Published
5 months agoon
By
Akkare Newsರಾಜಕೀಯ ಸೇಡು, ದ್ವೇಷದಿಂದ ಕೂಡಿದ ನಡೆಯನ್ನು ನಮ್ಮ ಸರ್ಕಾರ ತೀವ್ರವಾಗಿ ಖಂಡಿಸುತ್ತದೆ. ಇದನ್ನು ನಾವು ಪ್ರತಿಭಟಿಸುತ್ತೇವೆ. ಪ್ರಜಾಪ್ರಭುತ್ವಕ್ಕೆ ಮಾರಕವಾದ ನಡೆಯಿದು. ಪ್ರಜಾಪ್ರಭುತ್ವದಲ್ಲಿ ಯಾವುದೇ ತನಿಖೆಯನ್ನು ಕಾನೂನುಬಾಹಿರವಾಗಿ ಮಾಡುವಂತಿಲ್ಲ.
ಸಂಸತ್ತಿನಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ವಾಲ್ಮೀಕಿ ನಿಗಮದ ಬಗ್ಗೆ ಪ್ರಸ್ತಾಪಿಸಿದ್ದಾರೆ, ಆದರೆ ಅವರು ಹೇಳಿರುವುದು ಒನ್ ಸೈಡ್ ಸ್ಟೋರಿ. ನಮ್ಮ ಹಿರಿಯ ನಾಯಕರೊಂದಿಗೆ ಮಾತನಾಡಿದ್ದು ಇ.ಡಿ ಸಂಸ್ಥೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಬಗ್ಗೆ ನಮ್ಮ ಸಂಸದರು ಕೂಡ ಸಂಸತ್ತಿನಲ್ಲಿ ಪ್ರಸ್ತಾಪಿಸುತ್ತಾರೆ.
ನಾವು ಕಾನೂನಿನ ಪ್ರಕಾರ ಹೋರಾಟ ಮಾಡಲು ಸಿದ್ಧರಿದ್ದೇವೆ. ಇಡಿ, ಸಿಬಿಐ ಏನು ಮಾಡುತ್ತಾರೆ ಎಂದು ನಮಗೆ ತಿಳಿದಿಲ್ಲ. ಆದರೆ ಎಸ್.ಐ.ಟಿ ತನಿಖೆ ಮುಗಿದಿದೆ.
ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಯಾರೇ ತಪ್ಪು ಮಾಡಿದ್ದರೂ ಮುಲಾಜಿಗೆ ಒಳಗಾಗುವುದಿಲ್ಲ. ಯಾರನ್ನೂ ರಕ್ಷಣೆ ಮಾಡುವುದಿಲ್ಲ. ನಾವು ತಪ್ಪಿತಸ್ಥರಿಗೆ ಶಿಕ್ಷೆ ಕೊಟ್ಟೆ ಕೊಡುತ್ತೇವೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು.
ಸದನದಿಂದ ಹೊರಗೆ ಹೋರಾಟ ಮಾಡುವ ಬಗ್ಗೆ ಚರ್ಚಿಸಿ ತೀರ್ಮಾನ ಮಾಡಲಾಗುವುದು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮದಲ್ಲಿ ಮೂರು ತನಿಖಾ ಸಂಸ್ಥೆಗಳು ವಿಚಾರಣೆ ಮಾಡುತ್ತಿವೆ. ಎಸ್.ಐ.ಟಿ ಯನ್ನು 31-5.2024 ರಂದು ರಚಿಸಲಾಗಿದೆ. 3-6-2024 ರಂದು ಸಿಬಿಐ ಗೆ ಬ್ಯಾಂಕ್ ವತಿಯಿಂದ ದೂರು ನೀಡಲಾಗಿದೆ. ಅದರಲ್ಲಿ ಶುಚಿಸ್ಮಿತಾ ರಾವುಲ್, ದೀಪಾ ಹಾಗು ಕೃಷ್ಣಮೂರ್ತಿ ಇವರ ಮೇಲೆ ದೂರು ನೀಡಲಾಗಿದೆ. ಜಾರಿ ನಿರ್ದೇಶನಾಲಯ ಸ್ವಯಂ ಪ್ರೇರಣೆಯಿಂದ ಕೆಲಸ ಮಾಡುತ್ತಿದೆ. ಒಂದೇ ಹಗರಣದಲ್ಲಿ ಮೂರು ತನಿಖಾ ಸಂಸ್ಥೆಗಳು ವಿಚಾರಣೆ ಮಾಡುತ್ತಿರುವುದು ವಿಶೇಷ. ಈ ರೀತಿ ತನಿಖೆ ಮಾಡುವುದು ಈವರೆಗೆ ನನ್ನ ಅನುಭವಕ್ಕೆ ಬಂದಿರಲಿಲ್ಲ.
