Connect with us

ಇತರ

ಆನ್‌ಲೈನ್ ಖಾತೆ ಬದಲಾವಣೆ ಸುಲಭ: ಸ್ವಯಂ ಚಾಲಿತ ಮ್ಯುಟೇಷನ್‌ಗೆ ಚಾಲನೆ: ಸಚಿವ ಕೃಷ್ಣ ಬೈರೇಗೌಡ ಹೇಳಿದ್ದೇನು

Published

on

ಕರ್ನಾಟಕ ಸರ್ಕಾರವು ಆಸ್ತಿದಾರರಿಗೆ ಮತ್ತೊಂದು ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದೆ. ಸ್ವಯಂ ಚಾಲಿತ ಮ್ಯುಟೇಷನ್‌ಗೆ ಚಾಲನೆ ನೀಡುವ ಮೂಲಕ ಜನಪರ ಮತ್ತು ಸರಳ ಆಡಳಿತವನ್ನು ಸಾರ್ವಜನಿಕರ ಮನೆಬಾಗಿಲಿಗೇ ತಲುಪಿಸಬೇಕು ಎಂಬ ಸರ್ಕಾರದ ಉದ್ದೇಶ ಈಡೇರಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದ್ದಾರೆ.

ಮಂಗಳವಾರ ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಯಂ ಚಾಲಿತ ಮ್ಯುಟೇಶನ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಕಂದಾಯ ಇಲಾಖೆಯನ್ನು ಜನಪರಗೊಳಿಸಬೇಕು, ಆಡಳಿತದಲ್ಲಿ ಸುಧಾರಣೆ ಮತ್ತು ಸರಳೀಕರಣಗೊಳಿಸಬೇಕು ಎಂಬ ನಿಟ್ಟಿನಲ್ಲಿ ಕಳೆದ ಎರಡೂವರೆ ವರ್ಷದಿಂದ ಹೆಜ್ಜೆ ಹೆಜ್ಜೆಗೂ ಹಲವಾರು ಬದಲಾವಣೆಗಳನ್ನು ತರಲಾಗುತ್ತಿದೆ. ಆ ಬದಲಾವಣಾ ಪರ್ವದ ಮತ್ತೊಂದು ಮಹತ್ವದ ಹೆಜ್ಜೆಯೇ ಸ್ವಯಂ ಚಾಲಿತ ಮ್ಯುಟೇಶನ್‌ಗೆ ಚಾಲನೆ ಆಗಿದೆ. ಈ ಸೇವೆಯನ್ನು ಒಂದು ತಿಂಗಳಿನಿಂದ ಮಂಡ್ಯದಲ್ಲಿ ಅನುಷ್ಠಾನಗೊಳಿಸಿ ಸಾಧಕ ಪರಿಶೀಲಿಸಿ ಫೆಬ್ರವರಿ 24ರಿಂದ ಶೇ.98 ರಷ್ಟು ಎಲ್ಲಾ ಖಾತೆ ಬದಲಾವಣೆಗಳೂ ಸ್ವಯಂ ಚಾಲಿತಗೊಳ್ಳಲು ಮುನ್ನುಡಿ ಬರೆದಿದ್ದೇವೆ ಎಂದಿದ್ದಾರೆ.

