Published
2 weeks agoon
By
Akkare News
ಜಿಲ್ಲಾ ಮಟ್ಟದ ಉದ್ಯೋಗ ಮೇಳ ಯೋಜನೆಗೊಂಡಿದ್ದ ನೆಹರೂ ನಗರದ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು ಕಟ್ಟಡದ 4ನೇ ಮಹಡಿಯಿಂದ ಕೆಳಕ್ಕೆ ಧುಮುಕಿದ ಮುಳ್ಳು ಹಂದಿಯೊಂದು ಮೈದಾನದಲ್ಲಿ ಬಿದ್ದು ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ಸಂಭವಿಸಿದೆ.
ಕಾಲೇಜಿನ ಆವರಣದಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳಕ್ಕೆ ಸಿದ್ಧತೆ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿತು.

ನಾಯಿಗಳನ್ನು ಕಂಡು ಮುಳ್ಳುಹಂದಿ ಓಡಿಕೊಂಡು ಬಂದು ಕಾಲೇಜು ಆವರಣ ಪ್ರವೇಶಿಸಿತ್ತು. ಕೆಲವೇ ಹೊತ್ತಿನಲ್ಲಿ ಅದು ಕಾಲೇಜು ಕಟ್ಟಡದೊಳಗೆ ಪ್ರವೇಶಿಸಿ ಮೆಟ್ಟಿಲು ಹತ್ತುತ್ತ ೩ನೇ ಮಹಡಿ ತಲುಪಿತ್ತು.

ಮೆಟ್ಟಿಲ ಮೇಲೆ ಭಯದಿಂದ ಮುದುಡಿ ಕೂತಿದ್ದ ಮುಳ್ಳುಹಂದಿಯನ್ನು ಕಂಡು ಜನ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಇಲಾಖೆಯ ಸಿಬಂದಿಗಳು, ಉಪ ವಲಯ ಅರಣ್ಯಾಕಾರಿ ಉಲ್ಲಾಸ್ ಅವರ ನೇತೃತ್ವದಲ್ಲಿ ಬಂದು ಮುಳ್ಳು ಹಂದಿಯನ್ನು ರಕ್ಷಿಸಲು ಯತ್ನಿಸಿದರು. ಭಯಗೊಂಡ ಮುಳ್ಳು ಹಂದಿ ಮೆಟ್ಟಿಲು ಹತ್ತುತ್ತಾ ಇನ್ನೊಂದು ಮಹಡಿಗೆ ಹೋಗಿದ್ದಲ್ಲದೆ, ಕಿಟಕಿಯೊಳಗೆ ತೂರಿ ಕೆಳಕ್ಕೆ ಜಿಗಿದಿದೆ. ನೆಲದ ಮೇಲೆ ಬಿದ್ದ ಹೊಡೆತಕ್ಕೆ ಸ್ಥಳದಲ್ಲೇ ಸಾವನ್ನಪ್ಪಿದೆ.









