Published
2 weeks agoon
By
Akkare News
ಅಂಕೋಲಾ : ಜೂನ್ ಒಳಗೆ ರಾಜ್ಯದಲ್ಲಿ ಜಿಲ್ಲಾ ಪಂಚಾಯತ, ತಾಲೂಕು ಪಂಚಾಯತ ಹಾಗೂ ಗ್ರಾಮ ಪಂಚಾಯತ ಚುನಾವಣೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಮಂಜಗುಣಿಯಲ್ಲಿ ಗಂಗಾವಳಿ ನದಿಗೆ ಕಟ್ಟಲಾದ ಗಂಗಾವಳಿ-ಮಂಜುಗುಣಿ ಸೇತುವೆ ಉದ್ಘಾಟಿಸಿ ಮಾತನಾಡಿದ ಅವರು, ಗೋಕರ್ಣವನ್ನು ಮೇಲ್ದರ್ಜಗೇರಿಸಿ ಪಟ್ಟಣ ಪಂಚಾಯತ ಒತ್ತಾಯ ಇದ್ದಾಗ್ಯೂ ಜೂನ್ ಒಳಗೆ ಜಿಪಂ ಹಾಗೂ ತಾಪಂ ಚುನಾವಣೆ ನಡೆಸಬೇಕಾಗಿರುವುದರಿಂದ ಅದನ್ನು ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ಈ ಚುನಾವಣೆಗಳನ್ನು ನಡೆಸಲು ತಯಾರಿ ಮಾಡಬೇಕಾಗಿದೆ. ಗೋಕರ್ಣವನ್ನು ಪಟ್ಟಣ ಪಂಚಾಯತ ಆಗಿ ಮೇಲ್ದರ್ಜೆಗೆ ಏರಿಸಲು ಪ್ರದೇಶದ ವ್ಯಾಪ್ತಿ ಗುರುತಿಸಬೇಕಿದೆ. ಹೀಗಾಗಿ ಇದನ್ನು ಜಿಪಂ ಹಾಗೂ ತಾಪಂ ಚುನಾವಣೆ ನಂತರ ಪಟ್ಟಣ ಪಂಚಾಯತವಾಗಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಹೇಳಿದರು.
ಹಾಲಕ್ಕಿ ಒಕ್ಕಲಿಗರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಇದನ್ನು ಮಾಡಬೇಕಾಗಿರುವುದು ಕೇಂದ್ರ ಸರ್ಕಾರ. ಇದು ನಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಇಲ್ಲ. ಹೀಗಾಗಿ ಕೇಂದ್ರಕ್ಕೆ ಮತ್ತೊಮ್ಮೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ಹೇಳಿದರು.

ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ಮಂಜಗುಣಿ ಗ್ರಾಮದಲ್ಲಿ ನಿರ್ಮಿಸಲಾಗಿರುವ ಅಂಕೋಲಾ ತಾಲೂಕಿನ ಮಂಜಗುಣಿ ಗ್ರಾಮದಿಂದ ಕುಮುಟಾ ತಾಲೂಕಿನ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಗಂಗಾವಳಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಿದರು. ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಶಾಸಕರಾದ ಸತೀಶ ಸೈಲ್, ಆರ್.ವಿ.ದೇಶಪಾಂಡೆ, ಭೀಮಣ್ಣ ನಾಯ್ಕ, ದಿನಕರ ಶೆಟ್ಟಿ ಮೊದಲಾದವರಿದ್ದರು.









