Published
5 months agoon
By
Akkare Newsಉಪ್ಪಿನಂಗಡಿ: ಶಿರಾಡಿ ಘಾಟ್‌ನಲ್ಲಿ ಗುಡ್ಡ ಕುಸಿತವಾಗುವ ಸ್ಥಳದಲ್ಲಿ ಕೆಸರುಮಯ ನೀರು ಬರುತ್ತಲೇ ಇರುವುದರಿಂದ ಅದನ್ನು ತೆಗೆಸುತ್ತಲೇ ಒಂದೊಂದಾಗಿ ವಾಹನಗಳನ್ನು ಬಿಡುವ ವ್ಯವಸ್ಥೆ ಮಾಡಲಾಗಿದೆ. ಮಳೆಯ ಪ್ರಮಾಣ ಕಡಿಮೆಯಾಗುವರೆಗೆ ಈ ರೀತಿ ಮಾಡಬೇಕಾಗುತ್ತದೆ.
ಚಾರ್ಮಾಡಿ ಘಾಟಿಯಲ್ಲೂ ಘನ ವಾಹನಗಳ ಸಂಚಾರ ಮಾತ್ರ ನಿರ್ಬಂಧಿಸಲಾಗಿದ್ದು, ಉಳಿದ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದರೊಂದಿಗೆ ಸಂಪಾಜೆ ಘಾಟಿಯೂ ವಾಹನಗಳ ಸಂಚಾರಕ್ಕೆ ತೆರೆದಿರುವುದರಿಂದ ದ.ಕ. ಜಿಲ್ಲೆಯಿಂದ ಬೆಂಗಳೂರು ಕಡೆಗೆ ತೆರಳುವವರಿಗೆ ಯಾವುದೇ ಸಂಚಾರದ ಸಮಸ್ಯೆಯಿಲ್ಲ ಎಂದು ದ.ಕ. ಜಿಲ್ಲಾಧಿಕಾರಿ ಮುಲೈಮುಗಿಲನ್ ತಿಳಿಸಿದ್ದಾರೆ.
ಉಪ್ಪಿನಂಗಡಿಯಲ್ಲಿ ಪ್ರವಾಹಕ್ಕೆ ತುತ್ತಾದ ಪ್ರದೇಶಗಳಿಗೆ ಜು.31ರಂದು ಭೇಟಿ ನೀಡಿ ವೀಕ್ಷಣೆ ಮಾಡಿದ ಅವರು ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ನೇತ್ರಾವತಿ ಮತ್ತು ಕುಮಾರಧಾರ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದರಿಂದ ಬಂಟ್ವಾಳ ಮತ್ತು ಉಪ್ಪಿನಂಗಡಿ ಭಾಗದಲ್ಲಿ ಕೆಲವು ಕಡೆ ನೆರೆ ಬಂದಿದೆ. ಮನೆ ಜಲಾವೃತಗೊಂಡವರನ್ನು ಸ್ಥಳಾಂತರಿಸಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಗ್ರಾ.ಪಂ. ಹಾಗೂ ಪ್ರವಾಹ ರಕ್ಷಣೆಯಲ್ಲಿ ತೊಡಗುವ ಇಲಾಖೆಗಳು ಹೊಂದಾಣಿಯಿಂದ ಕೆಲಸ ಮಾಡುತ್ತಿರುವುದರಿಂದ ಯಾವುದೇ ಸಮಸ್ಯೆಯಾಗಿಲ್ಲ. ಅಪಾಯಗಳು ಸಂಭವಿಸದಂತೆ ಇಲಾಖೆಗಳು ಮುನ್ನೆಚ್ಚರಿಕೆ ವಹಿಸಿದ್ದು, ಎಲ್ಲಾ ತಂಡಗಳು ಸನ್ನದ್ಧ ಸ್ಥಿತಿಯಲ್ಲಿವೆ. ಗುಡ್ಡ ಕುಸಿತದಂತ ವಿಕೋಪಗಳು ಸಂಭವಿಸಿದರೆ ತಕ್ಷಣಕ್ಕೆ ನೆರವಾಗಲು ಎನ್‌ಡಿಆರ್‌ಎಫ್ ತಂಡದ ಸ್ಟೇಶನ್ ಅನ್ನು ಕೂಡಾ ಹತ್ತಿರದಲ್ಲೇ ಇಡಲಾಗಿದೆ ಎಂದರಲ್ಲದೇ, ಪ್ರಾಕೃತಿಕ ವಿಕೋಪಗಳು ಯಾವಾಗ ಸಂಭವಿಸುತ್ತವೆ ಎಂದು ಹೇಳಲಾಗದು.
