ನಮ್ಮೊಂದಿಗೆ ಸಂಪರ್ಕ ಸಾಧಿಸಿ

ರಾಜಕೀಯ

ಸೆಪ್ಟೆಂಬರ್‌ನಿಂದ ಪೋಡಿ ಅಭಿಯಾನ: ಕೃಷ್ಣ ಬೈರೇಗೌಡ

Published

on

ಬೆಂಗಳೂರು: ‘ಸೆಪ್ಟೆಂಬರ್‌ ತಿಂಗಳಿನಿಂದ ಪೋಡಿ ಅಭಿಯಾನಕ್ಕೆ ಚಾಲನೆ ನೀಡಲಾಗುವುದು’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಬೆಂಗಳೂರು ವಿಭಾಗದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾಗುವಳಿ ಮಾಡುವ ರೈತರಿಗೆ ಮಂಜೂರಾಗಿರುವ ಲಕ್ಷಾಂತರ ಪ್ರಕರಣಗಳಲ್ಲಿ ಹಲವು ವರ್ಷಗಳಿಂದ ಪೋಡಿ ದುರಸ್ತಿ ಆಗಿಲ್ಲ. ಯಾರಿಗೆ ಪೋಡಿ ಮಾಡಿಕೊಡಲು ಸಾಧ್ಯವೊ ಅವರಿಗೆಲ್ಲ ಮಾಡಿಕೊಡಲೇಬೇಕೆಂದು ಪ್ರಾಯೋಗಿಕವಾಗಿ ತಂತ್ರಾಂಶ ಸಿದ್ಧಪಡಿಸಲಾಗಿದೆ’ ಎಂದರು.‌

 

Karnataka Cabinet Reshuffle: ಸಂಪುಟ ಪುನರ್‌ ರಚನೆಗೆ ‘ಕೈ’ ವರಿಷ್ಠರ ಚಿಂತನೆ?

 

‘ಡಿಜಿಟಲ್‌ ಆ್ಯಪ್ ಮೂಲಕ ಪೋಡಿ ದುರಸ್ತಿಗೆ ಚಾಲನೆ ನೀಡಲು ಉದ್ದೇಶಿಸಲಾಗಿದೆ. ಹಾಸನದಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ಈ ಯೋಜನೆ ನಡೆಯುತ್ತಿದೆ’ ಎಂದರು.

 

‘ಪ್ರಕರಣಗಳನ್ನು ಇತ್ಯರ್ಥಪಡಿಸಲು ಕಾನೂನು ರೂಪಿಸಿದರೂ, ಅಧಿಕಾರಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ಜನರಿಗೆ ಕಿರಿಕಿರಿ ಮಾಡುತ್ತಿದ್ದಾರೆ. ಕೆಲವೆಡೆ 50 ಎಕರೆ ಪೋಡಿ ಮಾಡಿಕೊಡಿ ಎಂದರೆ 100 ಎಕರೆ ಮಾಡಿಕೊಟ್ಟಿದ್ದಾರೆ. ರೈತನೊಬ್ಬ ತನ್ನ ಸಾಗುವಳಿ ಭೂಮಿಗೆ ದಾಖಲೆಗಳನ್ನು ಮಾಡಿಕೊಳ್ಳಲು ಅಲೆದಾಡಬೇಕಿದೆ. ಇದಕ್ಕೆ ಅಂತ್ಯ ಹಾಡುವ ‌ಉದ್ದೇಶದಿಂದ ಪೋಡಿ ಅಭಿಯಾನ ಆರಂಭಿಸುತ್ತೇವೆ. ಕಾನೂನಿನ ಚೌಕಟ್ಟಿನಡಿ ಅರ್ಜಿಗಳನ್ನು ವಿಲೇವಾರಿ ಮಾಡದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಸೆಪ್ಟೆಂಬರ್‌ನಲ್ಲಿ ಒತ್ತುವರಿ ತೆರವು: ‘ಲ್ಯಾಂಡ್ ಬೀಟ್‌ ಆ್ಯಪ್ ಆಧರಿಸಿ ಸೆಪ್ಟೆಂಬರ್‌ ತಿಂಗಳಿನಿಂದ ಭೂ ಒತ್ತುವರಿ ತೆರವು ಕಾರ್ಯಾಚರಣೆಗೆ ಚಾಲನೆ ನೀಡಲಾಗುವುದು’ ಎಂದು ಸಚಿವರು ತಿಳಿಸಿದರು.

‘ರಾಜ್ಯದಾದ್ಯಂತ 1.41 ಕೋಟಿ ಎಕರೆ ಸರ್ಕಾರಿ ಜಮೀನಿದೆ ಎಂಬುದು ಲ್ಯಾಂಡ್‌ ಬೀಟ್‌ ಆ್ಯಪ್‌ನಿಂದ ಗೊತ್ತಾಗಿದೆ. ಗ್ರಾಮ ಆಡಳಿತಾಧಿಕಾರಿಗಳ ಮೂಲಕ ಸರ್ಕಾರಿ ಜಮೀನನ್ನು ಈ ಆ್ಯಪ್‌ನಲ್ಲಿ ಅಪ್ಲೋಡ್‌ ಮಾಡಲು ಹೇಳಿದ್ದೆವು. ಅದು ಅಪ್ಲೋಡ್‌ ಆದ ಬಳಿಕ ಈ ಲೆಕ್ಕ ಸಿಕ್ಕಿದೆ. ಜಿಲ್ಲಾವಾರು, ತಾಲ್ಲೂಕುವಾರು ಹಾಗೂ ಗ್ರಾಮವಾರು ಸರ್ವೇ ನಂಬರ್, ಲೋಕೇಷನ್ ಮತ್ತು ವಿಸ್ತೀಣದ ಮಾಹಿತಿ ಈಗ ಲಭ್ಯವಿದೆ’ ಎಂದರು.

 

 

ಆಧಾರ್‌ ಜೋಡಣೆ ಆಗಸ್ಟ್‌ಗೆ ಮುಕ್ತಾಯ: ‘ರಾಜ್ಯದಲ್ಲಿ 4.8 ಕೋಟಿ ಜಮೀನಿನ ಮಾಲೀಕತ್ವವಿದೆ. ಈವರೆಗೆ 2.68 ಕೋಟಿ ರೈತರ ಪಹಣಿ‌ಗೆ ಆಧಾರ್‌ ಜೋಡಣೆ ಪೂರ್ಣವಾಗಿದೆ. ಆಗಸ್ಟ್‌ ಅಂತ್ಯದೊಳಗೆ ಈ ಕೆಲಸ ಪೂರ್ಣಗೊಳಿಸಲಾಗುವುದು’ ಎಂದರು.

 

 

 

‘ಆಧಾರ್‌ ಜೋಡಣೆ ಮುಗಿಯುವುದರೊಳಗೆ 3 ಲಕ್ಷದಿಂದ 3.50 ಲಕ್ಷ ಹೆಚ್ಚುವರಿ ಸರ್ಕಾರಿ ಭೂಮಿ ಲೆಕ್ಕಕ್ಕೆ ಸಿಗುವ ಸಾಧ್ಯತೆಯಿದೆ’ ಎಂದೂ ಅವರು ವಿವರಿಸಿದರು.

 

 

Continue Reading
Click to comment

Leave a Reply

Your email address will not be published. Required fields are marked *

Advertisement