Published
5 months agoon
By
Akkare News
ಕರ್ನಾಟಕ ಸರ್ಕಾರವು ಬಿ – ಖಾತಾ ಸಮಸ್ಯೆಗಳ ನಡುವೆಯೇ ಆಸ್ತಿದಾರರಿಗೆ ಭರ್ಜರಿ ಗುಡ್ನ್ಯೂಸ್ ಕೊಟ್ಟಿದೆ. ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವೊಂದು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಅದರಲ್ಲೂ ಮುಖ್ಯವಾಗಿ ಈಗಾಗಲೇ ಎಲ್ಲಾ ಆಸ್ತಿಗಳಿಗೂ ಇ ಖಾತಾ ಕಡ್ಡಾಯ ಮಾಡಲಾಗಿದೆ. ಅಲ್ಲದೇ ಇದೀಗ ಯಾವುದೇ ಸಿಸಿ ಮತ್ತು ಓಸಿ ಪಡೆದುಕೊಳ್ಳದೆಯೇ ಈಗಾಗಲೇ ಕಟ್ಟಡಗಳನ್ನು ನಿರ್ಮಾಣ ಮಾಡಿರುವ ಆಸ್ತಿದಾರರಿಗೆ ಗುಡ್ನ್ಯೂಸ್ ಕೊಡುವುದಕ್ಕೆ ಮುಂದಾಗಿದೆ.


ಬೆಂಗಳೂರು ಹಾಗೂ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಹಲವು ಆಸ್ತಿ ಮಾಲೀಕರು ಸರ್ಕಾರ / ಸ್ಥಳೀಯ ಆಡಳಿತದಿಂದ ಸಿಸಿ ಹಾಗೂ ಓಸಿಯನ್ನು ಪಡೆದುಕೊಳ್ಳದೆಯೇ ಕಟ್ಟಡಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಈ ರೀತಿ ಕಟ್ಟಡಗಳನ್ನು ನಿರ್ಮಾಣ ಮಾಡಿಕೊಂಡಿರುವವರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದು, ಇದೀಗ ಈ ಮಾದರಿಯ ಆಸ್ತಿದಾರರಿಗೆ ನಿರಾಳತೆ ಅಥವಾ ಪರಿಹಾರ ಕೊಡುವುದಕ್ಕೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಹಾಗೂ ರಾಜ್ಯದ ಇನ್ನುಳಿದ ಪ್ರದೇಶಗಳಲ್ಲಿ ನಿರ್ಮಿಸಿರುವ ಕಟ್ಟಡಗಳಿಗೆ ನೀರು ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಕುರಿತು ಬುಧವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸಭೆ ನಡೆಸಲಾಗಿದೆ.


ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಕೆಲವು ಆಸ್ತಿದಾರರು ಸಿಸಿ ಮತ್ತು ಓಸಿ ಪಡೆದುಕೊಳ್ಳದೆ ಈಗಾಗಲೇ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದಾರೆ. ರಾಜ್ಯ ಸರ್ಕಾರವು ಇದೀಗ ಕೆಲವೊಂದು ನಿರ್ದಿಷ್ಟ ಆಸ್ತಿಗಳಿಗೆ ಸಿಸಿ ಹಾಗೂ ಓಸಿಯಿಂದ ವಿನಾಯಿತಿ ಕೊಡುವುದಕ್ಕೆ ಮುಂದಾಗಿದೆ. ಹೊಸದಾಗಿ ಕಟ್ಟಿರುವ ಅಥವಾ ನಿರ್ಮಾಣ ಮಾಡಿರುವ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ, ನೀರು ಸರಬರಾಜು ವ್ಯವಸ್ಥೆಯನ್ನು ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಬುಧವಾರ (ಅಕ್ಟೋಬರ್ 08)ರಂದು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಮಹತ್ವದ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕದ ಆಸ್ತಿದಾರರು ವಿದ್ಯುತ್ ಹಾಗೂ ನೀರು ಸರಬರಾಜು ವ್ಯವಸ್ಥೆ ಇಲ್ಲದೆ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಚರ್ಚಿಸಲಾಯಿತು. ಅಲ್ಲದೇ ಓಸಿ ಮತ್ತು ಸಿಸಿ ಸಮಸ್ಯೆಯಿಂದಾಗಿ ಆಸ್ತಿ ಮಾಲೀಕರು ಸಂಕಷ್ಟದಲ್ಲಿದ್ದಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ಅವಶ್ಯಕತೆ ಇದೆ ಎನ್ನುವ ವಿಷಯವನ್ನೂ ಈ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ. 1200 ಅಡಿಯಲ್ಲಿ ಈಗಾಗಲೇ ಕಟ್ಟಿರುವ ಮನೆಗಳಿಗೆ ಮಾತ್ರ ವಿದ್ಯುತ್, ನೀರು ಸರಬರಾಜು ವ್ಯವಸ್ಥೆ ಮಾಡುವುದಕ್ಕೆ ಸರ್ಕಾರ ನಿರ್ಧರಿಸಿದೆ.



