Published
6 months agoon
By
Akkare Newsತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ಮೆಥನಾಲ್ ಮಿಶ್ರಿತ ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ 33ಕ್ಕೇರಿದ್ದು, ಸಾವಿನ ಸಂಖ್ಯೆ ಹೆಚ್ಚಾಗಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ. ಆಸ್ಪತ್ರೆಗಳಲ್ಲಿ ಎಷ್ಟು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ಇನ್ನೂ ದೃಢಪಡಿಸಿಲ್ಲ.
ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಕಲ್ಲಕುರಿಚಿ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾ ಅಬಕಾರಿ ವಿಚಕ್ಷಣ ದಳದ ಎಲ್ಲರನ್ನೂ ಅಮಾನತುಗೊಳಿಸಿದ್ದಾರೆ.
ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿರುವ ಈ ದುರಂತದ ಕುರಿತು ಸಿಬಿ-ಸಿಐಡಿ (ಅಪರಾಧ ವಿಭಾಗದ ಅಪರಾಧ ತನಿಖಾ ಇಲಾಖೆ) ತನಿಖೆಗೆ ಸಿಎಂ ಆದೇಶಿಸಿದ್ದಾರೆ.
ಮಂಗಳವಾರ ಸಂಜೆ ಕಲ್ಲಕುರಿಚಿಯ ಕರುಣಾಪುರಂ ಕಾಲೋನಿಯ ಸುಮಾರು 70 ಪುರುಷರು, ಬಹುತೇಕ ದಿನಗೂಲಿ ಕಾರ್ಮಿಕರು ಪ್ಯಾಕೆಟ್‌ಗಳಲ್ಲಿ ಮಾರಾಟ ಮಾಡುತ್ತಿದ್ದ ನಕಲಿ ಮದ್ಯವನ್ನು ಸೇವಿಸಿದ್ದಾರೆ ಎಂದು ವರದಿಯಾಗಿದೆ. ಗಂಭೀರ ಸ್ಥಿತಿಯಲ್ಲಿರುವವರನ್ನು ಸೇಲಂ, ತಿರುವಣ್ಣಾಮಲೈ ಮತ್ತು ಪುದುಚೇರಿಯ ಆಸ್ಪತ್ರೆಗಳಿಗೆ ರವಾನಿಸಲಾಗಿದೆ.
ಅಕ್ರಮ ಮದ್ಯ ತಯಾರಿಕೆ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. “ಸುಮಾರು 200 ಲೀಟರ್ ನಕಲಿ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಲ್ಯಾಬ್ ವರದಿಯು ಮದ್ಯಕ್ಕೆ ಮೆಥನಾಲ್ ಬೆರೆಸಿರುವುದನ್ನು ದೃಢಪಡಿಸಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿರೋಧ ಪಕ್ಷದ ನಾಯಕ ಮತ್ತು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ಮತ್ತು ರಾಜ್ಯ ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಅವರು ವಿಧಾನಸಭೆ ಅಧಿವೇಶನ ಬಿಟ್ಟು ಕಲ್ಲಕುರಿಚಿಗೆ ತೆರಳಿ ಮೃತರ ಕುಟುಂಬಗಳನ್ನು ಭೇಟಿಯಾಗಿದ್ದಾರೆ.