Connect with us

ಇತರ

ಜಾರ್ಖಂಡ್ | ಏರ್ ಆಂಬ್ಯುಲೆನ್ಸ್ ಪತನ : ರೋಗಿ, ವೈದ್ಯ ಸೇರಿ 7 ಮಂದಿ ಸಾವು

Published

on

ರಾಂಚಿಯಿಂದ ದೆಹಲಿಗೆ ತೆರಳುತ್ತಿದ್ದ ಏರ್ ಆಂಬ್ಯುಲೆನ್ಸ್ ಜಾರ್ಖಂಡ್‌ನ ಛಾತ್ರಾ ಜಿಲ್ಲೆಯಲ್ಲಿ ಸೋಮವಾರ (ಫೆ.24) ಪತನಗೊಂಡಿದ್ದು, ಅದರಲ್ಲಿದ್ದ ಎಲ್ಲಾ ಏಳು ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.

ರೆಡ್‌ಬರ್ಡ್‌ ಏರ್ವೇಸ್ ಪ್ರೈವೆಟ್ ಲಿಮಿಟೆಡ್ ಎಂಬ ಸಂಸ್ಥೆ ನಿರ್ವಹಣೆ ಮಾಡುತ್ತಿದ್ದ ವಿಮಾನ, ಸಂಜೆ 7.11ಕ್ಕೆ ರಾಂಚಿ ವಿಮಾನ ನಿಲ್ದಾಣದಿಂದ ಟೇಕ್‌ ಆಫ್‌ ಆಗಿದ್ದು, ಸ್ವಲ್ಪ ಹೊತ್ತಿನಲ್ಲೇ ಪತನಗೊಂಡಿದೆ ಎಂದು ವರದಿಗಳು ಹೇಳಿವೆ.

ಕ್ಯಾಪ್ಟನ್ ವಿವೇಕ್ ವಿಕಾಸ್ ಭಗತ್, ಕ್ಯಾಪ್ಟನ್ ಸವ್ರಜ್‌ದೀಪ್ ಸಿಂಗ್, ರೋಗಿ ಸಂಜಯ್ ಕುಮಾರ್, ವೈದ್ಯ ವಿಕಾಸ್ ಕುಮಾರ್ ಗುಪ್ತಾ, ಪ್ಯಾರಾಮೆಡಿಕ್ ಸಚಿನ್ ಕುಮಾರ್ ಮಿಶ್ರಾ, ಸಹಾಯಕರಾದ ಅರ್ಚನಾ ದೇವಿ ಮತ್ತು ಧುರು ಕುಮಾರ್ ಮೃತರು ಎಂದು ತಿಳಿದು ಬಂದಿದೆ.

“ವಿಮಾನ ಸಂಜೆ 7.30ರ ಸುಮಾರಿಗೆ ಕಾಣೆಯಾಗಿತ್ತು. ನಂತರ ಅದು ಸಿಮಾರಿಯಾದ ಬರಿಯಾಟು ಪಂಚಾಯತ್ ಪ್ರದೇಶದ ಕಾಡಿನಲ್ಲಿ ಪತನಗೊಂಡಿದೆ. ಅದರಲ್ಲಿದ್ದ ಏಳು ಮಂದಿಯೂ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ವಿಮಾನ ರಾಂಚಿಯಿಂದ ದೆಹಲಿಗೆ ತೆರಳುತ್ತಿತ್ತು” ಎಂದು ಛಾತ್ರಾ ಜಿಲ್ಲಾಧಿಕಾರಿ ಕೀರ್ತಿಶ್ರೀ ಅವರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಏಳು ಮಂದಿ ಮೃತರ ಶವಗಳನ್ನು ಹೊರತೆಗೆಯಲಾಗಿದೆ ಎಂದು ಎಸ್‌ಡಿಪಿಒ ಶುಭಂ ಖಂಡೇಲ್ವಾಲ್ ಪಿಟಿಐಗೆ ಹೇಳಿದ್ದಾರೆ.

ಡಿಜಿಸಿಎ ವೆಬ್‌ಸೈಟ್ ಪ್ರಕಾರ, ದೆಹಲಿ ಮೂಲದ ನಾನ್-ಶೆಡ್ಯೂಲ್ಡ್ ಆಪರೇಟರ್ ಆಗಿರುವ ರೆಡ್‌ಬರ್ಡ್, ಅಪಘಾತಕ್ಕೀಡಾದ ವಿಮಾನ ಸೇರಿದಂತೆ ಆರು ವಿಮಾನಗಳನ್ನು ಹೊಂದಿದೆ.

ರಾಂಚಿಯ ದೇವ್‌ಕಮಲ್ ಆಸ್ಪತ್ರೆಯ ರೋಗಿಯೊಬ್ಬರು ಏರ್ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದ್ದರು ಎಂದು ಆಸ್ಪತ್ರೆಯ ಸಿಇಒ ಅನಂತ್ ಸಿನ್ಹಾ ಅವರನ್ನು ಉಲ್ಲೇಖಿಸಿ ಪಿಟಿಐ ವರದಿ ತಿಳಿಸಿದೆ.

“ಲತೇಹರ್ ಜಿಲ್ಲೆಯ ಚಂದ್ವಾ ನಿವಾಸಿ ಸಂಜಯ್ ಕುಮಾರ್ (41) ಎಂಬ ರೋಗಿಯನ್ನು ಫೆಬ್ರವರಿ 16ರಂದು ಶೇ. 65ರಷ್ಟು ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ಕರೆತರಲಾಗಿತ್ತು. ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಕುಟುಂಬ ಸದಸ್ಯರು ಉತ್ತಮ ಚಿಕಿತ್ಸೆಗಾಗಿ ಅವರನ್ನು ದೆಹಲಿಗೆ ಕರೆದೊಯ್ಯಲು ನಿರ್ಧರಿಸಿದ್ದರು” ಎಂದು ಸಿನ್ಹಾ ವಿವರಿಸಿದ್ದಾರೆ.

ದೆಹಲಿಗೆ ತೆರಳುವ ಸಲುವಾಗಿ ಸಂಜೆ 4.30ರ ಸುಮಾರಿಗೆ ಸಂಜಯ್ ಕುಮಾರ್ ಅವರನ್ನು ಕರೆದುಕೊಂಡು ಆಸ್ಪತ್ರೆಯಿಂದ ಹೊರಟ್ಟಿದ್ದರು ಎಂದು ಮಾಹಿತಿ ನೀಡಿದ್ದಾರೆ.

ವಿಮಾನವು ಟೇಕ್ ಆಫ್ ಆದ ಸುಮಾರು 20 ನಿಮಿಷಗಳ ನಂತರ ವಾಯು ಸಂಚಾರ ನಿಯಂತ್ರಣ ಕೇಂದ್ರದೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿತ್ತು ಎಂದು ರಾಂಚಿ ವಿಮಾನ ನಿಲ್ದಾಣದ ನಿರ್ದೇಶಕ ವಿನೋದ್ ಕುಮಾರ್ ತಿಳಿಸಿದ್ದಾರೆ.

“ಅಪಘಾತಕ್ಕೆ ಪ್ರತಿಕೂಲ ಹವಾಮಾನ ಕಾರಣವಾಗಿರಬಹುದು, ಆದರೆ ತನಿಖೆಯ ನಂತರವೇ ನಿಜವಾದ ಕಾರಣ ತಿಳಿದುಬರಲಿದೆ” ಎಂದು ಅವರು ಹೇಳಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement