Published
7 months agoon
By
Akkare News
ಆಟಿಯಲ್ಲಿ ಒಮ್ಮೆಯಾದರೂ ಕಣಿಲೆ ಖಾದ್ಯ ತಿನ್ನಲೇ ಬೇಕು ಎನ್ನುವುದು ಕರಾವಳಿ ಮತ್ತು ಮಲೆನಾಡಿನಲ್ಲಿರುವ ನಂಬಿಕೆ. ನೈಸರ್ಗಿಕವಾಗಿ ಬೆಳೆಯುವ ಬಿದಿರಿನ ಬುಡದಿಂದ ಮೊಳಕೆಯೊಡೆದು ಬರುವ ಎಳೆ ಬಿದಿರೇ ಈ ಕಣಿಲೆ ಅಥವಾ ಕಳಲೆ. ಇದರ ರುಚಿ ಮತ್ತು ಆರೋಗ್ಯಕರ ಅಂಶಗಳು ಖಾದ್ಯಪ್ರಿಯರನ್ನು ಸೆಳೆಯುತ್ತವೆ.
ಹಿಂದೆ ಮಳೆಗಾಲದಲ್ಲಿ ಅನಿವಾರ್ಯ ತಿನಿಸಾಗಿದ್ದ ಕಣಿಲೆ ಈಗ ಬೇಡಿಕೆಯ ಆಹಾರವಾಗಿದೆ.


ಶೀತ ಕಾಲದಲ್ಲಿ ದೇಹವನ್ನು ಬೆಚ್ಚಗಿಡುವ ಆಹಾರಗಳಲ್ಲಿ ಕಣಿಲೆಯೂ ಒಂದು. ಅದರ ಜತೆಗೆ ಹಲವು ಆರೋಗ್ಯದ ಲಾಭಗಳು ಇದರಲ್ಲಿವೆ. ಕಣಿಲೆಯಿಂದ ಮುಖ್ಯವಾಗಿ ಪಲ್ಯ, ಗಶಿ, ಸಾಂಬಾರ್, ಬೋಂಡಾ, ಕಡುಬು, ಉಪ್ಪಿನಕಾಯಿ.. ಹೀಗೆ ಹಲವು ಪದಾರ್ಥಗಳನ್ನು ಮಾಡಲಾಗುತ್ತದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಭಾಗದಲ್ಲಿ ಜುಲೈ-ಆಗಸ್ಟ್‌ನಲ್ಲಿ ಕಣಿಲೆಯಿಂದ ಬಗೆಬಗೆಯ ಪದಾರ್ಥಗಳನ್ನು ಮಾಡುವುದು ರೂಢಿ.



ನೀರಲ್ಲಿ ಹಾಕಿಡಬೇಕು
ಮಳೆಗಾಲ ಆರಂಭವಾದ ಬಳಿಕ ಬಿದಿರು ಮೊಳಕೆಯೊಡೆಯುತ್ತದೆ. ಹೆಚ್ಚಾಗಿ ಆಷಾಢ ತಿಂಗಳಲ್ಲಿಯೇ ಎಳೆ ಬಿದಿರು ಆಗುತ್ತದೆ. ಎಳೆ ಬಿದಿರನ್ನು ಕತ್ತರಿಸಿ ತಂದು ತುಂಬಾ ಸಣ್ಣದಾಗಿ ಕೊಚ್ಚಬೇಕು (ಕತ್ತರಿಸಬೇಕು). ಕೊಚ್ಚಿದ ಅನಂತರ ಅದನ್ನು ಕನಿಷ್ಠ ಒಂದು ದಿನ ನೀರಿನಲ್ಲಿ ಹಾಕಿಡಬೇಕು. ಕೆಲವರು ನೀರು ಬದಲಿಸುತ್ತಾ ಎರಡು-ಮೂರು ದಿನ ಇಡುವುದೂ ಇದೆ.

ಕಣಿಲೆಯಲ್ಲಿ ಸೈನೋಜೆನಿಕ್ ಗ್ಲೈಕೋಸೈಟ್ ಎಂಬ ನೈಸರ್ಗಿಕ ವಿಷಕಾರಿ ಅಂಶ ಸ್ವಲ್ಪ ಪ್ರಮಾಣದಲ್ಲಿರುತ್ತದೆ. ಅದನ್ನು ತೆಗೆಯುವುದಕ್ಕಾಗಿ ನೀರಿನಲ್ಲಿ ಹಾಕಿಡಲಾಗುತ್ತದೆ.
ಕಣಿಲೆ ಪಲ್ಯ ಮಾಡುವುದು ಹೇಗೆ?
ಬೇಕಾಗುವ ಪದಾರ್ಥಗಳು: ಕತ್ತರಿಸಿದ (ಕೊಚ್ಚಿದ) ಕಣಿಲೆ, ಸ್ವಲ್ಪ ಒಣ ಮೆಣಸು, ಅರ್ಧ ಗಡಿ ತೆಂಗಿನಕಾಯಿ, ಸ್ವಲ್ಪ ಕೊತ್ತಂಬರಿ, ಸ್ವಲ್ಪ ಸಾಸಿವೆ, ಸ್ವಲ್ಪ ಅರಿಶಿಣ, ಎಣ್ಣೆ 2 ಚಮಚ, ಒಂದು ಈರುಳ್ಳಿ, ಸ್ವಲ್ಪ ಕರಿಬೇವಿನ ಎಲೆ.

