Published
6 months agoon
By
Akkare Newsನವದೆಹಲಿ : ಹದಿನೆಂಟನೇ ಲೋಕಸಭೆಯ ಮೊದಲ ಅಧಿವೇಶನ ಜೂನ್ 24 ರಂದು ಆರಂಭಗೊಳ್ಳಲಿದೆ. ಜುಲೈ 3 ರ ತನಕ ಅಧಿವೇಶನ ನಡೆಯಲಿದ್ದು, ಆರಂಭದ ಎರಡು ದಿನಗಳು ಪ್ರೋಟೆಮ್ ಸ್ಪೀಕರ್ ನೂತನ ಸಂಸದರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.
ಜೂನ್ 26 ರಂದು ಲೋಕಸಭೆಯ ನೂತನ ಸ್ಪೀಕರ್ ಆಯ್ಕೆ ನಡೆಯಲಿದೆ. ಜೂನ್ 27 ರಂದು ರಾಜ್ಯಸಭೆಯಲ್ಲಿ ಕಲಾಪ ಆರಂಭವಾಗಲಿದ್ದು, ರಾಷ್ಟ್ರಪತಿಗಳು ಭಾಷಣ ಮಾಡಲಿದ್ದಾರೆ. ಜೂನ್ 28 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂಸತ್‌ನಲ್ಲಿ ತನ್ನ ಸಂಪುಟ ಸಚಿವರುಗಳ ಪರಿಚಯವನ್ನು ಮಾಡಿಸಲಿದ್ದಾರೆ. ಜೂನ್ 1 ರಿಂದ 3 ರ ವರೆಗೆ ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಕುರಿತಾಗಿ ಚರ್ಚೆಗಳು ನಡೆಯಲಿದೆ.
ಸ್ಪಷ್ಟ ಬಹುಮತ ಇಲ್ಲದೆ ಎನ್‌ಡಿಎ ನೇತೃತ್ವದ ಸರ್ಕಾರದಲ್ಲಿ ಸ್ಪೀಕರ್ ಆಯ್ಕೆಯ ವಿಚಾರವಾಗಿ ಒಂದಷ್ಟು ಗೊಂದಲಗಳು ಎದ್ದಿವೆ. ಬಿಜೆಪಿ ಮತ್ತೆ ಓಂ ಬಿರ್ಲಾ ಅವರನ್ನೇ ಸ್ಪೀಕರ್ ಆಗಿ ಮಾಡುವ ಉತ್ಸಾಹ ತೋರಿಸಿದ್ದು, ಇದಕ್ಕೆ ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಕೂಡಾ ಸಹಮತ ತೋರಿದ್ದಾರೆ. ಆದ್ರೆ, ಆಂಧ್ರಪ್ರದೇಶದ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಸ್ಪೀಕರ್ ಹುದ್ದೆಯನ್ನು ತನ್ನ ಪಕ್ಷಕ್ಕೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಡೆಪ್ಯುಟಿ ಸ್ಪೀಕರ್ ಹುದ್ದೆ ವಿರೋಧ ಪಕ್ಷಕ್ಕೆ :
2014 ಮತ್ತು 2019 ರಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದಿತ್ತಾದ್ರೂ, 2024 ರಲ್ಲಿ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಹತ್ತು ವರ್ಷ ವಿರೋಧ ಪಕ್ಷವೇ ಇಲ್ಲದ ಸಂಸತ್‌ನಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಪ್ರಮುಖ ವಿರೋಧ ಪಕ್ಷವಾಗಿ ಮೂಡಿ ಬಂದಿದೆ. ಹೀಗಾಗಿ ಡೆಪ್ಯುಟಿ ಸ್ಪೀಕರ್ ಹುದ್ದೆಯನ್ನು ವಿರೋಧ ಪಕ್ಷಕ್ಕೆ ಬಿಟ್ಟು ಕೊಡಬೇಕಾದ ಅನಿವಾರ್ಯತೆ ಎನ್ ಡಿ ಎಗೆ ಇದೆ.
2014 ರಲ್ಲಿ 44 ಸೀಟ್ ಪಡೆದುಕೊಂಡಿದ್ದ ಕಾಂಗ್ರೆಸ್, 2019ರಲ್ಲಿ 52 ಸ್ಥಾನಕ್ಕೆ ಏರಿಕೆ ಕಂಡಿತ್ತು. ಆದರೆ, ವಿರೋಧ ಪಕ್ಷದ ಸ್ಥಾನಮಾನಕ್ಕೆ ಬೇಕಾದ 54 ಸೀಟ್ ಇಲ್ಲದ ಕಾರಣ ಕಳೆದ ಹತ್ತು ವರ್ಷಗಳಲ್ಲಿ ವಿರೋಧ ಪಕ್ಷ ಇಲ್ಲದೆ ಮೋದಿ ಸರ್ಕಾರ ನಡೆಸಿದ್ದರು. ಆದರೆ, ಈ ಬಾರಿ 99 ಸೀಟ್ ಪಡೆದುಕೊಂಡ ಕಾಂಗ್ರೆಸ್ ಪಕ್ಷೇತರನ ಸೇರ್ಪಡೆಯೊಂದಿಗೆ ಸಂಖ್ಯಾ ಬಲ 100 ಅಂಕಿ ತಲುಪಿದೆ. ಹೀಗಾಗಿ ವಿರೋಧ ಪಕ್ಷದ ಸ್ಥಾನಮಾನದ ಜೊತೆಗೆ ಡೆಪ್ಯುಟಿ ಸ್ಪೀಕರ್ ಹುದ್ದೆಗೆ ಕಾಂಗ್ರೆಸ್ ಬಲವಾದ ಒತ್ತಡ ಹಾಕಲಿದೆ.
18 ನೇ ಲೋಕಸಭಾ ಚುನಾವಣೆಯಲ್ಲಿ ಇಬ್ಬರು ಅಭ್ಯರ್ಥಿಗಳು ಜೈಲಿನಲ್ಲಿ ಇದ್ದುಕೊಂಡೇ ಚುನಾವಣೆಯನ್ನು ಗೆದ್ದಿದ್ದಾರೆ. ಇವರೂ ಕೂಡಾ ಪೆರೋಲ್ ಮೇಲೆ ಬಿಡುಗಡೆಯಾಗಿ 24 ರಂದು ನಡೆಯುವ ಸಂಸದರ ಪ್ರಮಾಣ ವಚನದಲ್ಲಿ ಭಾಗವಹಿಸಲಿದ್ದಾರೆ. ಪಂಜಾಬ್‌ನ ಖಹೂರ್ ಸಾಹಿಬ್ ಕ್ಷೇತ್ರದ ಅಮೃತ್ ಪಾಲ್ ಸಿಂಗ್ , ಹಾಗೂ ಜಮ್ಮು ಕಾಶ್ಮೀರದ ಬಾರಾಮುಲ್ಲ ಕ್ಷೇತ್ರದ ರಶೀದ್ ಇಂಜೀನಿಯರ್ ಇಬ್ಬರೂ ಜೈಲಿನಲ್ಲಿದ್ದಾರೆ.