Published
6 months agoon
By
Akkare News*ಶೇ.100 ಅಂಕದ ಜೊತೆಗೆ ವಿನಯತೆ ಪಡೆದುಕೊಳ್ಳಬೇಕು- ಎಡನೀರು ಶ್ರೀ
*ಗುಣಮಟ್ಟದ ಶಿಕ್ಷಣಕ್ಕೆ ಗ್ರಾಮೀಣ ಪ್ರದೇಶದಲ್ಲಿಯೂ ಬೇಡಿಕೆಯಿದೆ-ಅಶೋಕ್ ಕುಮಾರ್ ರೈ
*ಶಿಕ್ಷಣದ ಗುಣಮಟ್ಟದಲ್ಲಿ ಶೇ.93.40-ಅವಿನಾಶ್ ಕೊಡಂಕಿರಿ
ಪುತ್ತೂರು: ನರಿಮೊಗರು ಶ್ರೀ ಸರಸ್ವತಿ ವಿದ್ಯಾಮಂದಿರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶಿಶು ಮಂದಿರ ಹಾಗೂ ವಸತಿ ನಿಲಯದ ಉದ್ಘಾಟನೆಯು ಜೂ.22ರಂದು ನೆರವೇರಿತು.
ನೂತನ ವಿಭಾಗವನ್ನು ಉದ್ಘಾಟಿಸಿದ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಜಿಯವರು ಮಾತನಾಡಿ, ಊರಿನಲ್ಲಿ ದೇವಾಲಯ ಮತ್ತು ವಿದ್ಯಾಲಯ ಸಂಸ್ಕೃತಿ, ಸಂಸ್ಕಾರ ನೀಡುತ್ತಿದೆ. ದೇವಾಲಯದಲ್ಲಿ ಧಾರ್ಮಿಕ ಅರಿವು ಮೂಡಿಸಿದರೆ, ವಿದ್ಯಾಲಯಗಳು ಶೈಕ್ಷಣಿಕ ಜ್ಞಾನ ನೀಡುತ್ತದೆ. ದೇವಾಲಯ, ವಿದ್ಯಾಲಯದಲ್ಲಿ ಯಾವುದೇ ಬೇಧ- ಭಾವವಿಲ್ಲದೇ ಎಲ್ಲರೂ ಒಟ್ಟು ಸೇರುತ್ತಾರೆ. ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಪಡೆದು ಹೊರ ಬರುವಾಗ ಉತ್ತಮ ಪ್ರಜೆಯಾಗಿ ಬಾಳುವ ಮನಸ್ಸು ಮಾಡಬೇಕು. ವಿದ್ಯಾಲಯದಲ್ಲಿರುವಂತೆ ಸಮಾಜದಲ್ಲಿಯೂ ಇದ್ದಾಗ ಸ್ವಾಸ್ಥ್ಯ ಸಮಾಜ ನಿರ್ಮಾಣವಾಗಲಿದೆ. ಶೇ.100 ಅಂಕ ಗಳಿಕೆಯ ಜೊತೆಗೆ ವಿನಯತೆಯನ್ನು ಪಡೆದುಕೊಳ್ಳಬೇಕು ಎಂದು ಸ್ವಾಮಿಜಿಯವರು ಅವಿನಾಶ್ ಕೊಡೆಂಕಿರಿ ನೇತೃತ್ವದಲ್ಲಿ ವಿದ್ಯೆಯ ಜೊತೆಗೆ ಸಂಸ್ಕಾರ ನೀಡುವ ಕಾರ್ಯವಾಗುತ್ತಿದೆ ಎಂದು ಹೇಳಿದರು.
ತರಗತಿ ಕೊಠಡಿ ಮತ್ತು ವಸತಿ ನಿಲಯ ಉದ್ಘಾಟಿಸಿ, ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಗುಣಮಟ್ಟದ ಶಿಕ್ಷಣವು ಜೀವನದ ಮುಖ್ಯ ಅಂಗ. ಗುಣಮಟ್ಟದ ಶಿಕ್ಷಣ ಪಡೆದು ವಿದ್ಯಾರ್ಥಿಗಳ ಬಾಳು ನಕ್ಷತ್ರದಂತೆ ಹೊಳೆಯುತ್ತಿರಬೇಕು. ಆಗ ಮಕ್ಕಳು ಮನೆ ಹಾಗೂ ಮನೆ ಸಮಾಜದ ಬಂಗಾರವಾಗಲಿದ್ದಾರೆ. ಭಾಷಣ ಮಾಡುವುದರಿಂದ ವಿಶ್ವಗುರುವಾಗಲು ಸಾಧ್ಯವಿಲ್ಲ. ಅಧಿಕಾರಿಗಳು ಎಸಿ ರೂಂನಲ್ಲಿ ಕುಳಿತರೆ ಅಭಿವೃದ್ಧಿ ಸಾಧ್ಯವಿಲ್ಲ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಪೋಷಕರು ಮಕ್ಕಳಿಗೆ ಕಲಿಕೆಗೆ ಪೂರಕವಾದ ವಾತಾವರಣವನ್ನು ಮನೆಯಲ್ಲಿ ಕಲ್ಪಿಸಿಕೊಡಬೇಕು. ಸಮಾಜದಲ್ಲಿ ಸಂಸ್ಕಾರ ಆಚಾರ, ವಿಚಾರ ತಿಳಿಸುವ ಕಾರ್ಯವಾಗಬೇಕು. ಗುಣಮಟ್ಟದ ಶಿಕ್ಷಣ, ಇರುವಲ್ಲಿ ಬೇಡಿಕೆ ಇರುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಶಿಕ್ಷಣ ಜೊತೆಗೆ ವಸತಿ ನಿಲಯ ಪ್ರಾರಂಭಿಸಿರುವ ಸರಸ್ವತಿ ವಿದ್ಯಾ ಮಂದಿರವು ಬಹುದೊಡ್ಡ ಸಂಸ್ಥೆಯಾಗಿ ಬೆಳೆಯಲಿ ಎಂದರು. ಸಂಸ್ಥೆಯಲ್ಲಿ ಸಕಲ ಮೂಲಭೂತ ಸೌಲಭ್ಯಗಳೊಂದಿಗೆ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ.