ಖಾತೆ ಬದಲಾವಣೆ ಕಂದಾಯ ಇಲಾಖೆಯ ಮೂಲ ಜವಾಬ್ದಾರಿಗಳಲ್ಲೊಂದು. ಈ ಹಿಂದೆ ಶಾನುಬೋಗರು ಮಾಡುತ್ತಿದ್ದ ಕೆಲಸವನ್ನು ಈಗ ಭೂಮಿ ತಂತ್ರಾಂಶದ ಮೂಲಕ ಮಾಡಲಾಗುತ್ತಿದೆ. ಆದರೆ, ಇದಕ್ಕಾಗಿ ಜನ ಸಾಮಾನ್ಯರು ದಿನನಿತ್ಯ ಸರ್ಕಾರಿ ಕಚೇರಿಗಳಿಗೆ ಅಲೆಯುವುದು ಸಾಮಾನ್ಯವಾಗಿತ್ತು. ಕೆಲ ಅಧಿಕಾರಿಗಳ ಸ್ವೇಚ್ಛಾಚಾರದಿಂದ, ಅವ್ಯವಸ್ಥೆ ಮತ್ತು ಮಧ್ಯವರ್ತಿಗಳ ಕಿರುಕುಳದಿಂದ ಸಾರ್ವಜನಿಕರು ಶೋಷಣೆಗೆ ಒಳಗಾಗುತ್ತಿದ್ದರು. ಇದರಿಂದ ಸರ್ಕಾರಕ್ಕೂ ಕೆಟ್ಟ ಹೆಸರು ಉಂಟಾಗುತ್ತಿತ್ತು. ಪ್ರಸ್ತುತ ಸ್ವಯಂ ಚಾಲಿತ ಮ್ಯುಟೇಷನ್ಗೆ ಚಾಲನೆ ನೀಡಲಾಗಿದ್ದು, ಈ ಎಲ್ಲಾ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ನೀಡಿದಂತಾಗಿದೆ. ಇನ್ನೂ ಜನ ಸಾಮಾನ್ಯರು ಖಾತೆ ಬದಲಾವಣೆಗಾಗಿ ಸರ್ಕಾರಿ ಕಚೇರಿಗೆ ಅಲೆಯುವಂತಿಲ್ಲ. ಮನೆಯಲ್ಲೇ ಕುಳಿತು ಮೋಬೈಲ್ ಮೂಲಕ ಆನ್‌ಲೈನ್‌ನಲ್ಲೇ ತಮ್ಮ ಖಾತೆ ಬದಲಾವಣೆ ಕೆಲಸಗಳನ್ನು ನಿರ್ವಹಿಸಬಹುದು ಎಂದು ಹೇಳಿದ್ದಾರೆ.

ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ಯಾವ್ಯಾವ ಸೇವೆಗಳಿಗೆ ನೊಟೀಸ್ ನೀಡುವ ಅಗತ್ಯ ಇರುವುದಿಲ್ಲವೋ ಅವುಗಳನ್ನು 2024ರ ಏಪ್ರಿಲ್ ತಿಂಗಳಿನಿಂದಲೇ ಸ್ವಯಂ ಚಾಲಿತವಾಗಿ ವರ್ಗಾವಣೆಯಾಗುವಂತೆ ಮಾಡಲಾಗಿತ್ತು. ಹಕ್ಕು-ಬಾಧ್ಯತೆ ದಾಖಲಾತಿ, ಋಣ ತೆಗೆಯುವುದು, ಭೂ ಪರಿವರ್ತನೆ, ಪೋಡಿ, ಭೂಸ್ವಾಧೀನ, ನ್ಯಾಯಾಲಯ ಆದೇಶ, ನ್ಯಾಯಾಲಯ ತಡೆಯಾಜ್ಞೆ, ಸರ್ಕಾರದ ಆದೇಶ, ಸಾಗುವಳಿ ಚೀಟಿ ನಮೂದು, ಪಹಣಿ ವರ್ಗಾವಣೆ ಸೇವೆಗಳನ್ನು ಈಗಾಗಲೇ ಸ್ವಯಂ ಚಾಲಿತಗೊಳಿಸಲಾಗಿತ್ತು. ಇಂತಹ ಪ್ರಕರಣಗಳು ತಿಂಗಳಿಗೆ ಸರಾಸರಿ 2.47 ಲಕ್ಷ ಖಾತೆ ಬದಲಾವಣೆಗಾಗಿ ಬರುತ್ತವೆ. ಈ ಪೈಕಿ 1.75 ಲಕ್ಷ ಖಾತೆ ಬದಲಾವಣೆಯನ್ನು ಈಗಾಗಲೇ ಸ್ಚಯಂ ಚಾಲಿತವಾಗಿ ನೆರವೇರಿಸಲಾಗಿದೆ. ಅಂದರೆ ಶೇ.65 ರಿಂದ ಶೇ.71 ರಷ್ಟು ಖಾತೆ ಬದಲಾವಣೆಯನ್ನು ಸ್ವಯಂ ಚಾಲಿತಗೊಳಿಸಲಾಗಿದೆ ಎಂದು ವಿವರಿಸಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement