Published
3 months agoon
By
Akkare Newsಪುತ್ತೂರು: ಮೆಸ್ಕಾಂ ಇಲಾಖೆಯಲ್ಲಿ ಖಾಲಿ ಇರುವ ಪವರ್ಮ್ಯಾನ್ (ಲೈನ್ ಮ್ಯಾನ್) ಹುದ್ದೆಯನ್ನು ಭರ್ತಿಗೊಳಿಸಲು ಸರಕಾರ ಏಕಕಾಲದಲ್ಲಿ ಸಂದರ್ಶನ ನಡೆಸಬೇಕು ಮತ್ತು ಸ್ಥಳೀಯರಿಗೆ ಆಧ್ಯತೆಯನ್ನು ನೀಡಬೇಕು ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಅವರು ಇಂಧನ ಸಚಿವ ಕೆ ಜೆ ಜಾರ್ಜ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಶುಕ್ರವಾರ ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾದ ಶಾಸಕರು ಪವರ್ಮ್ಯಾನ್ ನೇಮಕಾತಿ ವಿಚಾರದಲ್ಲಿ ಸಚಿವರ ಜೊತೆ ಸುದೀರ್ಘ ಚರ್ಚೆ ನಡೆಸಿದರು.
ಪುತ್ತೂರಿನಲ್ಲಿ ಪವರ್ ಮ್ಯಾನ್ಗಳ ಕೊರತೆ ಇದೆ. ಮಳೆಗಾಲದಲ್ಲಿ ಇದು ಗಂಭೀರ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಪವರ್ ಮ್ಯಾನ್ಗಳ ಕೊರತೆಯಿಂದ ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಹಲವು ವರ್ಷಗಳಿಂದ ಪವರ್ ಮ್ಯಾನ್ ಹುದ್ದೆಯನ್ನು ಭರ್ತಿ ಮಾಡದೇ ಇರುವುರದಿಂದ ಸರಕಾರ ತಕ್ಷಣ ಪವರ್ಮ್ಯಾನ್ಗಳ ನೇಮಕಾತಿಯನ್ನು ಮಾಡಬೇಕು ಎಂದು ಆಗ್ರಹಿಸಿದರು.
ಏಕಕಾಲದಲ್ಲಿ ಸಂದರ್ಶನ ನಡೆಸಿ
ರಾಜ್ಯಾದ್ಯಂತ ಏಕಕಾಲದಲ್ಲಿ ಪವರ್ಮ್ಯಾನ್ ಹುದ್ದೆಗೆ ಸಂದರ್ಶನ ನಡೆಸಬೇಕು. ಆಯಾ ಜಿಲ್ಲೆಯ ಆಕಾಂಕ್ಷಿಗಳು ಆಯಾ ಜಿಲ್ಲೆಯಲ್ಲಿ ಸಂದರ್ಶನಕ್ಕೆ ಹಾಜರಾಗುವುದು ಮತ್ತು ಸ್ಥಳೀಯರಿಗೆ ಉದ್ಯೋಗ ದೊರೆಯುವಂತಾಗಬೇಕು. ಬೇರೆ ಬೇರೆ ಜಿಲ್ಲೆಗಳಿಂದ ಸಂದರ್ಶನಕ್ಕೆ ಬಂದವರು ಕರಾವಳಿ ಭಾಗದಲ್ಲಿ ಒಂದೆರಡು ವರ್ಷ ಸೇವೆ ಸಲ್ಲಿಸಿ ಆ ಬಳಿಕ ಟ್ರಾನ್ಸ್ಫರ್ ಪಡೆದು ತಮ್ಮ ಜಿಲ್ಲೆಘಳಿಗೆ ತೆರಳುತ್ತಾರೆ ಈ ಕಾರಣಕ್ಕೆ ಪವರ್ ಮ್ಯಾನ್ಗಳ ಸಮಸ್ಯೆ ಉಂಟಾಗುತ್ತದೆ ಎಂದು ಸಚಿವರಲ್ಲಿ ತಿಳಿಸಿದ ಶಾಸಕರು ಆಯಾ ಜಿಲ್ಲೆಯ ಆಕಾಂಕ್ಷಿಗಳಿಗೆ ಅವರದೇ ಜಿಲ್ಲೆಯಲ್ಲಿ ಉದ್ಯೋಗ ದೊರಕಿಸುವಂತೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಪುತ್ತೂರಿನಲ್ಲಿ ಕಂಬ ಹತ್ತುವ ತರಬೇತಿ
ಮೆಸ್ಕಾಂ ಪವರ್ಮ್ಯಾನ್ ಗಳ ಆಯ್ಕೆಗಾಗಿ ವಿದ್ಯುತ್ ಕಂಬ ಹತ್ತುವ ತರಬೇತಿಯನ್ನು ಪುತ್ತೂರು ಶಾಸಕರು ತಮ್ಮ ರೈ ಚಾರಿಟೇಬಲ್ ಟ್ರಸ್ಟ್ ಮೂಲಕ ಆಯೋಜನೆ ಮಾಡಿದ್ದು ಈಗಾಗಲೇ ಸುಮಾರು ೪೦೦ ಮಿಕ್ಕಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ತರಬೇತಿ ನಡೆಯಲಿದೆ. ತರಬೇತಿಯಲ್ಲಿ ಆಯ್ಕೆಯಾದ ಅರ್ಹ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಲು ಅರ್ಹತೆಯನ್ನು ಪಡೆಯಲಿದ್ದಾರೆ. ಮುಂದಿನ ವಾರ ಕಂಬ ಹತ್ತುವ ತರಬೇತಿ ನಡೆಯಲಿದೆ.
‘
ಮೆಸ್ಕಾಂ ಪವರ್ಮೆನ್ ಹುದ್ದೆ ಖಾಲಿ ಇದ್ದು ಇದರ ನೇಮಕಾತಿ ವೇಳೇ ಸ್ಥಳೀಯರಿಗೆ ಆಧ್ಯತೆಯನ್ನು ನೀಡಬೇಕು. ಏಕಕಾಲದಲ್ಲಿ ರಾಜ್ಯಾದ್ಯಂತ ಸಂದರ್ಶನ ನಡೆಸಿದರೆ ಸ್ಥಳೀಯರಿಗೆ ಅವಕಾಶಗಳು ದೊರೆಯುತ್ತದೆ ಈ ನಿಟ್ಟಿನಲ್ಲಿ ಇಂಧನ ಸಚಿವರ ಜೊತೆ ಚರ್ಚೆ ನಡೆಸಿದ್ದೇನೆ. ಹೊರ ಜಿಲ್ಲೆಗಳಿಂದ ಬರುವ ಪವರ್ಮ್ಯಾನ್ಗಳು ಸ್ವಲ್ಪ ದಿನ ಇಲ್ಲಿ ಕೆಲಸ ಮಾಡಿ ಬಳಿಕ ವರ್ಗಾವಣೆ ಪಡೆದು ತೆರಳುತ್ತಾರೆ ಇದರಿಂದ ನಮಗೆ ಸಮಸ್ಯೆಯಗುತ್ತದೆ. ನಮ್ಮ ಜಿಲ್ಲೆಯಲ್ಲಿ ನೂರಾರು ಮಂದಿ ಯುವಕರಿದ್ದು ಅವರಿಗೂ ಉದ್ಯೋಗ ದೊರೆಯುವಂತಾಗಲಿ ಎಂಬುದೇ ನನ್ನ ಉದ್ದೇಶವಾಗಿದೆ.