Published
4 months agoon
By
Akkare News
ನ:16 ಮಂಗಳೂರು : ರಾತ್ರಿ ವೇಳೆ ಕಂಬಳ, ಯಕ್ಷಗಾನ ಹಾಗೂ ಜಾತ್ರೆ ಆಚರಣೆಗಳಿಗೆ ಅಡ್ಡಿಪಡಿಸುವುದಿಲ್ಲ ಎಂದು ಜಿಲ್ಲಾಡಳಿತ ಭರವಸೆ ನೀಡಿದೆ. ಆದರೆ, ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಾಗ ಆಸುಪಾಸಿನ ನಿವಾಸಿಗಳಿಗೆ ಕಿರಿಕಿರಿಯಾಗದಂತೆ ಎಚ್ಚರ ವಹಿಸಬೇಕು ಎಂದೂ ಜಿಲ್ಲಾಡಳಿತ ಸೂಚಿಸಿದೆ.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚೆ ನಡೆಯಿತು.


‘ಧ್ವನಿವರ್ಧಕ ಬಳಕೆಯ ನೆಪ ಹೇಳಿ ರಾತ್ರಿ ವೇಳೆ ಕಂಬಳಕ್ಕೆ ಅಡ್ಡಿಪಡಿಸದಂತೆ ಪೊಲೀಸರಿಗೆ ಸೂಚನೆ ನೀಡಬೇಕು’ ಎಂದು ಶಾಸಕ ಅಶೋಕ್ ಕುಮಾರ್ ರೈ ಒತ್ತಾಯಿಸಿದರು.
‘ರಾತ್ರಿ ವೇಳೆ ನಡೆಯುವ ಜಾತ್ರೆಗಳಿಗೂ ಅಡ್ಡಿಪಡಿಸಬಾರದು ಎಂದು ಶಾಸಕಿ ಭಾಗಿರಥಿ ಮುರುಳ್ಯ ಒತ್ತಾಯಿಸಿದರು.

ಯಕ್ಷಗಾನಕ್ಕೆ ಅಡ್ಡಿಪಡಿಸಿ ಜನರ ಧಾರ್ಮಿಕ ನಂಬಿಕೆಗಳಿಗೆ ಚ್ಯುತಿ ಉಂಟುಮಾಡಬೇಡಿ ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ಕೋರಿದರು.
‘ಜಿಲ್ಲಾಡಳಿತವು ಇಂತಹ ಯಾವುದೇ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಿಲ್ಲ’ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಸ್ಪಷ್ಟಪಡಿಸಿದರು.

ಅಕ್ಕಪಕ್ಕದವರಿಗೆ ತೊಂದರೆಯಾಗದಂತೆ ಕಂಬಳ, ಯಕ್ಷಗಾನ ಆಯೋಜಿಸಿದರೆ, ಅನುಮತಿ ನೀಡಲು ಅಡ್ಡಿ ಇಲ್ಲ. ಸ್ಥಳೀಯರಿಂದ ದೂರು ಬಂದಾಗ ಮಾತ್ರ ಪೊಲೀಸರು ಕ್ರಮಕೈಗೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ತಿಳಿಸಿದರು.
ಪುತ್ತೂರಿನಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆಯ ಟ್ರ್ಯಾಕ್ ನಿರ್ಮಾಣಕ್ಕೆ ₹ 9 ಕೋಟಿ ಮಂಜೂರಾಗಿ ವರ್ಷವಾಗಿದೆ. ಸಾಮಾಜಿಕ ಅರಣ್ಯ ವಿಭಾಗದವರು ಮರಗಳನ್ನು ತೆರವುಗೊಳಿದೇ ಅನುದಾನ ಹಿಂದಕ್ಕೆ ಹೋಗುವ ಸ್ಥಿತಿ ಎದುರಾಗಿದೆ ಎಂದು ಶಾಸಕ ಅಶೋಕ್ ರೈ ಅಸಮಾಧಾನ ವ್ಯಕ್ತಪಡಿಸಿದರು. ಸಾಮಾಜಿಕ ಅರಣ್ಯದಲ್ಲಿ ಕಾಟು ಗಿಡಗಳ ಬದಲು, ಹಣ್ಣು ಹಂಪಲುಗಳ ಗಿಡಗಳನ್ನೇ ಬೆಳೆಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯ ಹೊಸ ಬ್ಲಾಕ್ನಲ್ಲಿ 76 ಹೊಸ ಹಾಸಿಗೆಗಳ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಆರ್.ತಿಮ್ಮಯ್ಯ ತಿಳಿಸಿದರು.
ಬೆಳೆ ಸಂರಕ್ಷಣೆಗಾಗಿ ಕೋವಿ ಪರವಾನಗಿ ಪಡೆದ ವ್ಯಕ್ತಿ ಮೃತಪಟ್ಟಾಗ, ಅವರ ಮಕ್ಕಳಲ್ಲಿ ಒಬ್ಬರಿಗೆ ಪರವಾನಗಿ ವರ್ಗಾಯಿಸಲು ಪೊಲೀಸ್ ಇಲಾಖೆ ಮೀನಮೇಷ ಎಣಿಸುತ್ತಿದೆ ಎಂದು ಶಾಸಕ ಅಶೋಕ್ ರೈ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಆರೋಪಿಸಿದರು.
ಅರ್ಹ ಕೃಷಿಕರಿಗೆ ಪರವಾನಗಿ ವರ್ಗಾಯಿಸಲು ಅಡ್ಡಿ ಇಲ್ಲ. ಜಿಲ್ಲೆಯಲ್ಲಿ 25 ಸಾವಿರ ಶಸ್ತ್ರಾಸ್ತ್ರ ಪರವಾನಗಿ ನೀಡಲಾಗಿದೆ. ಹಾಗಾಗಿ ಪರವಾನಗಿ ವರ್ಗಾವಣೆ ಅರ್ಜಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಕ್ರಮವಹಿಸಲಾಗುತ್ತಿದೆ ಎಂದು ಎಸ್.ಪಿ ಡಾ.ಅರುಣ್ ತಿಳಿಸಿದರು.