ನಾವು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ನಡೆದಿಲ್ಲ ಎಂದು ಹೇಳಿಲ್ಲ. ವಿರೋಧ ಪಕ್ಷದವರು ಪದೇ ಪದೇ 187.33 ಕೋಟಿ ರೂ.ಗಳ ದುರುಪಯೋಗವಾಗಿದೆ ಎಂದು ಆರೋಪಿಸಿದ್ದಾರೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಂ.ಜಿ ರಸ್ತೆ ಶಾಖೆಯಿಂದ ತೆಲಂಗಾಣಕ್ಕೆ ಹೋಗಿರುವುದು 89.63 ಕೋಟಿ ರೂ.ಗಳು. ಎಸ್. ಐ.ಟಿ ರಚನೆಯಾದ ಮೇಲೆ ತ್ವರಿತವಾಗಿ ತನಿಖೆ ಕೈಗೊಂಡಿದ್ದಾರೆ. ಈಗಾಗಲೇ 12 ಜನರನ್ನು ಬಂಧಿಸಿದ್ದು, ಬೇರೆ ಬೇರೆ ಜನರು ಹಂಚಿಕೊಂಡಿದ್ದ ಮೊತ್ತದಲ್ಲಿ 34 ಕೋಟಿ ರೂಪಾಯಿ ನಗದನ್ನು ಹಿಂಪಡೆದಿದ್ದಾರೆ. ಒಟ್ಟು 85.25 ಕೋಟಿ ಹಿಂಪಡೆದು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಅಕ್ರಮವಾಗಿರುವುದು 85.63 ಕೋಟಿಗಳು. ಎಸ್.ಐ.ಟಿ ಅವರು ಶೇ.95% ತನಿಖೆಯನ್ನು ಪೂರ್ಣಗೊಳಿಸಿದ್ದಾರೆ.
ಅಕ್ರಮವಾಗಲು ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ, ಉಪವ್ಯವಸ್ಥಾಪಕರು, ಕ್ರೆಡಿಟ್ ಅಧಿಕಾರಿಗಳು ಕಾರಣ ಎಂದು ಬ್ಯಾಂಕಿನಿಂದ ದೂರು ನೀಡಲಾಗಿದ್ದು ಸಿಬಿಐ ತನಿಖೆ ಮಾಡುತ್ತಿದೆ. ಅವರೇನು ಮಾಡಿದ್ದಾರೆಂದು ತಿಳಿದಿಲ್ಲ. ಇ.ಡಿ ಯವರು ಸ್ವಯಂ ಪ್ರೇರಿತವಾಗಿ ತನಿಖೆ ಪ್ರಾರಂಭ ಮಾಡಿದ್ದು, ನಾಗೇಂದ್ರ ಹಾಗೂ ದದ್ದಲ್ ಅವರ ಮನೆ ಮೇಲೆ ದಾಳಿ ಮಾಡಿದ್ದಾರೆ. ನಾಗೇಂದ್ರ ಅವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನದಲ್ಲಿಟ್ಟಿದ್ದಾರೆ. ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ,ಹೆಚ್ಚುವರಿ ನಿರ್ದೇಶಕ ಕಲ್ಲೇಶ್ ಎಂಬುವರು ಹೇಳಿಕೆಯನ್ನು ಕೊಟ್ಟಿದ್ದರೂ ಇವರೇ ಆದೇಶ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಹಾಗೂ ಇತರೆ ಸಚಿವರ ಹೆಸರನ್ನು ಬರೆದು ಕೊಡುವಂತೆ ಒತ್ತಾಯ ಮಾಡಿದ್ದಾರೆ.
ಬಜೆಟ್ ನಲ್ಲಿ ಒಮ್ಮೆ ಅನುಮೋದನೆಯಾದ ಮೇಲೆ ಅನುದಾನ ಕಾರ್ಯದರ್ಶಿಗಳಿಗೆ, ಅಲ್ಲಿಂದ ಅದನ್ನು ನಿರ್ದೇಶಕರಿಗೆ ಹಾಗೂ ನಿರ್ದೇಶಕರು ಅನುದಾನವನ್ನು ವ್ಯವಸ್ಥಾಪಕ ನಿರ್ದೇಶಕರಿಗೆ ಕೊಡುತ್ತಾರೆ. ಇದು ಪ್ರಕ್ರಿಯೆ.
ಜಾರಿ ನಿರ್ದೇನಾಲಯದವರು ಕಲ್ಲೇಶ್ ಅವರಿಗೆ ಹೆದರಿಸಿ, ಬೆದರಿಸಿ, ಜೀವ ಭಯ ಉಂಟು ಮಾಡಿ ಅನಗತ್ಯವಾಗಿ ನನ್ನ ಹೆಸರು ಹೇಳುವಂತೆ ಕಿರುಕುಳ ನೀಡಿದ್ದಾರೆ. ಪ್ರಕರಣದಲ್ಲಿ ಕಾನೂನಿನ ಪ್ರಕಾರ ನನ್ನ ಮೇಲೆ ಆರೋಪ ಬರುವಂತೆ ಮಾಡಲು ಒತ್ತಾಯಿಸಿದ್ದಾರೆ. ಕಲ್ಲೇಶ್ ದೂರು ನೀಡಿ ಪ್ರಕರಣ ದಾಖಲಾಗಿದೆ. ದೂರಿನಲ್ಲಿ ಏನೇನು ನಡೆಯಿತು ಎಂದು ಹೇಳಿದ್ದಾರೆ.
