Published
1 year agoon
By
Akkare Newsದೆಹಲಿ- ಅಸ್ಸಾಂ ಕಾಮಾಖ್ಯ ನಾರ್ತ್ ಈಸ್ಟ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಬಿಹಾರದಲ್ಲಿ ಹಳಿತಪ್ಪಿದ ಪರಿಣಾಮ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 100 ಮಂದಿ ಗಾಯಗೊಂಡಿದ್ದಾರೆ.
ನಿನ್ನೆ ರಾತ್ರಿ 9.35ರ ಸುಮಾರಿಗೆ ಬಕ್ಸರ್ ಬಳಿಯ ರಘುನಾಥಪುರ ನಿಲ್ದಾಣದ ಸಮೀಪ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೆಹಲಿಯ ಆನಂದ್ ವಿಹಾರ್ ಟರ್ಮಿನಲ್‌ನಿಂದ ಹೊರಟ ರೈಲು ಅಸ್ಸಾಂನ ಗುವಾಹಟಿ ಬಳಿಯ ಕಾಮಾಖ್ಯಕ್ಕೆ ತೆರಳುತ್ತಿತ್ತು.
ರೈಲು ಸಂಖ್ಯೆ 12506ರಲ್ಲಿ ಹಲವು ಬೋಗಿಗಳು ರಾತ್ರಿ 9.35ರ ವೇಳೆಗೆ ದಾನಾಪುರ ವಿಭಾಗದ ರಘುನಾಥಪುರ ನಿಲ್ದಾಣ ಬಳಿ ಹಳಿತಪ್ಪಿವೆ ಎಂದು ಪೂರ್ವ ಕೇಂದ್ರ ರೈಲ್ವೆ ಪ್ರಧಾನ ವ್ಯವಸ್ಥಾಪಕ ತರುಣ್ ಪ್ರಕಾಶ್ ಹೇಳಿಕೆ ನೀಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಬಳಿಕ ದುರಂತದ ಕಾರಣದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.
ಘಟನೆಯ ಕುರಿತು ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ಮಾತನಾಡಿದ್ದು, ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಗಳ ತಂಡಗಳು ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ ಎಂದು ಹೇಳಿದ್ದಾರೆ. ಗಾಯಾಳುಗಳನ್ನು ಪಾಟ್ನಾದ ಏಮ್ಸ್‌ಗೆ ದಾಖಲಿಸಲಾಗಿದೆ.