Connect with us

ಇತರ

ಡಿ.20 ರಿಂದ ಜನವರಿ 4ರವರೆಗೆ ಕರಾವಳಿ ಉತ್ಸವ; ಜಿಲ್ಲಾಧಿಕಾರಿ ದರ್ಶನ್‌ ಎಚ್‌.ವಿ

Published

on

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಕರಾವಳಿ ಉತ್ಸವವನ್ನು ಡಿ.20ರಿಂದ ಜನವರಿ 4ರವರೆಗೆ ಅಚ್ಚುಕಟ್ಟಾಗಿ ನಡೆಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ದರ್ಶನ್‌ ಎಚ್‌.ವಿ. ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ಸವದ ಅಂಗವಾಗಿ ನಗರದ ಕರಾವಳಿ ಉತ್ಸವ ಮೈದಾನ, ಕದ್ರಿ ಪಾರ್ಕ್ ಮತ್ತು ಕಡಲ ತೀರಗಳಲ್ಲಿ ವಿವಿಧ ಸಾಂಸ್ಕೃತಿಕ, ಕ್ರೀಡಾ ಮತ್ತು ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಕಳೆದ ಮೂರು ತಿಂಗಳಿನಿಂದ ಇದಕ್ಕಾಗಿ ಸಿದ್ಧತೆ ನಡೆಸಲಾಗುತ್ತಿದೆ ಎಂದರು.

ಡಿ.20ರಂದು ಕರಾವಳಿ ಉತ್ಸವ ಮೈದಾನದಲ್ಲಿ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್‌ ಅವರು ಅದ್ಧೂರಿ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಜ.4ರವರೆಗೂ ಕರಾವಳಿ ಉತ್ಸವ ಮೈದಾನದಲ್ಲಿ ವಿವಿಧ ಮಳಿಗೆಗಳು ಮತ್ತು ಅಮ್ಯೂಸ್‌ಮೆಂಟ್‌ ಪಾರ್ಕ್ ಸಾರ್ವಜನಿಕರಿಗೆ ಲಭ್ಯ ಇರಲಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಕರಾವಳಿ ಉತ್ಸವ ಮೈದಾನದ ವೇದಿಕೆಯಲ್ಲಿ ಕರಾವಳಿಯ ಕಲೆ ಮತ್ತು ಸಾಂಸ್ಕೃತಿಕ ಪ್ರದರ್ಶನಗಳನ್ನು ಆಯೋಜಿಸಲಾಗುವುದು ಎಂದು ವಿವರಿಸಿದರು.

ವೈವಿಧ್ಯಮಯ ಕಾರ್ಯಕ್ರಮ:

ಕರಾವಳಿ ಉತ್ಸವದ ವಿಶೇಷ ಆಕರ್ಷಣೆಯಾಗಿ ಚಿತ್ರ ಶಿಲ್ಪ ನೃತ್ಯ ಮೇಳ- ಕಲಾಪರ್ಬ, ಫಲಪುಷ್ಪ ಪ್ರದರ್ಶನ, ಟ್ರಯತ್ಲಾನ್‌, ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ, ಬೀಚ್‌ ಉತ್ಸವ, ಬುಕ್‌ ಫೆಸ್ಟ್‌, ವೈನ್‌ -ಚೀಸ್‌ ಕೇಕ್‌ ಪೆಸ್ಟ್‌, ಫಿಲ್ಮ್‌ ಫೆಸ್ಟಿವಲ್‌, ಡಾಗ್‌ ಶೋ, ಹೆಲಿ ರೈಡ್‌ ಇತ್ಯಾದಿ ಕಾರ್ಯಕ್ರಮಗಳನ್ನು ಜೋಡಿಸಲಾಗಿದೆ. ಉಳಿದ ಕಾರ್ಯಕ್ರಮಗಳನ್ನೂ ಇದೇ ಉತ್ಸವದ ಜತೆ ಆಯೋಜಿಸಲಾಗುತ್ತಿದ್ದು, ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸಂಗೀತ ಸಂಭ್ರಮ ಕಾರ್ಯಕ್ರಮ:

ಜ.3, ಜ.4ರಂದು ಪಣಂಬೂರು, ತಣ್ಣೀರು ಬಾವಿ, ಸಸಿಹಿತ್ಲು ಬೀಚ್‌ಗಳ ಪೈಕಿ ಒಂದರಲ್ಲಿ ಸ್ಯಾಂಡಲ್‌ವುಡ್‌ ಹಾಗೂ ಬಾಲಿವುಡ್‌ನ ಖ್ಯಾತ ಕಲಾವಿದರಿಂದ ಮ್ಯೂಸಿಕಲ್‌ ನೈಟ್‌ ಕಾರ್ಯಕ್ರಮ ನಡೆಯಲಿದೆ. ಈ ಬಾರಿ ವಿಶೇಷ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಉತ್ಸವಗಳು ನಡೆಯಲಿವೆ ಎಂದವರು ತಿಳಿಸಿದರು.

ಫುಡ್‌ ಫೆಸ್ಟಿವಲ್‌, ಬುಕ್‌ ಫೆಸ್ಟ್‌:

ಪುಸ್ತಕ ಓದುವಿಕೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಬುಕ್‌ ಫೆಸ್ಟ್‌ ಆಯೋಜಿಸಲಾಗಿದೆ. ಒಂದೇ ಸೂರಿನಡಿ ತಮಗಿಷ್ಟದ ಪುಸ್ತಕಗಳನ್ನು ಕೊಂಡುಕೊಳ್ಳಲು ಇಲ್ಲಿ ಸಾಧ್ಯವಾಗಲಿದೆ. ಲಾಲ್‌ಬಾಗ್‌ ಮತ್ತು ಕದ್ರಿ ಪಾರ್ಕ್‌ನಲ್ಲಿ ಫುಡ್‌ ಸ್ಟ್ರೀಟ್‌ ಆಯೋಜಿಸಲಾಗುತ್ತಿದ್ದು, ಡಿ.30-31ರಂದು ದಿನಾಂಕ ನಿಗದಿ ಮಾಡಲಾಗಿದೆ ಎಂದರು.

ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಕನ್ನಡ, ತುಳು ಸೇರಿದಂತೆ ವಿವಿಧ ಭಾಷೆಗಳ ಆಯ್ದ ಚಿತ್ರಗಳನ್ನು ಬಿಗ್‌ ಸಿನೆಮಾಸ್‌ನಲ್ಲಿ ಪ್ರದರ್ಶಿಸಲಾಗುವುದು. ಜಿಲ್ಲಾಡಳಿತ ವತಿಯಿಂದ ಕಂಬಳವನ್ನೂ ಆಯೋಜಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನರ್ವಾಡೆ ವಿನಾಯಕ ಕಾರ್ಬಾರಿ, ಅಪರ ಜಿಲ್ಲಾಧಿಕಾರಿ ರಾಜು ಕೆ., ಅಪರಾಧ ಮತ್ತು ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಮಿಥುನ್‌ ಎಚ್‌.ಎನ್‌. ಇದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement