಿಂದ ನಾಡೋಜ ಪ್ರಶಸ್ತಿ ಬಂದಿರುತ್ತದೆ. ಜರ್ನಲಿಸಂ ಕಲಿತು ಬಂದ ಪತ್ರಕರ್ತರಿಗೆ ತಾನು ಕಲಿತು ಬಂದಿದ್ದೇನೆ ಎಂಬುದು ಇರುತ್ತದೆ. ಆದರೆ ಲೋಕ ವಿಶ್ವವಿದ್ಯಾನಿಲಯದಿಂದ ಬಂದಂತಹ ಪತ್ರಕರ್ತರಿಗೆ ಸಾಂಸ್ಕೃತಿಕ ಜೀವನದಲ್ಲಿ ಮಾನವೀಯತೆ, ಮನುಷ್ಯತ್ವವಿರುತ್ತದೆ.
-ಡಾ|ನರೇಂದ್ರ ರೈ ದೇರ್ಲ, ಸನ್ಮಾನಿತ ಹಿರಿಯ ಪತ್ರಕರ್ತರು

ಪುಸ್ತಕ ಮಳಿಗೆಯಲ್ಲಿ ರಾಜ್ಯಾದ್ಯಂತ ಹೆಸರುವಾಸಿಯಾಗಿರುವ ಪ್ರತಿಷ್ಠಿತ ಎಸ್‌ಎಲ್‌ವಿ ಬುಕ್ ಹೌಸ್ ಸಂಸ್ಥೆಯ ವತಿಯಿಂದ ತಾಲೂಕು ಜರ್ನಲಿಸ್ಟ್ ಯೂನಿಯನ್‌ನ ಕಾರ್ಯಕಾರಿಣಿ ಸದಸ್ಯರಿಗೆ ಲ್ಯಾಪ್‌ಟಾಪ್ ಬ್ಯಾಗ್ ಅನ್ನು ಈ ಸಂದರ್ಭದಲ್ಲಿ ಅತಿಥಿ ಗಣ್ಯರಿಂದ ವಿತರಿಸಲಾಯಿತು.

 

Continue Reading
Click to comment

Leave a Reply

Your email address will not be published. Required fields are marked *

Advertisement