ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಗಿಗ್‌ ಕಾರ್ಮಿಕರ ಕಲ್ಯಾಣ ಮಂಡಳಿ : ಕರಡು ಮಸೂದೆ ಪ್ರಕಟಿಸಿದ ರಾಜ್ಯ ಸರ್ಕಾರ

Published

on

ಗಿಗ್‌ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ನೆರವು ಒದಗಿಸಲು ಪ್ರತ್ಯೇಕ ಗಿಗ್‌ ಕಾರ್ಮಿಕರ ಕಲ್ಯಾಣ ಮಂಡಳಿ ರಚಿಸಲು ಮುಂದಾಗಿರುವ ಕಾರ್ಮಿಕ ಇಲಾಖೆ, ಅದಕ್ಕೆ ಪೂರಕವಾಗಿ ಗಿಗ್‌ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆಯನ್ನು ರೂಪಿಸಿದೆ.

ಗಿಗ್‌ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆ–2024ರ ಕರಡನ್ನು ಕಾರ್ಮಿಕ ಇಲಾಖೆಯ ವೆಬ್‌ಸೈಟ್‌ನಲ್ಲಿ ಶನಿವಾರ ಪ್ರಕಟಿಸಿದ್ದು, ಸಲಹೆ ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಹತ್ತು ದಿನಗಳ ಕಾಲಾವಕಾಶ ನೀಡಲಾಗಿದೆ. ವಿಧಾನಮಂಡಲದ ಮುಂಗಾರು ಅಧಿವೇಶನದಲ್ಲಿ ಮಸೂದೆಗೆ ಅಂಗೀಕಾರ ಪಡೆಯುವ ಸಾಧ್ಯತೆ ಇದೆ.

ವಿಧಾನಸಭೆ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣಕ್ಕಾಗಿ ಕಾನೂನು ಜಾರಿಗೊಳಿಸುವ ಭರವಸೆ ನೀಡಿತ್ತು. ಅದರಂತೆ ಕರಡು ಮಸೂದೆ ಪ್ರಕಟಿಸಿದೆ. ಕಳೆದ ವರ್ಷ ಜುಲೈನಲ್ಲಿ ರಾಜಸ್ಥಾನ ಇದೇ ರೀತಿಯ ಕಾನೂನನ್ನು ಅಂಗೀಕರಿಸಿತ್ತು. ಈ ಮೂಲಕ ಗಿಗ್ ಕಾರ್ಮಿಕರ ಕಲ್ಯಾಣಕ್ಕೆ ಕಾನೂನು ರೂಪಿಸಿದ ದೇಶದ ಮೊದಲ ರಾಜ್ಯ ಎನಿಸಿಕೊಂಡಿತ್ತು.

ಗಿಗ್‌ ಕಾರ್ಮಿಕರನ್ನು ಮಂಡಳಿಯಲ್ಲಿ ನೋಂದಾಯಿಸಿ ಅವರಿಗೆ ಪ್ರತ್ಯೇಕ ನಿಧಿ ಸ್ಥಾಪಿಸುವ ಪ್ರಸ್ತಾವ ಮಸೂದೆಯಲ್ಲಿದೆ. ಇದಕ್ಕಾಗಿ ಗಿಗ್‌ ಕಾರ್ಮಿಕರ ಕೆಲಸಕ್ಕೆ ವಿಧಿಸುವ ಶುಲ್ಕಕ್ಕೆ ಅನುಸಾರವಾಗಿ ಪ್ರತ್ಯೇಕ ಸೆಸ್‌ ಸಂಗ್ರಹಿಸುವ ಪ್ರಸ್ತಾವವೂ ಇದೆ. ನೋಂದಣಿ ಶುಲ್ಕವೂ ಸೇರಿದಂತೆ ಸಂಗ್ರಹವಾಗುವ ಎಲ್ಲ ಮೊತ್ತವನ್ನು ಗಿಗ್‌ ಕಾರ್ಮಿಕರ ಕಲ್ಯಾಣ ನಿಧಿಯಲ್ಲಿ ಬಳಸಲಾಗುತ್ತದೆ.