ಆದ್ದರಿಂದ ಆದ್ದರಿಂದ ಯಾರೂ ಕೂಡಾ ಇಂತಹ ದುಸ್ಸಾಹಸಕ್ಕೆ ಮುಂದಾಗಬಾರದು. ನಮ್ಮ ಜಿಲ್ಲೆಗೆ ಬುದ್ದಿವಂತರ ಜಿಲ್ಲೆ ಎಂಬ ಹೆಸರಿದೆ. ಅದನ್ನು ಉಳಿಸುವ ಕೆಲಸ ಮಾಡೋಣ ಎಂದು ಯುವಕರನ್ನು ನಾನು ವಿನಂತಿಸುವುದಾಗಿ ತಿಳಿಸಿದರು.
ನದಿ ಬದಿ, ಕಾಲು ಸೇತುವೆ ಸೇರಿದಂತೆ ಅಪಾಯದ ಸ್ಥಳಗಳಲ್ಲಿ ಮೋಜು- ಮಸ್ತಿ ಮಾಡುವವರಿಗೆ, ಸೆಲ್ಪಿ ತೆಗೆದು ಸಂಭ್ರಮ ಪಡುವವರಿಗಾಗಿ ಈಗಾಗಲೇ ಆ ಸ್ಥಳಗಳಲ್ಲಿ ಮುನ್ನೆಚ್ಚರಿಕಾ ಫಲಕಗಳನ್ನು ಹಾಕಲಾಗಿದೆ. ಇದು ಕೇವಲ ಎಚ್ಚರಿಕೆ ಅಲ್ಲ. ಕಾನೂನಾತ್ಮಕ ಆದೇಶವಾಗಿದ್ದು, ಇದನ್ನು ಉಲ್ಲಂಘಿಸಿದವರ ಮೇಲೆ ಎಫ್‌ಐಆರ್ ದಾಖಲು ಮಾಡಲಾಗುತ್ತದೆ ಎಂದು ತಿಳಿಸಿದರು.ವಯನಾಡು ದುರಂತದಲ್ಲಿ ದ.ಕ. ಕನ್ನಡ ಜಿಲ್ಲೆಯವರು ಯಾರಾದರೂ ಸಿಕ್ಕಿ ಹಾಕಿಕೊಂಡಿದ್ದರ ಮಾಹಿತಿಯಿದ್ದರೆ ಜಿಲ್ಲಾಡಳಿತವನ್ನು ಸಂಪರ್ಕಿಸುವಂತೆ ಈಗಾಗಲೇ ಸೂಚಿಸಲಾಗಿದೆ. ಯಾರಿಗಾದರೂ ಮಾಹಿತಿಗಳಿದ್ದಲ್ಲಿ ಅದನ್ನು ಜಿಲ್ಲಾ ಕಂಟ್ರೋಲ್ ರೂಂಗೆ ತಿಳಿಸಬಹುದು. ಆಗ ಕೇರಳ ಸರಕಾರ ಹಾಗೂ ಅಲ್ಲಿನ ಜಿಲ್ಲಾಡಳಿತವನ್ನು ಸಂಪರ್ಕಿಸಿ ಅವರ ರಕ್ಷಣಾ ಕಾರ್ಯಕ್ಕೆ ಮುಂದಾಗಲಾಗುವುದು ಎಂದರು.
ಈ ಸಂದರ್ಭ ಪುತ್ತೂರು ತಹಶೀಲ್ದಾರ್ ಪುರಂದರ ಹೆಗ್ಡೆ, ಉಪ್ಪಿನಂಗಡಿ ಕಂದಾಯ ಹೋಬಳಿ ಉಪತಹಶೀಲ್ದಾರ್ ಚೆನ್ನಪ್ಪ ಗೌಡ, ಕಂದಾಯ ನಿರೀಕ್ಷಕ ಚಂದ್ರ ನಾಯ್ಕ, ಪುತ್ತೂರು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಬಿ.ಎಸ್., ಉಪ್ಪಿನಂಗಡಿ ಗ್ರಾ.ಪಂ. ಪಿಡಿಒ ವಿಗ್ರೇಡ್ ಲಾರೆನ್ಸ್ ರೊಡ್ರಿಗಸ್, ಕಾರ್ಯದರ್ಶಿ ಗೀತಾ ಶೇಖರ್, ಗೃಹ ರಕ್ಷಕದಳದ ಪ್ರಭಾರ ಘಟಕಾಧಿಕಾರಿ ದಿನೇಶ್ ಬಿ., ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನಾಕ್ ಮತ್ತಿತರರು ಉಪಸ್ಥಿತರಿದ್ದರು.
ಜಲಾವೃತ ಮನೆಗೂ ಪರಿಹಾರ
24 ಗಂಟೆ ಜಲಾವೃತಗೊಂಡ ಮನೆಗಳಿಗೆ ಎನ್‌ಡಿಆರ್‌ಎಫ್‌ನಿಂದ 10 ಸಾವಿರ ರೂಪಾಯಿ ಪರಿಹಾರ ದೊರೆಯಲಿದೆ. ಅಲ್ಲದೇ, ಸಂಪೂರ್ಣ ನಾಶವಾದ ಮನೆಗಳಿಗೆ 1.20 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿಯವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.