Connect with us

ಇತರ

ಬಿಜೆಪಿ ವಿರುದ್ಧ ಗುಡುಗಿದ ಮಹಿಳಾ ಕಾಂಗ್ರೆಸ್ ಹಾಲಿ ಶಾಸಕರ ಮತ್ತು ಮಾಜಿ ಶಾಸಕರ ಅಭಿವೃದ್ಧಿ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ದ

Published

on

ಪುತ್ತೂರು: ಪುತ್ತೂರು ಶಾಸಕರ ವಿರುದ್ಧ ಒಂದೇ ಒಂದು ತಪ್ಪನ್ನೂ ಹುಡುಕಲು ವಿಫಲವಾದ ಬಿಜೆಪಿ ಇದೀಗ ಮಹಿಳಾ ಮೋರ್ಚಾವನ್ನು ಮುಂದಿಟ್ಟು ವ್ಯರ್ಥ ಪ್ರತಿಭಟನೆ ನಡೆಸುತ್ತಿದೆ ಎಂದು ದಕ್ಷಿಣ ಕನ್ನಡ ಗ್ರಾಮಾಂತರ ಜಿಲ್ಲಾ ಮಹಿಳಾ ಕಾಂಗ್ರೆಸ್ ಆರೋಪಿಸಿದೆ.

ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಉಷಾ ಅಂಚನ್ ಹಾಗೂ ಉಸ್ತುವಾರಿ ಅನಿತಾ ಹೇಮನಾಥ್ ಶೆಟ್ಟಿ ಮಾತನಾಡಿ, ಶಾಸಕರ ವಿರುದ್ಧ ಭಾಷಣ ಮಾಡಲು ಪುತ್ತೂರಿನಲ್ಲಿ ಮಹಿಳಾ ನಾಯಕಿಯರು ಸಿಗದ ಕಾರಣ ಮಂಗಳೂರಿನಿಂದ ಕರೆತಂದು ಮಾತನಾಡಿಸಲಾಗಿದೆ ಎಂದು ಟೀಕಿಸಿದರು. ಜಿಲ್ಲಾ ಮಟ್ಟದಲ್ಲಿ ಮಹಿಳಾ ಮೋರ್ಚಾ ಪ್ರತಿಭಟನೆ ನಡೆಸಿದರೆ, ಶಾಸಕರ ಪರ ಸಹಸ್ರಾರು ಮಹಿಳೆಯರನ್ನು ಸೇರಿಸಿ ದೊಡ್ಡ ಮಟ್ಟದ ಸಮಾವೇಶ ನಡೆಸಲು ನಾವು ಸಿದ್ಧರಿದ್ದೇವೆ ಎಂದು ಎಚ್ಚರಿಸಿದರು.

ಬಿಜೆಪಿ ಪ್ರತಿಭಟನೆಯಲ್ಲಿ ಮಾತನಾಡಿದವರು ಎಲ್ಲರೂ ಮಂಗಳೂರಿನವರೇ ಆಗಿದ್ದು, ಪುತ್ತೂರಿನ ಮಹಿಳಾ ನಾಯಕಿಯರ ಕೊರತೆ ಬಿಜೆಪಿಗೆ ಎದುರಾಗಿದೆ ಎಂದು ಉಷಾ ಅಂಚನ್ ಹೇಳಿದರು. ಶಾಸಕರ ಮನೆ ಮುಂದೆ ಪ್ರತಿಭಟನೆ ನಡೆಸಿದರೆ ನಾವು ಸುಮ್ಮನಿರುವುದಿಲ್ಲ. ಮಹಿಳಾ ಕಾಂಗ್ರೆಸ್ ಗಟ್ಟಿಯಾಗಿದ್ದು, ಅಗತ್ಯವಿದ್ದರೆ ಭಾರಿ ಬೆಂಬಲ ಸಮಾವೇಶ ನಡೆಸಲಾಗುವುದು ಎಂದು ಹೇಳಿದರು.
ಸಂಜೀವ ಮಠಂದೂರು ಅವರನ್ನು ನೋಡಿ ಕಲಿಯಲಿ ಎಂಬ ಬಿಜೆಪಿ ಮಹಿಳಾ ಮೋರ್ಚಾ ಹೇಳಿಕೆ ಹಾಸ್ಯಾಸ್ಪದ ಎಂದು ಪ್ರತಿಕ್ರಿಯಿಸಿದ ಅವರು, ಅಶೋಕ್ ರೈ ಮತ್ತು ಸಂಜೀವ ಮಠಂದೂರು ಅವರ ಸಾಧನೆಗಳ ಬಗ್ಗೆ ಬಹಿರಂಗ ವೇದಿಕೆಯಲ್ಲಿ ಅಂಕಿ-ಅಂಶ ಸಮೇತ ಚರ್ಚೆಗೆ ನಾವು ಸಿದ್ಧ ಎಂದು ಸವಾಲು ಹಾಕಿದರು.