ಒಟ್ಟಾರೆಯಾಗಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಹೊರಟಿದೆ. ಅವರ ಉದ್ದೇಶ ನನ್ನ ಮತ್ತು ಸರ್ಕಾರದ ವರ್ಚಸ್ಸನ್ನು ಹಾಳು ಮಾಡಬೇಕು ಎನ್ನುವುದು.
ಆರ್ಥಿಕ ಇಲಾಖೆಯಾಗಲೀ, ನಾನಾಗಲೀ ಈ ಹಗರಣಕ್ಕೆ ಸಂಬಂಧಪಟ್ಟಿಲ್ಲ. ಹಗರಣ ಆಗಿದೆ ಎಂದು ತನಿಖೆ ಮಾಡಿಸುತ್ತಿದ್ದೇವೆ. ಮೃತ ಚಂದ್ರಶೇಖರ್ ಅವರ ಪತ್ನಿ ಕವಿತಾ ಅವರು ನೀಡಿರುವ ದೂರು, ಪದ್ಮನಾಭ ಅವರ ದೂರಿನನ್ವಯ ತನಿಖೆ ಸರಿಯಾದ ದಾರಿಯಲ್ಲಿ ಸಾಗಿದೆ.
ಆದರೆ ಬಿಜೆಪಿ ಅಧಿಕಾರದ ಅವಧಿಯಲ್ಲಿ ನಡೆದಿರುವ ಭೋವಿ ಅಭಿವೃದ್ಧಿ ನಿಗಮ, ದೇವರಾಜ ಅರಸ್ ಟ್ರಕ್ ಟರ್ಮಿನಲ್, ಎ.ಪಿ .ಎಂ.ಸಿ ಹಾಗೂ ಕೋವಿಡ್ ಹಗರಣಗಳಲ್ಲಿ ಇ.ಡಿ ಬರಲೇ ಇಲ್ಲ.
ಬಿಜೆಪಿ ಈ ಪ್ರಕರಣವನ್ನು ಸಿಬಿಐ ಗೆ ವಹಿಸಲು ಹೇಳುತ್ತಿದೆ. ಅವರು ವಿರೋಧಪಕ್ಷದಲ್ಲಿದ್ದಾಗ ಚೋರ್ ಬಚಾವ್ ಸಂಸ್ಥೆ ಎನ್ನುತ್ತಿದ್ದರು. ಅವರ ಸರ್ಕಾರ ಕೇಂದ್ರದಲ್ಲಿರುವುದರಿಂದ ಸಿಬಿಐ ಗೆ ವಹಿಸುವಂತೆ ಒತ್ತಾಯಿಸುತ್ತಿದ್ದಾರೆ . ನಾವು ಅನೇಕ ಪ್ರಕರಣಗಳನ್ನು ಸಿಬಿಐ ಗೆ ವಹಿಸಿದ್ದೇವೆ. ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕಿನ ಪ್ರಕರಣವನ್ನು ಸಿಬಿಐ ಗೆ ವಹಿಸಲಾಗಿದೆ. ಪರೇಶ್ ಮೆಹ್ತಾ, ಡಿ.ಕೆ. ರವಿ, ಗಣಪತಿ, ಒಂದಂಕಿ ಲಾಟರಿ ಪ್ರಕರಣಗಳನ್ನು ಸಿಬಿಐ ಗೆ ವಹಿಸಲಾಗಿದೆ. ಸರ್ಕಾರ ವಿವೇಚನೆಯನ್ನು ಆಧರಿಸಿ ಪ್ರಕರಣಗಳನ್ನು ವಹಿಸುತ್ತದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಗಸೂಚಿಗಳ ಪ್ರಕಾರ 25 ಕೋಟಿ ರೂಪಾಯಿಗಿಂತ ಹೆಚ್ಚಿನ ಮೊತ್ತವಿದ್ದರೆ ಸಿಬಿಐ ತನಿಖೆ ಮಾಡಬಹುದು. ತನಿಖೆಗೆ ನಮ್ಮ ತಕರಾರಿಲ್ಲ. ಆದರೆ ಕಾನೂನು ಬಾಹಿರವಾಗಿ ತನಿಖೆ ಮಾಡುವುದನ್ನು ಖಂಡಿಸುತ್ತೇವೆ. ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸವನ್ನು ಮಾಡುತ್ತಿದ್ದು ಇದನ್ನು ಖಂಡಿಸಲು ಸಾಂಕೇತಿಕವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ. ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿಯೂ ಇದನ್ನು ನಾವು ಪ್ರಸ್ತಾಪಿಸಲಿದ್ದೇವೆ.