Published
6 months agoon
By
Akkare News
ಚೆನ್ನೈ: ಆಸ್ಪತ್ರೆಯಲ್ಲಿ ರೋಗಿಗಳ ಅರೋಗ್ಯ ವಿಚಾರಿಸುತ್ತಿರುವ ವೇಳೆ ಹೃದಯಾಘಾತಗೊಂಡು ಖ್ಯಾತ ಹೃದ್ರೋಗ ತಜ್ಞ ಕೊನೆಯುಸಿರೆಳೆದ ಆಘಾತಕಾರಿ ಘಟನೆಯೊಂದು ಚೆನ್ನೈಯಲ್ಲಿ ಬುಧವಾರ (ಆ.27) ನಡೆದಿದೆ.


ಇಲ್ಲಿನ ಸವೀತಾ ವೈದ್ಯಕೀಯ ಕಾಲೇಜಿನ ಖ್ಯಾತ ಹೃದ್ರೋಗ ತಜ್ಞರಾದ ಡಾ. ಗ್ರಾಡ್ಲಿನ್ ರಾಯ್ (39) ಹೃದಯಾಘಾತಕ್ಕೊಳಗಾದ ವೈದ್ಯ.
ಕಳೆದ ಬುಧವಾರ (ಆ.27) ರಾಯ್ ಅವರು ಆಸ್ಪತ್ರೆಯಲ್ಲಿ ರೋಗಿಗಳ ಅರೋಗ್ಯ ತಪಾಸಣೆ ನಡೆಸುತ್ತಿರುವ ವೇಳೆ ಇದ್ದಕಿದ್ದಂತೆ ಕುಸಿದು ಬಿದ್ದಿದ್ದಾರೆ ಈ ವೇಳೆ ಅಲ್ಲೇ ಇದ್ದ ಇತರ ಸಹೋದ್ಯೋಗಿಗಳು ಪ್ರಾಥಮಿಕ ಚಿಕಿತ್ಸೆ ನೀಡಿ ಜೀವ ಉಳಿಸುವ ಪ್ರಯತ್ನ ಮಾಡಿದ್ದಾರೆ ಆದರೆ ಅದು ಯಾವುದೂ ಪ್ರಯೋಜನವಾಗಲಿಲ್ಲ ಕೊನೆಗೂ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.
ಖ್ಯಾತ ವೈದ್ಯರ ಅಕಾಲಿಕ ನಿಧನಕ್ಕೆ ಹೈದರಾಬಾದ್ ನ ಖ್ಯಾತ ವೈದ್ಯರಾದ ಡಾ. ಸುಧೀರ್ ಕುಮಾರ್ ಸಂತಾಪ ಸೂಚಿಸಿ ಸಾಮಾಜಿಕ ಜಾಲತಾಣ ‘X’ ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದು ಕರ್ತವ್ಯದ ವೇಳೆ ಹೃದಯಾಘಾತಕ್ಕೆ ಒಳಗಾದ ವೈದ್ಯರಿಗೆ ಸಹದ್ಯೋಗಿಗಳು ಸಿಪಿಆರ್, ಸ್ಟೆಂಟಿಂಗ್‌ನೊಂದಿಗೆ ತುರ್ತು ಆಂಜಿಯೋಪ್ಲ್ಯಾಸ್ಟಿ ನೊಂದಿಗೆ 100% ಚಿಕಿತ್ಸೆ ನೀಡಿದರೂ ವೈದ್ಯರನ್ನು ಬದುಕಿಸಲು ಸಾಧ್ಯವಾಗಲಿಲ್ಲ ಎಂದು ಬರೆದುಕೊಂಡಿದ್ದಾರೆ.

ತಜ್ಞರು ಹೇಳುವಂತೆ ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ಹೆಚ್ಚು ಹೃದಯಾಘಾತ ಪ್ರಕರಣಗಳು ಬೆಳಕಿಗೆ ಬರುತ್ತಿವೆ ಈ ಪ್ರಕರಣಗಳ ಹಿಂದೆ ಹಲವು ಕಾರಣಗಳಿವೆ. ಅದರಲ್ಲಿ ಮುಖ್ಯ ಕಾರಣ ದೀರ್ಘ ಕೆಲಸದ ಸಮಯ ಎಂದು ಹೇಳಿದ್ದಾರೆ. ವೈದ್ಯರು ಸಾಮಾನ್ಯವಾಗಿ 12 ರಿಂದ 18 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ, ಕೆಲವೊಮ್ಮೆ ಅಗತ್ಯ ಬಿದ್ದಾಗ ಒಂದೇ ಪಾಳಿಯಲ್ಲಿ 24 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುತ್ತಾರೆ. ಇದು ಅವರ ದೇಹ ಮತ್ತು ಮನಸ್ಸಿನ ಮೇಲೆ ಅಪಾರ ಒತ್ತಡವನ್ನುಂಟು ಮಾಡುತ್ತದೆ ಎಂದು ಹೇಳಿದ್ದಾರೆ.