ವಿದ್ಯಾರ್ಥಿಗಳು ಭಾರತೀಯತೆಯತ್ತ ಸಾಗಲು ಪೂರಕವಾದ ಶಿಕ್ಷಣ ನೀಡಲಾಗುತ್ತಿದ್ದು ಇಲ್ಲಿನ ವಿದ್ಯಾರ್ಥಿಗಳು ದೇಶದ ಜ್ಞಾನಿಗಳು, ಚಿಂತಕರು ಆಗಬೇಕೆಂಬುದು ನಮ್ಮ ಆಶಯವಾಗಿದೆ. 2011ರಲ್ಲಿ ಪ್ರಾರಂಭಗೊಂಡ ನಮ್ಮ ವಿದ್ಯಾಸಂಸ್ಥೆಯಲ್ಲಿ ಪ್ರಸ್ತುತ 400 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು ಸಂಸ್ಥೆಯ ಪ್ರಥಮ ಹಾಗೂ ದ್ವಿತೀಯ ಬ್ಯಾಚ್‌ನಲ್ಲಿ ಶೇ.100 ಅಂಕ ದಾಖಲಿಸಿದೆ. ವಸತಿ ನಿಲಯ ಹಾಗೂ ಶಿಶು ಮಂದಿರ ಉದ್ಘಾಟನೆಗೊಳ್ಳುವ ಮೂಲಕ ನಮ್ಮ 13 ವರ್ಷಗಳ ಕನಸು ಸಾಕಾರಕ್ಕೆ ಸಾಕ್ಷಿಭೂತರಾಗಿದ್ದೇವೆ ಎಂದರು.
ಶಿಶು ಮಂದಿರವನ್ನು ಉದ್ಘಾಟಿಸಿದ ಪ್ರಗತಿಪರ ಕೃಷಿಕ ವೆಂಕಟ್ರಮಣ ಭಟ್ ಮಾಡತ್ತಾರು, ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶಿವನಾಥ ರೈ ಮೇಗಿನಗುತ್ತು, ಕೊಡಂಕಿರಿ ಫೌಂಡೇಶನ್ ಟ್ರಸ್ಟಿ ವರದ ಕುಮಾರಿ ಮೀಯಾಳ, ಆಡಳಿತಾಧಿಕಾರಿ ಶುಭ ಅವಿನಾಶ್, ವಿದ್ಯಾರ್ಥಿ ನಾಯಕ ಯಶ್ವಿನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಸಕರಿಗೆ ಮನವಿ:
ಪುರುಷರಕಟ್ಟೆಯಿಂದ ಸರಸ್ವತಿ ವಿದ್ಯಾ ಮಂದಿರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಂಕ್ರಿಟೀಕರಣ ಪೂರ್ಣ ಗೊಳಿಸಿಕೊಡುವಂತೆ ಶಾಲಾ ಆಡಳಿತ ಮಂಡಳಿಯಿಂದ ಶಾಸಕರಿಗೆ ಮನವಿ ಸಲ್ಲಿಸಲಾಯಿತು.
ಕೊಡಂಕಿರಿ ಫೌಂಡೇಶನ್ ಅಧ್ಯಕ್ಷ ಅವಿನಾಶ್ ಕೊಡಂಕಿರಿ ಸ್ವಾಗತಿಸಿದರು. ಶಿಕ್ಷಕ ಪರೀಕ್ಷಿತ ತೋಳಾಡಿ ಕಾರ್ಯಕ್ರಮ ನಿರೂಪಿಸಿ, ಮುಖ್ಯಗುರು ದಿವ್ಯಾ ವಂದಿಸಿದರು. ಶಿಕ್ಷಕಿ ಹರ್ಷಿಣಿ ಅಭಿನಂದಿತರ ಪಟ್ಟಿ ವಾಚಿಸಿದರು.