ಗಿಗ್‌ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಕಂಪನಿಯು ಎಲ್ಲಾ ಕಾರ್ಮಿಕರ ಮಾಹಿತಿಯನ್ನು ಮಂಡಳಿ ಜೊತೆ ಹಂಚಿಕೊಳ್ಳಬೇಕು. ಸೇವಾದಾರ ಕಂಪನಿಯೂ ಮಂಡಳಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕಾಗುತ್ತದೆ. ಈ ಮಸೂದೆಯ ಪ್ರಕಾರ, ನಿರ್ದಿಷ್ಟ ಕಾರಣಗಳಲ್ಲದೇ ಗಿಗ್‌ ಕಾರ್ಮಿಕರನ್ನು ಕೆಲಸದಿಂದ ಕೈಬಿಡುವಂತಿಲ್ಲ. ಅವರಿಗೆ ಪಾವತಿಸಬೇಕಾದ ಮೊತ್ತದಲ್ಲಿ ಕಡಿತ ಮಾಡುವಂತಿಲ್ಲ.

ಕಾರ್ಮಿಕರ ಕುಂದು ಕೊರತೆಗಳನ್ನು ಪರಿಹರಿಸುವ ಅಧಿಕಾರವೂ ಮಂಡಳಿಗೆ ಇರುತ್ತದೆ. ಕಾಯ್ದೆಯನ್ನು ಉಲ್ಲಂಘಿಸುವವರಿಗೆ 1 ಲಕ್ಷ ರೂಪಾಯಿವರೆಗೆ ದಂಡ ವಿಧಿಸುವುದಕ್ಕೂ ಅವಕಾಶ ಇರಲಿದೆ. ಗಿಗ್‌ ಕಾರ್ಮಿಕರ ಸೇವೆ ಬಳಸಿಕೊಳ್ಳುವ ಕಂಪನಿಗಳಲ್ಲಿ ತಪಾಸಣೆ ನಡೆಸುವ ಅಧಿಕಾರವನ್ನೂ ಮಸೂದೆಯು ಕಾರ್ಮಿಕ ಇಲಾಖೆಗೆ ನೀಡಲಿದೆ.

ಉದ್ಯೋಗದಾತ ಮತ್ತು ಉದ್ಯೋಗಿ ಎಂಬ ನಿಯಮಗಳ ಹೊರತಾಗಿರುವ ಕೆಲಸಗಳನ್ನು ಮಾಡಿ ಸಂಪಾದನೆ ಮಾಡುವ ವ್ಯಕ್ತಿಗಳನ್ನು ಗಿಗ್ ಕಾರ್ಮಿಕರು ಎನ್ನಲಾಗುತ್ತದೆ. ಜೊಮ್ಯಾಟೋ, ಸ್ವಿಗ್ಗಿಯಂತಹ ಡೆಲಿವರಿ ಬಾಯ್‌ಗಳು ಈ ಕಾರ್ಮಿಕರ ವರ್ಗಕ್ಕೆ ಸೇರುತ್ತಾರೆ.

ದೇಶದಲ್ಲಿ ಗಿಗ್ ಕಾರ್ಮಿಕರ ನಿಖರ ಸಂಖ್ಯೆಯ ಬಗ್ಗೆ ಯಾವುದೇ ಸರ್ಕಾರಿ ಮಾಹಿತಿ ಇಲ್ಲ. ಆದಾಗ್ಯೂ, ಕರ್ನಾಟಕದ ಬೆಂಗಳೂರಿನಲ್ಲಿ ಮಾತ್ರ ಸುಮಾರು ಎರಡು ಲಕ್ಷ ಗಿಗ್ ಕಾರ್ಮಿಕರು ಜೊಮ್ಯಾಟೋ, ಪೋರ್ಟರ್, ಸ್ವಿಗ್ಗಿ ಮತ್ತು ಡೆಂಝೋದಂತಹ ವಿವಿಧ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ದುಡಿಯುತ್ತಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ತಿಳಿಸಿದೆ.

 

 

Continue Reading
Click to comment

Leave a Reply

Your email address will not be published. Required fields are marked *

Advertisement