ಮಹಿಳಾ ಕಾಲೇಜಿನ ಪ್ರಾಂಶುಪಾಲರು ಕಾನೂನು ಮೀರಿ ವರ್ತಿಸಿದ್ದರಿಂದ ಅಮಾನತುಗೊಂಡಿದ್ದಾರೆ. ಇದು ದಬ್ಬಾಳಿಕೆ ಅಲ್ಲ, ಇಲಾಖೆ ನಿಯಮಾನುಸಾರ ನಡೆದ ಕ್ರಮ ಎಂದು ಸ್ಪಷ್ಟಪಡಿಸಿದರು. ಮಹಿಳೆ ಎಂಬ ಕಾರಣಕ್ಕೆ ಅಮಾನತು ಮಾಡಲಾಗಿಲ್ಲ; ತಪ್ಪು ಮಾಡಿದ ಅಧಿಕಾರಿಯ ವಿರುದ್ಧ ಕ್ರಮ ಜರುಗಿದೆ ಎಂದರು.
ಅನಿತಾ ಹೇಮನಾಥ್ ಶೆಟ್ಟಿ ಮಾತನಾಡಿ, ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರನ್ನು ರಸ್ತೆಯಲ್ಲಿ ಕುಳ್ಳಿರಿಸಿ ಪ್ರತಿಭಟನೆಗೆ ಬಿಜೆಪಿ ಪ್ರೋತ್ಸಾಹ ನೀಡಿದೆ ಎಂದು ಆರೋಪಿಸಿದರು. ಧೂಳಿನ ಸಮಸ್ಯೆ ಬಗ್ಗೆ ಪ್ರಾಂಶುಪಾಲರು ಶಾಸಕರಿಗೆ ಅಥವಾ ಇಲಾಖೆಗೆ ಮಾಹಿತಿ ನೀಡದೆ ನೇರವಾಗಿ ವಿದ್ಯಾರ್ಥಿನಿಯರನ್ನು ಬೀದಿಗಿಳಿಸಿದರು. ಶಾಸಕರು ಪ್ರಶ್ನಿಸಿದಾಗಲೂ ಸಮರ್ಪಕ ಉತ್ತರ ನೀಡಲಿಲ್ಲ. ಸಮಸ್ಯೆ ತಿಳಿಸಿದ್ದರೂ ಕ್ರಮ ಕೈಗೊಳ್ಳದಿದ್ದರೆ ಶಾಸಕರನ್ನು ದೂರಬಹುದಿತ್ತು. ಆದರೆ ಕಾನೂನುಬಾಹಿರವಾಗಿ ವರ್ತಿಸಿದ ಕಾರಣ ಅಮಾನತು ಅನಿವಾರ್ಯವಾಯಿತು ಎಂದು ಹೇಳಿದರು.
ಮಹಿಳಾ ಕಾಂಗ್ರೆಸ್ ಕಾರ್ಯಾಧ್ಯಕ್ಷೆ ಚಂದ್ರಪ್ರಭಾ ಗೌಡ ಮಾತನಾಡಿ, “ಟಾರ್ಚ್ ಹಿಡಿದು ಹುಡುಕಿದರೂ ಶಾಸಕರ ವಿರುದ್ಧ ತಪ್ಪು ಸಿಗದೇ ಈಗ ಬಿಜೆಪಿ ವ್ಯರ್ಥ ಆರೋಪ ಮಾಡುತ್ತಿದೆ” ಎಂದರು. ಇದೇ ವೇಳೆ ಬಿಜೆಪಿ ಮುಖಂಡನ ಪುತ್ರನೊಬ್ಬ ಯುವತಿಗೆ ವಂಚನೆ ಮಾಡಿದಾಗ ಮಹಿಳೆಯರ ಪರ ನಿಂತಿರಲಿಲ್ಲವೇ ಎಂದು ಪ್ರಶ್ನಿಸಿದರು. ಮಾಜಿ ಶಾಸಕರ ಅವಧಿಯಲ್ಲಿನ ಘಟನೆಗಳನ್ನು ಉಲ್ಲೇಖಿಸಿ, ಅಶೋಕ್ ರೈ ಅವರಿಂದ ಕಲಿಯುವಂಥದ್ದು ಇಲ್ಲ ಎಂಬ ಹೇಳಿಕೆ ಅಸಂಗತ ಎಂದರು.

ತಪ್ಪು ಮಾಡಿದ ಅಧಿಕಾರಿಯ ವಿರುದ್ಧ ಇಲಾಖಾ ನಿಯಮಾವಳಿ ಪ್ರಕಾರ ಕ್ರಮ ಜರುಗಿದೆ. ಶಾಸಕರು ಮಹಿಳೆಯರ ಪರವಾಗಿದ್ದಾರೆ ಎಂಬುದಕ್ಕೆ ಅವರ ಅಭಿವೃದ್ಧಿ ಕಾರ್ಯಗಳೇ ಸಾಕ್ಷಿ ಎಂದು ಮುಖಂಡರು ಹೇಳಿದರು. ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿದಿದ್ದನ್ನು ನೆನಪಿಸಿಕೊಳ್ಳಬೇಕು; ಅಶೋಕ್ ರೈ ಶಾಸಕರಾಗಿದ್ದು ಪುತ್ತೂರಿನ ಜನರ ವಿಶ್ವಾಸದಿಂದ ಎಂದು ಹೇಳಿದರು.
12 ವರ್ಷಗಳ ಕಾಲ ಹಳೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸಿದ್ದ ಮಹಿಳಾ ಕಾಲೇಜಿಗೆ ಇದೀಗ ಹೊಸ ಕಟ್ಟಡ ನಿರ್ಮಾಣವಾಗುತ್ತಿದ್ದು, ಇನ್ನೂ ಒಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ನಗರಸಭೆ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡ್, ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅನಿ ಮಿನೇಜಸ್, ಮುಖಂಡೆ ಜಯಂತಿ ಪಟ್ಟುಮೂಲೆ ಉಪಸ್ಥಿತರಿದ್ದರು

Continue Reading
Click to comment

Leave a Reply

Your email address will not be published. Required fields are marked *

Advertisement