Connect with us

ಇತರ

ಎಲ್​ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ, ಗ್ರಾಹಕರಿಗೆ ಬಿಗ್ ಶಾಕ್

Published

on

ಇರಾನ್-ಇಸ್ರೇಲ್ ಸಂಘರ್ಷದ ಪರಿಣಾಮ ಈಗ ನೇರವಾಗಿಯೇ ಭಾರತದ ಮೇಲೆ ತಟ್ಟತೊಡಗಿದೆ. ತೈಲ ಪೂರೈಕೆಯಲ್ಲಿ ವ್ಯತ್ಯಯ ಹಾಗೂ ಇತರ ಕಾರಣಗಳಿಂದ ದರ ಏರಿಕೆಯಾಗಿದೆ. ಗೃಹಬಳಕೆಯ ಮತ್ತು ವಾಣಿಜ್ಯ ಎಲ್​ಪಿಜಿ ಸಿಲಿಂಡರ್​​ಗಳ ಬೆಲೆ ಶುಕ್ರವಾರ ಮಧ್ಯಾರಾತ್ರಿಯಿಂದಲೇ ಹೆಚ್ಚಾಗಿವೆ. ದರ ಎಷ್ಟು ಹೆಚ್ಚಾಗಿದೆ ಎಂಬ ವಿವರ ಇಲ್ಲಿದೆ.

ನವದೆಹಲಿ, ಮಾರ್ಚ್ 7: ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಯುದ್ಧ ಸನ್ನಿವೇಶದ ನಡುವೆಯೇ ಭಾರತದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ (LPG Cylinder price Hike) ಹೆಚ್ಚಳವಾಗಿದೆ. 14.2 ಕಿಲೋಗ್ರಾಂ ತೂಕದ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 60 ರೂ. ಹೆಚ್ಚಿಸಲಾಗಿದ್ದು, ಇದರೊಂದಿಗೆ ದೆಹಲಿಯಲ್ಲಿ ಒಂದು ಸಿಲಿಂಡರ್ ಬೆಲೆ 853 ರೂ.ನಿಂದ 913ಕ್ಕೆ ಏರಿಕೆಯಾಗಿದೆ. ಅದೇ ರೀತಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನೂ 115 ರೂ. ಹೆಚ್ಚಿಸಲಾಗಿದೆ. ಈ ಹೆಚ್ಚಳದ ಬಳಿಕ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 1,883 ಆಗಿದ್ದು, ಮುಂಬೈನಲ್ಲಿ 1,835ಕ್ಕೆ ತಲುಪಿದೆ.ಈ ನಡುವೆ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್–ಇಸ್ರೇಲ್ ಸಂಘರ್ಷದ ಪರಿಣಾಮ ಜಾಗತಿಕ ಇಂಧನ ಮಾರುಕಟ್ಟೆಯ ಮೇಲೂ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ. ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ..

ಶುಕ್ರವಾರ ಕೇಂದ್ರ ಸರ್ಕಾರವು ಸಾರ್ವಜನಿಕ ಹಾಗೂ ಖಾಸಗಿ ವಲಯದ ಎಲ್‌ಪಿಜಿ ಸಂಸ್ಕರಣಾಗಾರಗಳಿಗೆ ಉತ್ಪಾದನೆಯನ್ನು ಹೆಚ್ಚಿಸುವಂತೆ ಸೂಚಿಸಿತ್ತು. ಈ ಮೂಲಕ ದೇಶದಲ್ಲಿ ಅನಿಲ ಪೂರೈಕೆ ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳಲಾಗಿದೆ.

ಆತಂಕ ಬೇಡ, ಇಂಧನ ದಾಸ್ತಾನು ಸಾಕಷ್ಟಿದೆ: ಕೇಂದ್ರ

ಏತನ್ಮಧ್ಯೆ, ಮಧ್ಯಪ್ರಾಚ್ಯದಲ್ಲಿ ಅಸ್ಥಿರತೆ ಇದ್ದರೂ ಭಾರತದಲ್ಲಿ ಇಂಧನ ಕೊರತೆ ಉಂಟಾಗುವುದಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ. ದೇಶದಲ್ಲಿ ಕಚ್ಚಾ ತೈಲ, ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಸೇರಿದಂತೆ ಸಾಕಷ್ಟು ಇಂಧನ ದಾಸ್ತಾನು ಲಭ್ಯವಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸರ್ಕಾರಿ ಮೂಲಗಳ ಪ್ರಕಾರ, ಭಾರತದಲ್ಲಿ ಇನ್ನೂ ಗಮನಾರ್ಹ ಪ್ರಮಾಣದ ಎಲ್​ಪಿಜಿ ಸಂಗ್ರಹವಿದ್ದು, ಅಗತ್ಯವಿದ್ದಲ್ಲಿ ತೈಲ ಕಂಪನಿಗಳು ಗಲ್ಫ್ ಪ್ರದೇಶದ ಹೊರಗಿನ ದೇಶಗಳಿಂದಲೂ ಆಮದು ಮಾಡಿಕೊಳ್ಳಲು ಸಿದ್ಧವಾಗಿವೆ.

ಕಚ್ಚಾ ತೈಲ ಪೂರೈಕೆಯಲ್ಲಿ ವ್ಯತ್ಯಯ

ಇಸ್ರೇಲ್-ಇರಾನ್ ಯುದ್ಧದ ಹಿನ್ನೆಲೆಯಲ್ಲಿ ಇರಾನ್ ಪ್ರಮುಖ ಸಮುದ್ರ ಮಾರ್ಗವಾದ ಹಾರ್ಮುಜ್ ಜಲಸಂಧಿಯ ಮೂಲಕ ಹಡಗು ಸಾಗಾಟಕ್ಕೆ ನಿರ್ಬಂಧ ಹೇರಿರುವುದರಿಂದ ಕಚ್ಚಾ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ಬೆಲೆ ಏರಿಕೆಯ ಆತಂಕ ಹೆಚ್ಚಾಗಿದೆ.

ಸಾಮಾನ್ಯವಾಗಿ ಪ್ರತಿ ತಿಂಗಳ ಒಂದನೇ ತಾರೀಖಿನಿಂದ ಎಲ್​ಪಿಜಿ ಸಿಲಿಂಡರ್​​ಗಳ ದರ ಪರಿಷ್ಕರಣೆ ಮಾಡಲಾಗುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳ ದರಕ್ಕೆ ಅನುಗುಣವಾಗಿ ದರ ಪರಿಷ್ಕರಣೆ ಮಾಡಲಾಗುತ್ತದೆ. ಅದರಂತೆ, ಮಾರ್ಚ್ 1 ರಂದು ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್ ದರವನ್ನು 110 ರೂ.ನಷ್ಟು ಏರಿಕೆ ಮಾಡಲಾಗಿತ್ತು.

Continue Reading
Click to comment

Leave a Reply

Your email address will not be published. Required fields are marked *

Advertisement