ಮಾಡುವ ವಿಧಾನ: ಮೊದಲಿಗೆ ಒಣ ಮೆಣಸನ್ನು ಎಣ್ಣೆಯಲ್ಲಿ ಹಾಕಿ ಹುರಿಯಬೇಕು. ಬಳಿಕ ಅರ್ಧ ಗಡಿ ಕಾಯಿ, ಕೊತ್ತಂಬರಿ, ಸಾಸಿವೆ ಹಾಕಿ ಅರೆಯಬೇಕು. ಜಾಸ್ತಿ ನೀರು ಮಾಡಬಾರದು.
ಇನ್ನೊಂದು ಪಾತ್ರೆಯನ್ನು ಒಲೆ ಮೇಲಿಟ್ಟು ಎಣ್ಣೆ ಹಾಕಿ. ಬಿಸಿ ಆದ ಬಳಿಕ ಸಾಸಿವೆ ಹಾಕಿ, ಬಳಿಕ ಕರಿಬೇವಿನ ಎಲೆ ಹಾಕಿ. ಅನಂತರ ಈರುಳ್ಳಿ ಹಾಕಿ. ಕಂದು ಬಣ್ಣ ಬರುವವರೆಗೆ ಹುರಿಯಿರಿ. ಹಚ್ಚಿಟ್ಟ ಕಣಿಲೆಯನ್ನು ಹಾಕಿ, 2-3 ನಿಮಿಷ ಹುರಿಯಿರಿ. ಅನಂತರ ಮೊದಲಿಗೆ ಕಡಿದು ಇಟ್ಟ ಮಸಾಲೆ ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಮಿಶ್ರಣ ಮಾಡಿ. 1 ಕಪ್ ನೀರು ಸೇರಿಸಿ, ಪಾತ್ರೆ ಬಾಯಿ ಮುಚ್ಚಿ 20-25 ನಿಮಿಷ ಬೇಯಿಸಿ. ಆಗಾಗ ಸೌಟು ಹಾಕಿ ಕರಟದಂತೆ ನೋಡಿಕೊಳ್ಳಿ. ನೀರು ಆವಿಯಾಗುವವರೆಗೆ ಬೇಯಿಸಿ. ಅನಂತರ ಒಲೆ ಆರಿಸಿ. ರುಚಿಯಾದ ಪಲ್ಯ ಸಿದ್ಧವಾಗಿರುತ್ತದೆ.


ಕಣಿಲೆ ತಿನ್ನುವುದರಿಂದ ಏನೇನು ಉಪಯೋಗ?
– ಕಣಿಲೆಯಲ್ಲಿ ಸೋಡಿಯಂ, ಕ್ಯಾಲ್ಸಿಯಂ, ಪ್ರೋಟೀನ್, ಕಾರ್ಬೋಹೈಡ್ರೇಟ್, ಫೈಬರ್ ಮತ್ತು ಖನಿಜಾಂಶಗಳು ಹೇರಳವಾಗಿವೆ.
– ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಸಾಂಕ್ರಾಮಿಕ ಮತ್ತು ಬ್ಯಾಕ್ಟೀರಿಯಾ ಸೋಂಕಿನಿಂದ ನಮ್ಮನ್ನು ರಕ್ಷಿಸುವ ಗುಣ ಇದರಲ್ಲಿ ಇದೆ.
– ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ದೇಹಕ್ಕೆ ಅಗತ್ಯವಿಲ್ಲದ ಕೆಟ್ಟ ಕೊಲೆಸ್ಟ್ರಾಲ್ ಕರಗಿಸಲು ಸಹಾಯ ಮಾಡುತ್ತದೆ.
– ಕಣಿಲೆಯಲ್ಲಿ ಪೊಟ್ಯಾಶಿಯಮ್ ಮತ್ತು ರಂಜಕ ಹೇರಳವಾಗಿರಿವುದರಿಂದ ಮೂಳೆ ಹಾಗೂ ಸ್ನಾಯು ಬಲ ಪಡಿಸಲು ಸಹಾಯ ಮಾಡುತ್ತದೆ.
– ಜೀವಕೋಶದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕರುಳಿನ ಸಮಸ್ಯೆಗಳನ್ನು ನಿವಾರಿಸುತ್ತದೆ.
– ಜೀರ್ಣಕ್ರಿಯೆ ಉದ್ದೀಪನಗೊಳಿಸುತ್ತದೆ. ಗ್ಯಾಸ್ಟ್ರಿಕ್ ಕಡಿಮೆ ಮಾಡಲು ಬಹಳಷ್ಟು ಸಹಕಾರಿ.
– ಋತುಚಕ್ರದ ವೇಳೆ ಅಧಿಕ ರಕ್ತಸ್ರಾವವನ್ನು ತಡೆಯಲು ಸಹಕಾರಿಯಾಗುತ್ತದೆ.
– ಕ್ಯಾಲೊರಿ ಅಂಶ ತುಂಬಾ ಕಡಿಮೆ ಇರುವುದರಿಂದ ದೇಹದ ತೂಕ ಇಳಿಸಲು ಸಹಕಾರಿ.
– ಫಿನಾಲಿಕ್ ಎಂಬ ಅಂಶ ಕಣಿಲೆಯಲ್ಲಿ ಹೆಚ್ಚಾಗಿರುವುದರಿಂದ ಕ್ಯಾನ್ಸರ್ ರೋಗ ಬರದಂತೆ ತಡೆಯುತ್ತದೆ.




