Published
2 weeks agoon
By
Akkare News
ಉಳ್ಳಾಲ: ಸಹೋದರ-ಸಹೋದರಿಯರ ಜೊತೆ ಮನೆಯಲ್ಲಿ ಲೂಡೋ ಆಟವಾಡುತ್ತಿದ್ದ ಎಂಟು ವರ್ಷದ ಬಾಲಕಿಯೊಬ್ಬಳು ಆಕಸ್ಮಿಕವಾಗಿ ಪ್ಲಾಸ್ಟಿಕ್ ಕಾಯಿನ್ ನುಂಗಿ ಉಸಿರುಗಟ್ಟಿ ಸಾವನ್ನಪ್ಪಿರುವ ದಾರುಣ ಘಟನೆ ತೊಕ್ಕೊಟ್ಟು ಸಮೀಪದ ಕೊಲ್ಯ ಎಂಬಲ್ಲಿ ಶನಿವಾರ ನಡೆದಿದೆ.

ಘಟನೆಯ ವಿವರ:
ಮೃತ ಬಾಲಕಿಯನ್ನು ಕಾಸರಗೋಡು ಜಿಲ್ಲೆಯ ಮಧೂರು ಉಳಿಯತಡ್ಕ ನಿವಾಸಿ ರಾಜೇಶ್ ಗಟ್ಟಿ ಮತ್ತು ರಾಜೇಶ್ವರಿ ದಂಪತಿಯ ಎರಡನೇ ಪುತ್ರಿ ತನುಷ್ಕಾ (8) ಎಂದು ಗುರುತಿಸಲಾಗಿದೆ. ತನುಷ್ಕಾ ಅವರ ತಾಯಿ ಉಳ್ಳಾಲದ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದು, ಕೆಲಸಕ್ಕೆ ಹೋಗಲು ಅನುಕೂಲವಾಗಲೆಂದು ಕುಟುಂಬವು ಕೊಲ್ಯದ ಬಾಡಿಗೆ ಮನೆಯೊಂದರಲ್ಲಿ ವಾಸವಿತ್ತು.

ಶನಿವಾರ ಶಾಲೆಗೆ ರಜೆ ಇದ್ದ ಕಾರಣ ತನುಷ್ಕಾ ತನ್ನ ಅಣ್ಣ ಮತ್ತು ತಂಗಿಯ ಜೊತೆ ಲೂಡೋ ಆಟವಾಡುತ್ತಿದ್ದಳು. ಈ ವೇಳೆ ಆಟದಲ್ಲಿ ಬಳಸುವ ಶಂಕು (Cone) ಆಕಾರದ ಪ್ಲಾಸ್ಟಿಕ್ ಕಾಯಿನ್ ಅನ್ನು ಆಕೆ ಆಕಸ್ಮಿಕವಾಗಿ ನುಂಗಿದ್ದಾಳೆ. ತಕ್ಷಣವೇ ಆಕೆಗೆ ಉಸಿರುಗಟ್ಟಿದ್ದು, ಗಾಬರಿಗೊಂಡ ತಾಯಿ ನೆರೆಹೊರೆಯವರ ಸಹಾಯದೊಂದಿಗೆ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ದೇರಳಕಟ್ಟೆಯ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಅಷ್ಟರಲ್ಲಾಗಲೇ ಬಾಲಕಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಬಾಲಕಿಯ ಮರಣೋತ್ತರ ಪರೀಕ್ಷೆಯ ವೇಳೆ ಆಕೆಯ ಶ್ವಾಸಕೋಶದಲ್ಲಿ ಪ್ಲಾಸ್ಟಿಕ್ ಕಾಯಿನ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ತನುಷ್ಕಾ ತೊಕ್ಕೊಟ್ಟಿನ ಖಾಸಗಿ ಹೈಸ್ಕೂಲ್ ನ ಎರಡನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ಆಕೆಯ ಸಾವು ಕುಟುಂಬಸ್ಥರಲ್ಲಿ ಮತ್ತು ಗ್ರಾಮದಲ್ಲಿ ಶೋಕದ ಛಾಯೆ ಮೂಡಿಸಿದೆ.








