Published
4 months agoon
By
Akkare News
“ರೈತರ ಪ್ರತಿಭಟನೆ ಕುರಿತು ಬಿಜೆಪಿ ಸಂಸದೆ ಕಂಗನಾ ರಣಾವತ್ ನೀಡಿರುವ ಹೇಳಿಕೆ ಪಕ್ಷದ ನಿಲುವು ಅಲ್ಲ. ಕಂಗನಾ ರಣಾವತ್ ನೀಡಿರುವ ಹೇಳಿಕೆಯನ್ನು ಭಾರತೀಯ ಜನತಾ ಪಕ್ಷ ಒಪ್ಪುವುದಿಲ್ಲ. ಬಿಜೆಪಿಯ ನೀತಿ ವಿಷಯಗಳ ಬಗ್ಗೆ ಮಾತನಾಡಲು ಕಂಗನಾ ಅವರಿಗೆ ಅನುಮತಿ ಇಲ್ಲ ಅಥವಾ ಹಾಗೆ ಮಾಡಲು ಅವರಿಗೆ ಅಧಿಕಾರವಿಲ್ಲ” ಎಂದು ಬಿಜೆಪಿ ಹೇಳಿಕೆಯಲ್ಲಿ ತಿಳಿಸಿದೆ.
ಭವಿಷ್ಯದಲ್ಲಿ ಇಂತಹ ಹೇಳಿಕೆಗಳನ್ನು ನೀಡದಂತೆ ಬಿಜೆಪಿಯು ಕಂಗನಾ ರಣಾವತ್‌ಗೆ ನಿರ್ದೇಶನ ನೀಡಿದೆ. ಭಾರತೀಯ ಜನತಾ ಪಕ್ಷವು “ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಔರ್ ಸಬ್ಕಾ ಪ್ರಯಾಸ್” ಧ್ಯೇಯವಾಕ್ಯದಂತೆ ಸಾಮಾಜಿಕ ಸಾಮರಸ್ಯಕ್ಕೆ ಬದ್ಧವಾಗಿದೆ ಎಂದಿದೆ.
ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಬಲವಾದ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ರೈತರ ಪ್ರತಿಭಟನೆಯು ಬಾಂಗ್ಲಾದೇಶದಂತಹ ಪರಿಸ್ಥಿತಿಗೆ ಕಾರಣವಾಗುತಿತ್ತು ಎಂದು ಕಂಗನಾ ರಣಾವತ್ ಹೇಳಿದ್ದರು. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.
ರೈತರ ಪ್ರತಿಭಟನೆಯ ಕುರಿತು ಹೇಳಿಕೆ ನೀಡಿ ಕಂಗನಾ ರಣಾವತ್ ವಿವಾದಕ್ಕೆ ಒಳಗಾಗಿದ್ದು ಇದೇ ಮೊದಲಲ್ಲ. 2020-21ರಲ್ಲಿ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಆಗ ಅದರಲ್ಲಿ ಭಾಗವಹಿಸಿದ್ದ ವೃದ್ದ ಮಹಿಳೆಯೊಬ್ಬರನ್ನು ಶಾಹೀನ್ ಭಾಗ್ ಸಿಎಎ ವಿರೋಧಿ ಹೋರಾಟದ ಬಿಲ್ಕೀಸ್ ಬಾನು ಅಂದುಕೊಂಡಿದ್ದ ಕಂಗನಾ “ಈ ಮಹಿಳೆ 100 ರೂಪಾಯಿಗೆ” ಸಿಗ್ತಾರೆ ಎಂದಿದ್ದರು. ಈ ಹೇಳಿಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಹಿಮಾಚಲ ಪ್ರದೇಶದ ಮಂಡಿಯಿಂದ ಸಂಸದೆಯಾಗಿ ಆಯ್ಕೆಯಾದ ಕೆಲವೇ ದಿನಗಳಲ್ಲಿ, ಅಂದರೆ ಜೂನ್ 6, 2024 ರಂದು ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಿಐಎಸ್ಎಫ್ ಸಿಬ್ಬಂದಿ ಕಂಗನಾ ರಣಾವತ್‌ಗೆ ಕಪಾಳಮೋಕ್ಷ ಮಾಡಿದ್ದರು. ರೈತ ಹೋರಾಟದ ಸಮಯದಲ್ಲಿ ಮಹಿಳೆಯರ ಬಗ್ಗೆ ತುಚ್ಚವಾಗಿ ಮಾತನಾಡಿದ್ದಕ್ಕೆ ಕಪಾಳಮೋಕ್ಷ ಮಾಡಿದೆ. ಆ ಹೋರಾಟದಲ್ಲಿ ನನ್ನ ತಾಯಿಯೂ ಪಾಲ್ಗೊಂಡಿದ್ದರು ಎಂದು ಸಿಐಎಸ್‌ಎಫ್ ಮಹಿಳಾ ಸಿಬ್ಬಂದಿ ಹೇಳಿದ್ದರು.