Published
5 months agoon
By
Akkare News
ಬೆಂಗಳೂರು, ಅಕ್ಟೋಬರ್ 05: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಕಾಡಾನೆ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಆನೆಗಳನ್ನು ಮರಳಿ ಕಾಡಿಗಟ್ಟಲು ಪ್ರತ್ಯೇಕ ಆನೆ ಕಾರ್ಯಪಡೆ ರಚಿಸಲು ಆದೇಶಿದ್ದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ, ಈ ಪಡೆಗೆ 48 ಸಿಬ್ಬಂದಿ ನಿಯೋಜನೆಗೆ ಅನುಮೋದನೆ ನೀಡಿದ್ದಾರೆ.

ಈ ಕಾರ್ಯಪಡೆಯ ನೇತೃತ್ವವನ್ನು ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಹಿಸಲಿದ್ದು, ಪಡೆಯಲ್ಲಿ ಒಬ್ಬರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಒಬ್ಬರು ಪಶುವೈದ್ಯಾಧಿಕಾರಿ, ಒಬ್ಬರು ವಲಯ ಅರಣ್ಯಾಧಿಕಾರಿ, ನಾಲ್ವರು ಉಪ ವಲಯ ಅರಣ್ಯಾಧಿಕಾರಿ ಹಾಗೂ 8 ಅರಣ್ಯ ರಕ್ಷಕರು ಹಾಗೂ 32 ಹೊರಗುತ್ತಿಗೆಯ ಮುಂಚೂಣಿ ಸಿಬ್ಬಂದಿ ಇರಲಿದ್ದಾರೆ.

ಈಆನೆ ಕಾರ್ಯಪಡೆಯು ಕಾಡಾನೆಗಳು ಓಡಾಡುವ ವಸತಿ ಪ್ರದೇಶ, ರೈತರ ತೋಟ, ಜಮೀನಿನ ಬಳಿ ಗಸ್ತು ತಿರುಗಲಿದ್ದು, ಆನೆಗಳು ಕಂಡು ಬಂದಲ್ಲಿ ಕಾಡಿಗೆ ಮರಳಿಸುವ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳಲಿದೆ ಮತ್ತು ಆನೆಗಳ ಚಲನವಲನದ ಬಗ್ಗೆ ಕಂಟ್ರೋಲ್ ರೂಂಗೆ ಮಾಹಿತಿ ನೀಡಿ ಆ ಮೂಲಕ ಸಾರ್ವಜನಿಕರಿಗೆ ಮುನ್ನಚ್ಚರಿಕೆ ಸಂದೇಶ ರವಾನಿಸಲು ನೆರವಾಗಲಿದೆ. ಇದರಿಂದ ರೈತರಿಗೆ ಉಂಟಾಗುತ್ತಿದ್ದ ಬೆಳೆ ಹಾನಿ ತಪ್ಪಿಸಲು ಮತ್ತು ಅಮೂಲ್ಯ ಜೀವ ಉಳಿಸಲು ಸಹಕಾರಿ ಆಗಲಿದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ



