Connect with us

ಇತರ

ಐಎಎಸ್ ಅಧಿಕಾರಿಗೆ ಹೈಕೋರ್ಟ್ ಶಾಕ್; ಮಾನನಷ್ಟ ಪ್ರಕರಣದಲ್ಲಿ ರೋಹಿಣಿ ಸಿಂಧೂರಿಗೆ ಹಿನ್ನಡೆ

Published

on

ಐಎಎಸ್ ರೋಹಿಣಿ ಸಿಂಧೂರಿ ವಿರುದ್ಧ ಐಪಿಎಸ್ ಡಿ. ರೂಪಾ ಮೌದ್ಗಿಲ್ ದಾಖಲಿಸಿದ್ದ ಮಾನನಷ್ಟ ದೂರು ರದ್ದುಪಡಿಸುವ ಸಿಂಧೂರಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಮಾಧ್ಯಮಗಳಲ್ಲಿ ಅವಹೇಳನಕಾರಿ ಹೇಳಿಕೆ ನೀಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರಿಂದ ತಮಗೆ ತೀವ್ರ ತೊಂದರೆಯಾಗಿದೆ ಎಂದು ರೂಪಾ ಆರೋಪಿಸಿದ್ದರು. ಈ ಹಿನ್ನಡೆಯಿಂದ ರೂಪಾ ಮಾನನಷ್ಟ ಪ್ರಕರಣ ಮುಂದುವರಿಯಲಿದೆ.


ಬೆಂಗಳೂರು, ಫೆಬ್ರವರಿ 21: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ (Rohini Sindhuri) ಮಾನನಷ್ಟ ಪ್ರಕರಣದಲ್ಲಿ ಹಿನ್ನಡೆ ಉಂಟಾಗಿದೆ. ರೋಹಿಣಿ ಮಾಧ್ಯಮಗಳ ಮುಂದೆ ತಮ್ಮ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿಯೂ ಹಂಚಿಕೊಂಡಿದ್ದಾರೆ ಎಂದು ರೂಪಾ ಮೌದ್ಗಿಲ್ ಬೆಂಗಳೂರಿನ 7ನೇ ಎಸಿಎಂಎಂ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ದಾಖಲಿಸಿದ್ದ ಖಾಸಗಿ ದೂರು ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಐಎಎಸ್ ಅಧಿಕಾರಿಯ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ವಜಾಗೊಳಿಸಿದೆ.

ಕೇಸ್ ರದ್ದು ಕೋರಿದ್ದ ರೋಹಿಣಿ ಸಿಂಧೂರಿ

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ದಾಖಲಿಸಿದ್ದ ಮಾನನಷ್ಟ ಪ್ರಕರಣಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು. ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ವಿಚಾರಣೆಗೆ ತಡೆ ನೀಡಿ, ರಾಜಿ ಸಂಧಾನಕ್ಕೆ ಪ್ರಯತ್ನಿಸುವಂತೆ ಸಲಹೆ ನೀಡಿದ್ದರು. 19-02-2023ರಂದು ನೀಡಿದ್ದ ಹೇಳಿಕೆಯಲ್ಲಿ ಅವಹೇಳನಕಾರಿ ಆರೋಪಗಳಿವೆ ಎಂದು ರೂಪಾ ಆರೋಪಿಸಿ 7ನೇ ಎಸಿಎಂಎಂ ಕೋರ್ಟ್‌ನಲ್ಲಿ ದೂರು ದಾಖಲಿಸಿದ್ದರು. ಈ ವಿವಾದ ಎರಡು ವರ್ಷಗಳಿಂದ ಮುಂದುವರಿದಿದ್ದು, ಸುಪ್ರೀಂ ಕೋರ್ಟ್‌ನಿಂದ ಮತ್ತೆ ವಿಚಾರಣಾ ನ್ಯಾಯಾಲಯಕ್ಕೆ ವಾಪಸ್ ಕಳುಹಿಸಲಾಗಿತ್ತು. ಈ ಪ್ರಕರಣ ರದ್ದುಪಡಿಸುವಂತೆ ರೋಹಿಣಿ ಸಿಂಧೂರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ತಿರಸ್ಕರಿಸಿದೆ.

2023ರ ಫೆಬ್ರವರಿ 19ರಂದು ರೋಹಿಣಿ ಸಿಂಧೂರಿ ಮಾಧ್ಯಮಗಳಿಗೆ ನೀಡಿದ ಹೇಳಿಕೆಯನ್ನು ನಂತರ ‘ಎಕ್ಸ್’ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಆರೋಪಗಳನ್ನು ಮಾಡಿದ್ದಾರೆ ಎಂದು ರೂಪಾ ಆರೋಪಿಸಿದ್ದರು. ಈ ಹೇಳಿಕೆಯನ್ನು ಸುಮಾರು 1.8 ಲಕ್ಷ ಮಂದಿ ವೀಕ್ಷಿಸಿದ್ದರೆಂದು ದೂರುದಲ್ಲಿ ಉಲ್ಲೇಖಿಸಲಾಗಿದೆ. ಈ ಹೇಳಿಕೆಯ ನಂತರ ತಮಗೆ ವರ್ಗಾವಣೆ ಆಗಿದ್ದು, ಆರು ತಿಂಗಳ ಕಾಲ ಸಂಬಳವಿಲ್ಲದೆ ಹುದ್ದೆ ರಹಿತ ಸ್ಥಿತಿ ಉಂಟಾಯಿತು ಎಂದು ರೂಪಾ ತಿಳಿಸಿದ್ದಾರೆ. ಜೊತೆಗೆ ಕುಟುಂಬದ ಸದಸ್ಯರು ಮಾನಸಿಕ ಯಾತನೆ ಅನುಭವಿಸಿದ್ದಾರೆ ಎಂಬ ಕಾರಣ ನೀಡಿ ಮಾನನಷ್ಟ ಪ್ರಕರಣ ದಾಖಲಿಸಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement