ರಾಮೋಜಿ ಫಿಲ್ಮ್ ಸಿಟಿ ಯಾರಿಗೆ ತಾನೇ ಗೊತ್ತಿಲ್ಲ.. ಈಟಿವಿ ನ್ಯೂಸ್ ನೆಟ್‌ವರ್ಕ್ ಬಗ್ಗೆ ಕೇಳದವರೇ ಇಲ್ಲ.. ಇಂಥಾ ದಿಗ್ಗಜ ಸಂಸ್ಥೆಗಳನ್ನ ಕಟ್ಟಿ ಬೆಳೆಸಿದ ಸಾಧಕ ರಾಮೋಜಿ ರಾವ್.. ರೈತ ಕುಟುಂಬದಲ್ಲಿ ಜನಿಸಿದ ಈ ಸಾಧಕ ಬೆಳೆದು ಬಂದ ಹಾದಿಯೇ ರೋಚಕ.. ಇದೀಗ ಕಾಲನ ಕರೆಗೆ ಓಗೊಟ್ಟಿರುವ ರಾಮೋಜಿ ರಾವ್, ತಮ್ಮ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ರಾಮೋಜಿ ಫಿಲ್ಮ್ ಸಿಟಿಯಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ಹೈಲೈಟ್ಸ್:
- ಮಾರ್ಗದರ್ಶಿ ಚಿಟ್ ಫಂಡ್, ಈನಾಡು ಪತ್ರಿಕೆ, ಈಟಿವಿ ನೆಟ್ ವರ್ಕ್ ಸಂಸ್ಥಾಪಕರಾದ ರಾಮೋಜಿ ರಾವ್
- ಪ್ರಿಯಾ ಫುಡ್ಸ್, ಕಲಾಂಜಲಿ, ಉಷಾಕಿರಣ್ ಮೂವೀಸ್ ಸಂಸ್ಥೆಗಳನ್ನೂ ಕಟ್ಟಿದ್ದರು
- ವಿಶ್ವ ವಿಖ್ಯಾತ ರಾಮೋಜಿ ಫಿಲ್ಮ್ ಸಿಟಿಯನ್ನು ಕಟ್ಟಿದ ಸಾಧಕ ರಾಮೋಜಿ ರಾವ್
ಹೈದರಾಬಾದ್: ಮಾಧ್ಯಮ ರಂಗದ ಭೀಷ್ಮ ಎಂದೇ ಖ್ಯಾತರಾಗಿದ್ದ ರಾಮೋಜಿ ಗ್ರೂಪ್ಸ್ ಸಂಸ್ಥಾಪಕ ರಾಮೋಜಿ ರಾವ್ ಅವರು ಇಹಲೋಕ ತ್ಯಜಿಸಿದ್ದಾರೆ. ಜೂನ್ 8 ಶನಿವಾರ ಬೆಳಗ್ಗೆ 4.50ಕ್ಕೆ ಅವರು ಕೊನೆಯುಸಿರೆಳೆದಿದ್ದಾರೆ. ರಾಮೋಜಿ ರಾವ್ ಅವರಿಗೆ 87 ವರ್ಷ ವಯಸ್ಸಾಗಿತ್ತು.ರಾಮೋಜಿ ರಾವ್ ಅವರನ್ನು ಜೂನ್ 5 ರಂದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೈದರಾಬಾದ್‌ನ ನಾನಾಕರಮ್‌ಗುಡದಲ್ಲಿ ಇರುವ ಸ್ಟಾರ್ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ವಯೋ ಸಹಜ ಆರೋಗ್ಯ ಸಮಸ್ಯೆಗಳ ಹಿನ್ನೆಲೆಯಲ್ಲಿ ಅವರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.