Published
6 months agoon
By
Akkare Newsಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಹಾಗೂ ಇತರ ಮೂವರನ್ನು 12 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ.
ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿ ಮುಕ್ತಾಯಗೊಂಡ ಹಿನ್ನೆಲೆ, ಇಂದು (ಜೂನ್ 22) ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ವಿಚಾರಣೆ ವೇಳೆ ಪ್ರಕರಣ ತನಿಖಾಧಿಕಾರಿ ಎಸಿಪಿ ಎಲ್. ಚಂದನ್ ಕುಮಾರ್ ಪ್ರಕರಣದ ಸಿಡಿಯನ್ನು (ಕೇಸ್ ಡೈರಿ) ಮುಚ್ಚಿದ ಲಕೋಟೆಯಲ್ಲಿ ಹಾಗೂ ಮುಕ್ತ ರಿಮ್ಯಾಂಡ್ ಅರ್ಜಿಯ ದಸ್ತಾವೇಜನ್ನು ನ್ಯಾಯಾಧೀಶರಿಗೆ ಸಲ್ಲಿಸಿದರು.
ಅದನ್ನು ದಾಖಲಿಸಿಕೊಂಡ ನ್ಯಾಯಾಧೀಶರಾದ ವಿಜಯಕುಮಾರ್ ಎಸ್. ಜಾಟ್ಲಾ, 30 ನಿಮಿಷಗಳ ಕಾಲ ವಿಚಾರಣೆ ನಡಸಿ ಎಲ್ಲಾ ಆರೋಪಿಗಳನ್ನು ಜುಲೈ 4ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.ಪ್ರಕರಣ ಎರಡನೇ ಆರೋಪಿಯಾದ ನಟ ದರ್ಶನ್, 9 ಆರೋಪಿ ಡಿ. ಧನರಾಜ್, 10ನೇ ಆರೋಪಿ ವಿ.ವಿನಯ್ ಮತ್ತು 14ನೇ ಆರೋಪಿ ಪ್ರದೋಷ್ ಅನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಪೊಲೀಸರು ಎಲ್ಲಾ ಆರೋಪಿಗಳನ್ನು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದಿದ್ದಾರೆ.
ಪ್ರಕರಣದಲ್ಲಿ ಒಂದನೇ ಆರೋಪಿಯಾಗಿರುವ ಪವಿತ್ರಾ ಗೌಡ ಸೇರಿ 12 ಆರೋಪಿಗಳನ್ನು ನ್ಯಾಯಾಲಯ ಗುರುವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಅವರೆಲ್ಲರನ್ನು ಈಗಾಗಲೇ ಪರಪ್ಪನ ಅಗ್ರಹಾರದಲ್ಲಿ ಇರಿಸಲಾಗಿದೆ.